ಸಿದ್ದಾಪುರ: ಶಿಕ್ಷಣ ಕೊಡುವುದು ಸರಕಾರದ ಹೊಣೆ. ಆದರೆ ಸರಕಾರದ ನಿಲುವು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನ ದಿಂದ ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಈ ಮೂಲಕ ಸರಕಾರ ಬಡವರ ಶಿಕ್ಷಣ ಹಕ್ಕು ಕಸಿದುಕೊಂಡು ಗುಲಾ ಮರನ್ನಾಗಿಸಲು ಹೊರಡುತ್ತಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಸತೀಶ ಕಿಣಿ ಬೆಳ್ವೆ ಹೇಳಿದರು.
ಅವರು ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಅಮಾಸೆಬೈಲು ಗ್ರಾಮ ಪಂಚಾಯತ್‌ನಲ್ಲಿ ಗ್ರಾಮೀಣ ಪ್ರದೇಶದ ಶೂನ್ಯ ಶಿಕ್ಷಕರಿರುವ ಸರ ಕಾರಿ ಪ್ರಾಥಮಿಕ ಶಾಲೆಗಳಿಗೆ ಖಾಯಂ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಮಂಗಳವಾರ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದರು.
ನಕ್ಸಲ್ ಪೀಡಿತ ಪ್ರದೇಶಗಳನ್ನೊಳ ಗೊಂಡ ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಶಾಲೆಗಳು ಶೂನ್ಯ ಶಿಕ್ಷಕ ಸಮಸ್ಯೆ ಎದುರಿಸುತ್ತಿವೆ. ಬೈಂದೂರು ಭಾಗದಲ್ಲಿ 19ಕ್ಕೂ ಹೆಚ್ಚು ಇಂತಹ ಶಾಲೆಗಳಿವೆ. ಕೌನ್ಸೆಲಿಂಗ್ ವೇಳೆ ಸರಕಾರ ಶೂನ್ಯ ಶಿಕ್ಷಕ ಶಾಲೆಗಳಿಗೆ ಮೊದಲ ಪ್ರಾಶಸ್ತ್ಯ ಕೊಡಬೇಕು. ಇಲ್ಲ ದಿದ್ದರೆ ಅಧಿಕಾರಿಗಳು ಹಾಗೂ ಇಲಾ ಖೆಯ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಸ್‌ಡಿಎಂಸಿಯ ಪರವಾಗಿ ಸತೀಶ ಪೂಜಾರಿ ನಡಂಬೂರು, ಕರುಣಾಕರ ಶೆಟ್ಟಿಗಾರ್ ಬಳ್ಮನೆ, ಕೇಶವ ಆಚಾರ್ಯ ಕೆಲಾ ಹಾಗೂ ಶಿಕ್ಷಣ ಇಲಾಖೆಯ ಪರವಾಗಿ ಹಾಲಾಡಿ ವೃತ್ತ ಶಿಕ್ಷಣ ಸಂಯೋಜಕ ಶೇಖರ ಯು., ಸಿಆರ್‌ಪಿ ಪ್ರಭಾಕರ ಶೆಟ್ಟಿ ಮಾತನಾಡಿದರು.
ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಸಂತೋಷ ಕುಮಾರ ಶೆಟ್ಟಿ ಬಲಾಡಿ, ರೈತ ಮುಖಂಡರಾದ ಸದಾನಂದ ಶೆಟ್ಟಿ ಕೆದೂರು, ಮಲ್ಯಾಡಿ ಶಿವರಾಮ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಅಶೋಕ ಕುಮಾರ್ ಶೆಟ್ಟಿ ಚೋರಾಡಿ, ಕಿರಣ್ ಹೆಗ್ಡೆ ಅಂಪಾರು, ವಸುಂಧರ ಹೆಗ್ಡೆ ತೊಂಭತ್ತು, ಉದಯಕುಮಾರ ಶೆಟ್ಟಿ ಶೇಡಿಮನೆ, ಕುಶಲ ತೋತಾರ್ ಜಡ್ಡಿನಗದ್ದೆ, ಟಿ. ಚಂದ್ರಶೇಖರ ಶೆಟ್ಟಿ ತೊಂಬಟ್ಟು, ಕಿರಣ್ ಶೆಟ್ಟಿ ನರಸೀಪುರ, ಅಜೀತ್ ಕುಮಾರ ಶೆಟ್ಟಿ ರಟ್ಟಾಡಿ, ಶ್ರೀಧರ ಶೆಟ್ಟಿ ಕಿಬೈಲ್, ನಾಗರಾಜ ಶೆಟ್ಟಿ ಕುದ್ರುಮನೆ, ಶ್ರೀನಿವಾಸ ಪೂಜಾರಿ ತೊಂಬಟ್ಟು ಉಪಸ್ಥಿತರಿದ್ದರು.
ಪ್ರಗತಿಪರ ರೈತ ನಾರಾಯಣ ರಾವ್ ಅಮಾಸೆಬೈಲು ಸ್ವಾಗತಿಸಿದರು. ರೈತ ಮುಖಂಡ ಸದಾನಂದ ಶೆಟ್ಟಿ ಕೆದೂರು ಪ್ರಸ್ತಾವನೆಗೈದರು. ರೈತ ಮುಖಂಡ ಕೃಷ್ಣ ಪೂಜಾರಿ ಕೊçಲಾಡಿ ನಿರ್ವಹಿಸಿದರು.
50ರಲ್ಲಿ 21 ಶಿಕ್ಷಕ ಹುದ್ದೆ ಖಾಲಿ
ಅಧ್ಯಕ್ಷತೆ ವಹಿಸಿದ್ದ ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆಲಾ ಮಾತನಾಡಿ, ಅಮಾಸೆಬೈಲು ನಕ್ಸಲ್ ಪೀಡಿತ ಪ್ರದೇಶಗಳನ್ನೊಳಗೊಂಡ ಗ್ರಾಮವಾಗಿದ್ದು, ಇಲ್ಲಿನ ಒಟ್ಟು 50 ಶಿಕ್ಷಕರ ಹುದ್ದೆಗಳಲ್ಲಿ 21 ಖಾಲಿ ಇವೆ. 3 ಶೂನ್ಯ ಶಿಕ್ಷಕ ಶಾಲೆಗಳಾಗಿವೆ. ಈ ಬಗ್ಗೆ 2016ರಿಂದ ಇಲಾಖೆಗೆ ಹಾಗೂ ಸರಕಾರಕ್ಕೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದರು.
ಜೀವನದ ಮೇಲೆ ಬರೆ
ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ ಹೆಗ್ಡೆ ಬಸ್ರೂರು ಮಾತನಾಡಿ, ಸರಕಾರ ರೈತರ ಹಾಗೂ ಜನಸಾಮಾನ್ಯರ ಜೀವನದ ಮೇಲೆ ಬರೆ ಎಳೆದಿವೆ. ಕಾನೂನು ಬದ್ಧವಾಗಿ ಸಿಗಬೇಕಾಗಿದ್ದ ಹಕ್ಕು ಹಾಗೂ ಸೌಲಭ್ಯಗಳನ್ನು ಕಸಿದು ದ್ರೋಹ ಮಾಡು ತ್ತಿವೆ. ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿವೆ ಎಂದರು.