“ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಅನ್ನುವ ಗಾದೆ ಮಾತು ನಮ್ಮ ಆಹಾರ ಮತ್ತು ನಾವಾಡುವ ಮಾತಿನ ಕುರಿತು ಹೇಳುತ್ತದೆ. ಎರಡೂ ನಾಲಗೆಗೆ ಸಂಬಂಧಿಸಿದ ವಿಷಯಗಳೇ. ಯಾವ ಆಹಾರ ಆರೋಗ್ಯಕ್ಕೆ ಉತ್ತಮ?, ಯಾವ ಮಾತುಗಳು ಸಂಬಂಧಗಳಿಗೆ ಉತ್ತಮ? ಅನ್ನುವುದು ತಿಳಿದಿದ್ದರೆ ನೆಮ್ಮದಿಯಿಂದ ದಿನಗಳೆಯಲು ಸಾಧ್ಯ.
ಆರೋಗ್ಯ ಕೆಡುವುದಕ್ಕೆ ಅನೇಕ ಕಾರಣಗಳು. ಕೆಲವು ರೋಗಗಳು ಅನುವಂಶೀಯವಾಗಿ ಬಂದರೆ ಇನ್ನು ಕೆಲವು ನಮ್ಮ ದೈನಂದಿನ ಚಟುವಟಿಕೆಗಳು, ಹವ್ಯಾಸ ಹಾಗೂ ಆಹಾರ ಪದ್ಧತಿಯಿಂದ ಬರುತ್ತದೆ. ಅನುವಂಶೀಯವಾಗಿ ಬರುವುದನ್ನು ತಪ್ಪಿಸಲಾಗದು. ಆದರೆ ದಿನಚರಿ, ಆಹಾರ, ಹವ್ಯಾಸಗಳಿಂದ ಬರುವ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಸಾಧ್ಯ.
ನಾವೆಲ್ಲರೂ ನಾಲಗೆಯ ಚಪಲಕ್ಕೆ ಬಲಿಯಾಗುವವರು. ಆದರೆ ನಾಲಗೆಗೆ ರುಚಿಯಾದದ್ದು ದೇಹಕ್ಕೆ ಪಥ್ಯವಾಗಬೇಕೆಂದಿಲ್ಲ. ರುಚಿಗೆ ಮಾರು ಹೋಗಿ ಕಂಡ ಕಂಡದ್ದನ್ನೆಲ್ಲ ಮಿತಿ ಮೀರಿ ತಿಂದರೆ ಅನಾರೋಗ್ಯ ಖಂಡಿತ. ಅನೇಕ ಕಾಯಿಲೆಗಳಿಗೆ ಮೂಲವೇ ಅನಾರೋಗ್ಯಕರ ಆಹಾರ. ಬಾಲ್ಯ ದಲ್ಲಿಯೇ ಉತ್ತಮ ಆಹಾರಭ್ಯಾಸವನ್ನು ರೂಢಿಸಿಕೊಂಡರೆ ದೀರ್ಘಕಾಲ ಆರೋಗ್ಯವಂತರಾಗಿ ಇರ ಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಅಂಗಡಿ ಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ನೇತು ಹಾಕಿರುವ ರಾಸಾಯನಿಕ ಮಿಶ್ರಿತ ತಿಂಡಿ ತಿನಿಸುಗಳು ಮಕ್ಕಳನ್ನು ಆಕರ್ಷಿಸುತ್ತವೆ.
ಪೋಷಕರೂ ಯೋಚಿಸದೆ ಇದನ್ನು ಖರೀದಿಸಿ ಮಕ್ಕಳಿಗೆ ತಿನ್ನಿಸುತ್ತಾರೆ. ಮಾರ್ಗದ ಬದಿ ಯಲ್ಲಿ ಮಾರಾಟಕ್ಕಿಡುವ ಯಾವ್ಯಾವುದೋ ತೈಲದಲ್ಲಿ ಕರಿದ ತಿಂಡಿಗಳು ಆರೋಗ್ಯಕ್ಕೆ ಹಾನಿಕರ. ಬಹು ರಾಷ್ಟ್ರೀಯ ಉದ್ದಿಮೆ ಸಂಸ್ಥೆಗಳು ಗೂಡಂಗಡಿಗಳಲ್ಲೂ ಮಾರಾಟ ಮಾಡುವ ತಿಂಡಿಗಳು, ದೀರ್ಘಕಾಲ ಕೆಡದಂತೆ ರಾಸಾಯನಿಕ ಬೆರೆಸಿ ತಯಾರಿಸಿದ ತಿನಿಸುಗಳು, ಲಘು ಪಾನೀಯಗಳು… ಇವುಗಳೆಲ್ಲವೂ ನಾಲಗೆಗೆ ಹಿತವೆನಿಸಿದರೂ ದೇಹದೊಳಗೆ ಸೇರಿದಾಗ ವಿಷವಾಗುತ್ತ ಆರೋಗ್ಯವನ್ನು ಹಾಳು ಮಾಡುತ್ತದೆ. ಬಾಲ್ಯದಲ್ಲಿ ಮಕ್ಕಳಿಗೆ ಇದು ತಿಳಿಯುವುದಿಲ್ಲ. ಪೋಷಕರಾದವರು ಇಂತಹ ಆಹಾರವನ್ನು ತಿನ್ನಲು ಪ್ರೇರೇಪಿಸಬಾರದು. (ಆದರೆ ಇಂದಿನ ಪೋಷಕರಿಗೂ ಇದೇ ಬೇಕು!!)ಇವುಗಳೆಲ್ಲವೂ ನಾಲಗೆಯ ಚಪಲಕ್ಕಾಗಿ ಮಾತ್ರ, ಆರೋಗ್ಯಕ್ಕಾಗಿ ಅಲ್ಲ.
ಸಾಧ್ಯವಾದಷ್ಟು ಮನೆಯಲ್ಲಿಯೇ ತಯಾರಿಸುವ ಆಹಾರವನ್ನು ಸೇವಿಸುವುದು ಉತ್ತಮ. ಬೇಕರಿಗಳಲ್ಲಿ ಸಿಗುವ ಕರಿದ ಖಾರ, ಬಣ್ಣ ಬಣ್ಣದ ಸಿಹಿ ತಿಂಡಿಗಳನ್ನು ಅಭ್ಯಾಸ ಮಾಡಿಕೊಳ್ಳದಿದ್ದರೆ ಕ್ಷೇಮ. ಹೊಟೇಲ್ ಆಹಾರ ಹವ್ಯಾಸವಾದರೆ ಕ್ರಮೇಣ ಆರೋಗ್ಯ ಕೆಡುವುದದಂತೂ ನಿಶ್ಚಿತ. ಮನೆಯ ಅಡುಗೆ ಯಲ್ಲಿ ಸಾಧ್ಯವಾದಷ್ಟು ಪೋಷಕಾಂಶಗಳಿರುವ ಕಾಳುಗಳು, ಹಸುರು ತರಕಾರಿಗಳು ಆರೋಗ್ಯಕ್ಕೆ ಹಿತಕರ. ಪಾಮ್ ಆಯಿಲ್, ಸನ್ ಫ್ಲವರ್‌ಗಳಂಥ ಸಂಸ್ಕರಿಸಿದ ಎಣ್ಣೆ ಗಳಿಗಿಂತಲೂ ಕೊಬ್ಬರಿ ಎಣ್ಣೆ ಒಳ್ಳೆಯದು. ಕೊಬ್ಬರಿ ಎಣ್ಣೆ ಅನೇಕ ರೀತಿಯಲ್ಲಿ ಆರೋಗ್ಯಕರ. ಅದಕ್ಕೆ ವಿಷ ವನ್ನೂ ದುರ್ಬಲಗೊಳಿಸುವ ಶಕ್ತಿ ಇದೆ. ಮಾಂಸಾಹಾರಕ್ಕಿಂತ ಸಸ್ಯಾಹಾರವೇ ಉತ್ತಮ.
ವೈದ್ಯರೆಲ್ಲರು ಸಲಹೆ ನೀಡುವಂತೆ ಸಾಕಷ್ಟು ನೀರು ಸೇವಿಸುವುದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ.
ಸೇವಿಸುವ ಆಹಾರ ಮಾತ್ರವಲ್ಲ, ತಿನ್ನುವ ವಿಧಾ ನವೂ ಮುಖ್ಯವಾದ ಅಂಶವೇ. ಬೀದಿ ಬದಿಯಲ್ಲಿ ನಿಂತು ತಿನ್ನುವ ಹವ್ಯಾಸ ಒಳ್ಳೆಯದಲ್ಲ. ಮನೆಮಂ ದಿಯೆಲ್ಲ ಒಟ್ಟಾಗಿ ಕುಳಿತು ಊಟ ಮಾಡುವುದು ಮಾನಸಿಕ ಹಾಗೂ ದೈಹಿಕವಾಗಿ ಹಿತಕರ. ಊಟದ ಮಧ್ಯೆ ಅನಾವಶ್ಯಕ ಮಾತು, ಜಗಳ ಸಲ್ಲದು. ದೀರ್ಘ ಕಾಲ ಹೊಟ್ಟೆ ಖಾಲಿ ಬಿಡುವುದರಿಂದ, ನಿಯಮಿತ ಸಮಯದಲ್ಲಿ ಆಹಾರ ಸೇವಿಸದಿರುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಎಷ್ಟೇ ರುಚಿಕರ ವಾಗಿದ್ದರೂ ಅತಿಯಾದ ಊಟ, ತಿಂಡಿಗಳ ಭಕ್ಷಣೆ ಯಿಂದ ದೇಹಾರೋಗ್ಯ ಕೆಡುತ್ತದೆ. ಎಣ್ಣೆಯಲ್ಲಿ ಕರಿದ ತಿಂಡಿಗಳು ಅತಿಯಾದರೆ ಕೊಬ್ಬು, ಕಫ, ಕೊಲೆ ಸ್ಟ್ರಾಲ್, ಉಬ್ಬಸ ಮುಂತಾದವುಗಳಿಗೆ ಆಹ್ವಾನ ನೀಡಿದಂತೆ. ಯಾವ ಕಾಲದಲ್ಲಿ ಯಾವ ಆಹಾರ ಉತ್ತಮ ವೆಂದು ತಿಳಿದು ಸೇವಿಸಬೇಕು. ನಮ್ಮ ಹಿರಿಯರು ಕಾಲಮಾನಕ್ಕೆ ಸರಿಯಾದ ಆಹಾರ ಪದ್ಧತಿ ಅನುಸರಿಸುತ್ತಿದ್ದುದರಿಂದಲೇ ಅವರು ಗಟ್ಟಿಮುಟ್ಟಾದ ಆರೋಗ್ಯವನ್ನು ಹೊಂದಿದ್ದರು.
ಆಹಾರ ಪದ್ಧತಿಯಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳು ವುದರಿಂದ ಅನೇಕ ರೀತಿಯ ಆರೋಗ್ಯದ ಸಮಸ್ಯೆ ಗಳನ್ನು ದೂರವಿರಿಸಬಹುದಾಗಿದೆ. ಕೆಲವೊಂದು ಆಹಾರಗಳಲ್ಲಿರುವ ಎಷ್ಟೋ ಬ್ಯಾಕ್ಟೀರಿಯಾಗಳು ನಮ್ಮ ದೇಹದೊಳಗೆ ನಮಗೇ ಅರಿವಿಲ್ಲದೆ ಆಹಾರ ದೊಂದಿಗೆ ಸೇರಿ ಹೊಟ್ಟೆನೋವು, ವಾಂತಿ, ಭೇದಿ, ಅಲರ್ಜಿ ಮುಂತಾದ ಅನಾರೋಗ್ಯವನ್ನು ತಂದಿ ಡುತ್ತವೆ. ಅದಕ್ಕೆಂದೇ ಹಿರಿಯರು ಹೇಳಿರುವುದು “ಊಟ ಬಲ್ಲವನಿಗೆ ರೋಗವಿಲ್ಲ’ ಎಂದು. ನಾಲಗೆ ಚಪಲಕ್ಕೆ ಆರೋಗ್ಯ ಬಲಿಯಾಗಬಾರದು. ಊಟ ಮತ್ತು ಮಾತುಗಳ ವಿಚಾರದಲ್ಲಿ ನಾಲಗೆಗೆ ಆಚಾರವಿದ್ದರೆ ಮಾತ್ರ ಉತ್ತಮ ಜೀವನವನ್ನು ನಡೆಸಲು ಸಾಧ್ಯ.
-ವಿದ್ಯಾ ಅಮ್ಮಣ್ಣಾಯ, ಕಾಪು