ಪೂಂಚ್: ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 300 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂಬುದನ್ನು ಎದುರು ನೋಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಅಜಾದ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ 9,765 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಸಂಖ್ಯೆ ಅಲ್ಪ ಹೆಚ್ಚಳ
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ಧತಿಯ ಕೇಂದ್ರದ ನಿರ್ಧಾರವನ್ನು ಹಿಂಪಡೆಯುವ ಕುರಿತು ಮಾತನಾಡಿದ ವೇಳೆ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಪೂಂಚ್ ಜಿಲ್ಲೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಜಾದ್, ಕಲಂ 370 ರದ್ಧತಿ ವಾಪಸ್ ಪಡೆಯುವ ಬಗ್ಗೆ ಸುಪ್ರೀಂಕೋರ್ಟ್ ಮಾತ್ರ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬಹುದು ಅಥವಾ ಕಾಂಗ್ರೆಸ್ ಪಕ್ಷ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ಆದರೆ ಕಾಂಗ್ರೆಸ್ 300 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ನಂಬಿಕೆ ಇಲ್ಲ ಎಂದರು.
ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 300 ಸ್ಥಾನಗಳಲ್ಲಿ ಗೆಲುವು ಸಾಧಿಸಲಿ ಎಂಬುದಾಗಿ ಪ್ರಾರ್ಥಿಸುವುದಾಗಿ ಹೇಳಿದರು. ಆರ್ಟಿಕಲ್ 370ರ ಕುರಿತು ಕೇವಲ ಸುಪ್ರೀಂಕೋರ್ಟ್ ಮಾತ್ರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿದೆ. ಸುಪ್ರೀಂಕೋರ್ಟ್ ಹೊರತುಪಡಿಸಿ ಆಡಳಿತಾರೂಢ ಕೇಂದ್ರ ಸರ್ಕಾರ ಮಾತ್ರ 370 ರದ್ದತಿಯನ್ನು ಹಿಂಪಡೆಯಬಹುದಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆರ್ಟಿಕಲ್ 370ನ್ನು ರದ್ದುಗೊಳಿಸಿತ್ತು.
ಈಗ ಮತ್ತೆ ಹೇಗೆ ಕಲಂ 370 ರದ್ದು ಮಾಡಿರುವುದನ್ನು ಹಿಂಪಡೆಯುವುದು? ಹೀಗಾಗಿ 2024ರ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ಭರವಸೆ ನೀಡಲಾರೆ. ಅದಕ್ಕಾಗಿ ನಾನು ಕಾಂಗ್ರೆಸ್ 300 ಸ್ಥಾನಗಳಲ್ಲಿ ಗೆಲ್ಲಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗುಲಾಂ ನಬಿ ಅಜಾದ್ ಹೇಳಿದರು.