ಹೈದ್ರಾಬಾದ್ : ಬಲಿದಾನದ ದ್ಯೋತಕವಾಗಿ ಮುಸ್ಲಿಂ ಸಮುದಾಯದವರು ಆಚರಿಸುವ ಈದ್–ಉಲ್–ಅದಾ ಅಥವಾ ಬಕ್ರ್–ಈದ್ ಸಂದರ್ಭದಲ್ಲಿ ಗೋವಿನ ಹತ್ಯೆಯನ್ನು ಸ್ವಯಂಪ್ರೇರಿತರಾಗಿ ತ್ಯಜಿಸುವಂತೆ ತೆಲಂಗಾಣದ ಗೃಹ ಸಚಿವ ಮಹಮ್ಮದ್ ಆಲಿ ಅವರು ತಮ್ಮ ಸಮುದಾಯದವರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದ ಸಂದರ್ಭದಲ್ಲಿ ಮಾಧ್ಯಮ ವಕ್ತಾರರೊಂದಿಗೆ ಮಾತನಾಡುತ್ತಾ ಸಚಿವರು ತಮ್ಮ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಸಮಾಜದ ಭಾಗವಾಗಿರುವ ಒಂದು ಸಮುದಾಯದವರು ಗೋವನ್ನು ಪೂಜ್ಯಭಾವನೆಯಿಂದ ಕಾಣುತ್ತಾರೆ ಮತ್ತು ಗೋವನ್ನು ಆರಾಧಿಸುತ್ತಾರೆ. ಹೀಗಿರುವಾಗ ನಾವು ಗೋವನ್ನು ಕೊಂದು ಅದನ್ನು ಆಹಾರವಾಗಿ ಸೇವಿಸುವುದು ಸರಿಯಲ್ಲ, ಅವರ ಭಾವನೆಗಳಿಗೂ ಬೆಲೆ ಕೊಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದು ಸಚಿವ ಮಹಮ್ಮದ್ ಅವರು ಅಭಿಪ್ರಾಯಪಟ್ಟರು.
‘ನಾವು ಗೋವನ್ನು ಹತ್ಯೆ ಮಾಡುವುದನ್ನು ಸ್ವಯಂಪ್ರೇರಿತವಾಗಿ ತ್ಯಜಿಸಬೇಕು ಎಂದು ನನ್ನೆಲ್ಲಾ ಸಮುದಾಯ ಬಾಂಧವರಲ್ಲಿ ನಾನು ವಿನಂತಿಸುತ್ತಿದ್ದೇನೆ. ಒಂದು ಧರ್ಮದವರು ಗೋವನ್ನು ದೇವರೆಂದು ಪೂಜಿಸುತ್ತಾರೆ ಹಾಗಾಗಿ ಆ ಧರ್ಮದವರ ಭಾವನೆಗಳನ್ನು ಗೌರವಿಸುವುದು ನಮ್ಮ ಕರ್ತವ್ಯ’ ಎಂಬುದು ತೆಲಂಗಾಣ ಗೃಹ ಸಚಿವರ ಮಾತು.
ಬಕ್ರ್-ಈದ್ ಸಂದರ್ಭದಲ್ಲಿ ಗೋ ಹತ್ಯೆ ಮಾಡಿದಲ್ಲಿ ಕಾನೂನು ವ್ಯವಸ್ಥೆಯ ಮೂಲಕವೇ ಸೂಕ್ತ ಕ್ರಮ ಕೈಗೊಳ್ಳುವಂತಾಗಬೇಕು ಎಂದೂ ಮಹಮ್ಮದ್ ಅವರು ಅಭಿಪ್ರಾಯಪಟ್ಟರು.