ಹುಬ್ಬಳ್ಳಿ: ವಕ್ಫ್ ಆಸ್ತಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರಣಕ್ಕಾಗಿ ಉಲ್ಟಾ ಹೊಡೆದಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗ ಒತ್ತುವರಿಯಾಗಿರುವ ವಕ್ಫ್ ಆಸ್ತಿ ರಕ್ಷಣೆ ಮಾಡುವುದಾಗಿ ಹೇಳಿದ್ದ ಅವರು ಈಗ ತದ್ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಸಿದ್ದ ರಾಮಯ್ಯ ಅವರು, ಬಿಜೆಪಿ ರಾಜಕೀಯ ಕಾರಣಗಳ ಹಿನ್ನೆಲೆ ಯಲ್ಲಿ ಈ ವಿಷಯ ವನ್ನು ಇಟ್ಟುಕೊಂಡು ಹೋರಾಡುತ್ತಿದೆ. ವಕ್ಫ್ ಆಸ್ತಿ ವಿಷಯ ನಿನ್ನೆ ಮೊನ್ನೆಯದಲ್ಲ. ಬಿಜೆಪಿ ಸರಕಾರ ಸಹಿತ ಎಲ್ಲ ಕಾಲದಲ್ಲಿಯೂ ನೋಟಿಸ್ ನೀಡಲಾಗಿದೆ. ಬಿಜೆಪಿ ತನ್ನ ಚುನಾವಣ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ರಕ್ಷಣೆಯ ಬಗ್ಗೆ ಪ್ರಸ್ತಾವ ಮಾಡಿತ್ತು ಎಂದರು.
ವಿವಾದ ಗಮನಕ್ಕೆ ಬರುತ್ತಿದ್ದಂತೆಯೇ ನೋಟಿಸ್ ಹಿಂಪಡೆಯಲಾಗಿದೆ. ಬಿಜೆಪಿ ಅವ ಧಿಯಲ್ಲಿ 216 ಪ್ರಕರಣಗಳಲ್ಲಿ ನೋಟಿಸ್ ಕೊಡಲಾಗಿತ್ತು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಎಚ್.ಡಿ. ಕುಮಾರಸ್ವಾಮಿ ಇದ್ದಾಗ ಏಕೆ ನೋಟಿಸ್ ಕೊಟ್ಟಿದ್ದರು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಿಜೆಪಿಯ ಈ ಡಬಲ್ ಗೇಮ್ ವಿಷಯವನ್ನು ಜನರಿಗೆ ತಲುಪಿಸುತ್ತಿದ್ದೇವೆ ಎಂದರು.
ಸಚಿವರಾದ ಎಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ ಜತೆ ಈಗಾಗಲೇ ಸಭೆ ನಡೆಸಿ ನೋಟಿಸ್ ನೀಡಿದ್ದಲ್ಲಿ ವಾಪಸ್ ಪಡೆಯಬೇಕು ಅಥವಾ ವಿಚಾರಣೆ ನಡೆಸದೆ ಯಾವುದೇ ಪಹಣಿ ಮಾರ್ಪಾಡು ಮಾಡಿದ್ದರೆ ಅದನ್ನು ರದ್ದುಪಡಿಸಬೇಕು; ಯಾವುದೇ ಕಾರಣಕ್ಕೂ ರೈತರನ್ನು, ಹಾಗೆಯೇ ಮುಸ್ಲಿಂ, ಹಿಂದೂ, ಕ್ರೈಸ್ತ ಯಾರೇ ಆಗಿರಲಿ ಒಕ್ಕಲೆಬ್ಬಿಸಬಾರದು ಎಂದು ಸೂಚಿಸಲಾಗಿದೆ ಎಂದರು.
ಸಿಎಂ ಹೇಳಿದ್ದೇನು?
-ರಾಜಕೀಯ ಕಾರಣಕ್ಕಾಗಿಯೇ ಬಿಜೆಪಿಯಿಂದ ವಕ್ಫ್ ವಿಷಯ ಮುಂದಿಟ್ಟುಕೊಂಡು ಹೋರಾಟ
-ಬಿಜೆಪಿ ಸರಕಾರ ಸೇರಿ ಎಲ್ಲರ ಅವಧಿ ಯಲ್ಲೂ ನೋಟಿಸ್ ಜಾರಿ ಮಾಡಲಾಗಿತ್ತು
-ಬಿಜೆಪಿ ಸರಕಾರದ ಅವಧಿಯಲ್ಲೇ 216 ಪ್ರಕರಣಗಳಲ್ಲಿ ನೋಟಿಸ್
-ವಕ್ಫ್ ಆಸ್ತಿ ನೋಟಿಸ್ ವಾಪಸ್ ಮಾಡಲು ಈಗಾಗಲೇ ಕ್ರಮ
-ಪಹಣಿ ಮಾರ್ಪಾಡು ಮಾಡಿದ್ದರೆ ರದ್ದು ಮಾಡಲು ಸರಕಾರ ಆದೇಶ
-ಯಾವುದೇ ಸಮುದಾಯದ ರೈತರ ಒಕ್ಕಲೆಬ್ಬಿಸದಂತೆಯೂ ಮುನ್ನೆಚ್ಚರಿಕೆ