ರಾಮನಗರ: ಆಯುರ್ವೇದ ಚಿಕಿತ್ಸೆ ಬಗ್ಗೆ ತಾತ್ಸರ ಬೇಡ. ಅದು ದೇಶೀಯ ಚಿಕಿತ್ಸಾ ಪದ್ಧತಿಯಾಗಿದ್ದು ಅನೇಕ ಕಾಯಿಲೆಗಳನ್ನು ಗುಣಪಡಿಸುವ ಪರಿಣಾಮಕಾರಿ ಔಷಧಗಳು ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿವೆ ಎಂದು ಸುಗ್ಗನಹಳ್ಳಿ ಗ್ರಾಪಂ ಅಧ್ಯಕ್ಷೆ ಲಲಿತಾ ತಿಳಿಸಿದರು.
ತಾಲೂಕಿನ ಬೆಜ್ಜರಹಳ್ಳಿ ಕಟ್ಟೆ ಬಳಿ ಇರುವ ಆಯುಷ್ ಇಲಾಖೆ ತರಬೇತಿ ಕೇಂದ್ರದಲ್ಲಿ ಇಲಾಖೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರವೇ ಈ ಪದ್ಧತಿಯನ್ನು ಆಯುಷ್ ಇಲಾಖೆ ಮೂಲಕ ಜಾರಿ ಮಾಡಿದ್ದು ಸದುಪಯೋಗ ಮಾಡಿಕೊಳ್ಳಬೇಕೆಂದರು.
ಆಯುರ್ವೇದ ಔಷಧ ದೇಹದ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ನೈಸರ್ಗಿಕ ವಾಗಿ ಉತ್ತಮ ಚಿಕಿತ್ಸೆ ದೊರೆಯುವ ಪದ್ಧತಿ ಇದಾಗಿದೆ ಎಂದರು.
ಪ್ರತಿಯೊಬ್ಬರೂ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಜಾಣತನ. ಗ್ರಾಮೀಣ ಭಾಗದಲ್ಲಿ ಹೀಗೆ ಏರ್ಪಡುವ ಶಿಬಿರಗಳ ಉಪಯೋಗವನ್ನು ಗ್ರಾಮಸ್ಥರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸರ್ಕಾರಿ ಆಸ್ಪತ್ರೆಗಳು ಎಂದೂ ಮೂಗು ಮುರಿಯುವುದು ಬೇಡ. ಉತ್ತಮ ಸೇವೆ ಅಲ್ಲಿಯೂ ಲಭಿಸುತ್ತಿದೆ ಎಂದರು.
ಸುಗ್ಗನಹಳ್ಳಿ ಮತ್ತು ಹರಿಸಂದ್ರ ಗ್ರಾಪಂಗಳ ವಿವಿಧ ಗ್ರಾಮದ ನಾಗರಿಕರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ಶಿಬಿರದ ಪ್ರಯೋಜನ ಪಡೆದರು. ಅಗತ್ಯವಿರುವವರಿಗೆ ಉಚಿತವಾಗಿ ಔಷಧಿಗಳನ್ನೂ ವಿತರಿಸಲಾಯಿತು.
ಶಿಬಿರದಲ್ಲಿ ಡಾ.ಲಿಂಗರಾಜು, ಡಾ.ಅಶ್ವತ್ಥನಾರಾಯಣ, ಗ್ರಾಪಂ ಉಪಾಧ್ಯಕ್ಷ ಮಹದೇವಯ್ಯ, ಸದಸ್ಯರಾದ ಮುಕುಂದ, ಬೈರಪ್ಪ ಮುಖಂಡರಾದ ರಾಮಕೃಷ್ಣಯ್ಯ, ವೆಂಕಟರಮಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.