Advertisement

ಅಯೋಧ್ಯೆ ಭೂಮಿ ಪೂಜೆ ಬಗ್ಗೆ ಮಾತಾಡಬೇಡಿ; ಪಾಕಿಸ್ಥಾನಕ್ಕೆ ಭಾರತದ ತಾಕೀತು

09:57 AM Aug 07, 2020 | mahesh |

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದನ್ನು ತೀವ್ರವಾಗಿ ಟೀಕಿಸಿರುವ ಪಾಕಿಸ್ಥಾನವನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ. ಗುರುವಾರ ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ, ಪಾಕಿಸ್ಥಾನದ ಇಸ್ಲಾಮಿಕ್‌ ರಿಪಬ್ಲಿಕ್‌ ಪಕ್ಷದ ಪತ್ರಿಕಾ ಪ್ರಕಟನೆಯನ್ನು ಓದಿದ್ದೇವೆ. ರಾಮಮಂದಿರ ನಿರ್ಮಾಣ, ಭಾರತದ ಆಂತರಿಕ ವಿಚಾರ. ಇದರಲ್ಲಿ ಮೂಗು ತೂರಿಸುವ ಅವಶ್ಯಕತೆ ಪಾಕಿಸ್ಥಾನಕ್ಕಿಲ್ಲ. ಅಲ್ಲದೆ, ಅಂಥ ವಿಚಾರಗಳನ್ನು ಭಾರತದಲ್ಲಿ ಅಶಾಂತಿ ಹರಡುವಂತೆ ಬಳಸುವುದನ್ನು ಭಾರತ ನಿರ್ಬಂಧಿಸುತ್ತದೆ” ಎಂದು ಹೇಳಿದ್ದಾರೆ.

Advertisement

ಪಾಕಿಸ್ಥಾನದ ವಿರುದ್ಧ ವಾಗ್ಧಾಳಿ ನಡೆಸಿದ ಅವರು, “”ರಾಮ ಮಂದಿರದ ಶಿಲಾನ್ಯಾಸವನ್ನು ಟೀಕಿಸಿರುವ ಪಾಕಿಸ್ಥಾನದ ಕ್ರಮ ಅಚ್ಚರಿಯ ನಡೆಯೇನಲ್ಲ. ಭಯೋತ್ಪಾದನೆಯಂಥ ಹೀನ ಕೃತ್ಯಗಳನ್ನು ನಡೆಸುವ ದೇಶದಿಂದ, ತನ್ನಲ್ಲಿರುವ ಅಲ್ಪಸಂಖ್ಯಾತರನ್ನು ಹೀನಾಯವಾಗಿ ನಡೆಸಿಕೊಳ್ಳುವ ದೇಶದಿಂದ ನಾವು ಇದನ್ನು ನಿರೀಕ್ಷಿಸಿದ್ದೆವು” ಎಂದು ಅವರು ತಿಳಿಸಿದ್ದಾರೆ.

ಹನುಮಾನ್‌ ಗಢಿಯಲ್ಲಿ ಭಕ್ತರ ಪ್ರವಾಹ
ಅಯೋಧ್ಯೆಯಲ್ಲಿ ಬುಧವಾರದಂದು, ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದ ಮರುದಿನ ಅಯೋಧ್ಯೆಯಲ್ಲಿರುವ ಹನುಮಾನ್‌ ಗಢಿಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ಅಲ್ಲಿರುವ ಹನುಮಾನ್‌ ದೇಗುಲದಲ್ಲಿ ಪೂಜೆ, ಪುನಸ್ಕಾರ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಅಯೋಧ್ಯೆಗೆ ಆಗಮಿಸಿದ ಜನರು, ಮೊದಲು ಸರಯೂ ನದಿಯಲ್ಲಿ ಮಿಂದು, ಮಡಿ ಬಟ್ಟೆಗಳನ್ನುಟ್ಟು ನೇರವಾಗಿ ಹನುಮಾನ್‌ ಗಢಿಗೆ ತೆರಳಿ ಅಲ್ಲಿ ಹನುಮಾನ್‌ ದೇಗುಲದಲ್ಲಿ ಪೂಜೆ ಸಲ್ಲಿಸಿದರು.

ಸಹಜತೆಯತ್ತ ಅಯೋಧ್ಯೆ
ಪ್ರಧಾನಿಯವರ ಭೂಮಿ ಪೂಜೆ ಹಿನ್ನೆಲೆಯಲ್ಲಿ ಭಾರೀ ಬಿಗಿ ಬಂದೋಬಸ್ತ್ಗೆ ಒಳಗಾಗಿದ್ದ ಅಯೋಧ್ಯೆಯಲ್ಲಿ ಜನಜೀವನ ನಿಧಾನವಾಗಿ ಸಹಜತೆಯತ್ತ ಮರಳುತ್ತಿದೆ. ಹನುಮಾನ್‌ ಗಢಿಯ ಆಜುಬಾಜಿನಲ್ಲಿರುವ ಅಂಗಡಿಗಳು ಗುರುವಾರ ತೆರೆಯಲ್ಪಟ್ಟಿದ್ದವು. ಅಂಗಡಿ ಮಾಲಕರು, ಗುರುವಾರ ವ್ಯಾಪಕವಾಗಿ ಹರಿದುಬಂದ ಭಕ್ತಾದಿಗಳಿಗೆ ಪ್ರಸಾದ ಮಾರಾಟ ಮಾಡಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪೂಜಾ ಸಾಮಗ್ರಿ ಮಾರಾಟಗಾರ ಅಮಿತ್‌ ಕುಮಾರ್‌, ಕಳೆದೈದು ದಿನದಿಂದ ಅಯೋಧ್ಯೆಯಲ್ಲಿ ಭಾರೀ ಬಿಗಿ ಬಂದೋಬಸ್ತ್ ಇದ್ದಿದ್ದರಿಂದ ತಾವು ಅಂಗಡಿಯನ್ನು ತೆರೆದಿರಲಿಲ್ಲ. ಭಕ್ತಾದಿಗಳು ಹೆಚ್ಚಾಗಿ ಬರುತ್ತಿರುವುದನ್ನು ನೋಡಿ ಅಂಗಡಿ ತೆರೆದಿದ್ದೇನೆ ಎಂದರು.

ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ, ದೇಶದ ಇತಿಹಾಸದಲ್ಲೇ ಅತ್ಯಂತ ಮಹತ್ವಪೂರ್ಣ ವಿದ್ಯಮಾನ. ಹಿರಿಯರ ಕಾಲದಿಂದಲೂ ಇಂಥ ದಿನವನ್ನು ನಿರೀಕ್ಷೆ ಮಾಡಿದ್ದರೂ ನೆರವೇರಲಿಲ್ಲ. ನಮ್ಮ ಕಾಲದಲ್ಲಿ ಅದು ನೆರವೇರಿತು. ಆ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದೇ ನಮ್ಮ ಪುಣ್ಯ.
ಎಸ್‌.ಕೆ.ಮುದ್ದಿನ್‌, ಎಂಆರ್‌ಎಂ ರಾಷ್ಟ್ರೀಯ ಸಂಚಾಲಕ

Advertisement
Advertisement

Udayavani is now on Telegram. Click here to join our channel and stay updated with the latest news.

Next