Advertisement

ಖಾಕಿ ಗೌರವಿಸಿ, ಯೋಗ, ಪ್ರಾಣಾಯಾಮ ಮಾಡಿ

12:24 AM Sep 05, 2020 | mahesh |

ಹೊಸದಿಲ್ಲಿ: ನಿಮ್ಮ ವೃತ್ತಿಯನ್ನು, ಸಮ­ವಸ್ತ್ರವನ್ನು ಗೌರವಿಸಿ. ಕೆಲಸದ ಒತ್ತಡ ಹೆಚ್ಚಿದರೆ ಯೋಗ, ಪ್ರಾಣಾಯಾಮ ಮಾಡಿ. ದೇಶದ ಯುವ ಐಪಿಎಸ್‌ ಅಧಿಕಾರಿಗಳಿಗೆ ಈ ರೀತಿಯ ಸಲಹೆ ನೀಡಿರುವುದು ಪ್ರಧಾನಿ ನರೇಂದ್ರ ಮೋದಿ. ಶುಕ್ರವಾರ ಹೈದರಾಬಾದ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ನ್ಯಾಷನಲ್‌ ಪೊಲೀಸ್‌ ಅಕಾಡೆಮಿಯ ದೀಕ್ಷಂತ್‌ ಪರೇಡ್‌ ಕಾರ್ಯಕ್ರಮದಲ್ಲಿ ಐಪಿ­ಎಸ್‌ ಪ್ರೊಬೆಷನರಿಗಳನ್ನು ಉದ್ದೇಶಿಸಿ ಮಾತ­ನಾಡಿದ ಅವರು, ಯುವ ಅಧಿಕಾರಿಗಳಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ.

Advertisement

ಅನಿರೀಕ್ಷಿತವಾದದ್ದನ್ನು ಎದುರಿಸಬೇಕಾ­ದಂತಹ ವೃತ್ತಿ ನಿಮ್ಮದು. ಯಾವಾಗಲೂ ನೀವು ಅಲರ್ಟ್‌ ಆಗಿರಬೇಕಾಗುತ್ತದೆ. ಒತ್ತ­ಡವೂ ಹೆಚ್ಚಿರುತ್ತದೆ. ಹಾಗಾಗಿ ನಿಮ್ಮ ಪ್ರೀತಿ­ಪಾತ್ರರೊಂದಿಗೆ ಸಮಾಲೋಚನೆ ನಡೆಸು­ತ್ತಿದ್ದರೆ ಒಳ್ಳೆಯದು ಎಂದು ಮೋದಿ ಹೇಳಿ­ದ್ದಾರೆ. ತಮ್ಮ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಯ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಯುವಕರು ತಪ್ಪು ಹಾದಿ ಹಿಡಿಯುವುದನ್ನು ಆರಂಭಿಕ ಹಂತದಲ್ಲೇ ನಾವು ತಡೆಯಬೇಕು. ಈ ಉದ್ದೇಶಕ್ಕಾಗಿಯೇ ಆ ಪ್ರದೇಶದಲ್ಲಿ ಮಹಿಳಾ ಅಧಿಕಾರಿಗಳನ್ನು ನಿಯೋಜಿಸ­ಲಾಗಿದೆ. ಅವರು ಅಲ್ಲಿನ ಮಹಿಳೆಯರನ್ನು ಸೇರಿಸಿಕೊಂಡು ಇಂತಹ ಕೆಲಸ ಮಾಡಲು ಸಮರ್ಥರಾಗಿದ್ದಾರೆ ಎಂದು ಹೇಳಿದ್ದಾರೆ.

ಸಿಂಗಂ ಆಗಬೇಕಾಗಿಲ್ಲ
“ಸಿಂಗಂ’ನಂಥ ಸಿನಿಮಾಗಳನ್ನು ನೋಡಿದ ಮೇಲೆ ಕೆಲವು ಪೊಲೀಸ್‌ ಅಧಿಕಾರಿಗಳು ತಮ್ಮ ಬಗ್ಗೆಯೇ ಬೇರೆ ರೀತಿ ಯೋಚಿಸಲು ಆರಂಭಿಸು­ ತ್ತಾರೆ. ಅಂಥದ್ದನ್ನು ದಯವಿಟ್ಟು ಮಾಡಬೇಡಿ. ಅದರಿಂದ ಉತ್ತಮ ಕೆಲಸಗಳೂ ನಿರ್ಲಕ್ಷ್ಯಕ್ಕೊಳಗಾಬಹುದು ಎಂದು ಮೋದಿ ಹೇಳಿದ್ದಾರೆ.

ಸಲಹೆಗಳೇನು?
ಹೆಚ್ಚು ಒತ್ತಡದಲ್ಲಿ ಕಾರ್ಯನಿರ್ವಹಿಸು ವವರು ಯೋಗ ಮತ್ತು ಪ್ರಾಣಾಯಾಮದ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು.

ಕೊರೊನಾ ಲಾಕ್‌ಡೌನ್‌ನ ಸಮಯದಲ್ಲಿ ಪೊಲೀಸ್‌ ಪಡೆ ಮಾಡಿ ರುವ ಉತ್ತಮ ಕಾರ್ಯಗಳಿಂದಾಗಿ ಖಾಕಿ ಸಮವಸ್ತ್ರದ ಮಾನವೀಯ ಮುಖವು ಬಹಿರಂಗಗೊಂಡಿದೆ. ಅದು ಜನರ ಸ್ಮರಣೆಯಲ್ಲಿ ಸದಾ ಉಳಿಯಲಿದೆ.

Advertisement

ಯುವ ಅಧಿಕಾರಿಗಳಾದ ನೀವು ನಿಮ್ಮ ಸಮವಸ್ತ್ರಕ್ಕಿರುವ ಅಧಿಕಾರವನ್ನು ನೋಡುವ ಬದಲು, ಆ ಖಾಕಿ ಸಮವಸ್ತ್ರವನ್ನು ಗೌರವಿಸಿ. ಅದರ ಬಗ್ಗೆ ಹೆಮ್ಮೆಪಡಿ. ಯಾವತ್ತೂ ಆ ಖಾಕಿ ಮೇಲಿನ ಗೌರವ ಕಳೆದುಕೊಳ್ಳಬೇಡಿ.

Advertisement

Udayavani is now on Telegram. Click here to join our channel and stay updated with the latest news.

Next