ಅದೊಂದು ಮಳೆಯ ರಾತ್ರಿ. ಜೋರು ಮಳೆ ಬೀಳುತ್ತಿತ್ತಲ್ಲ? ಅದೇ ಕಾರಣದಿಂದ ಕರೆಂಟೂ ಹೋಗಿಬಿಟ್ಟಿತ್ತು. ಹೀಗಿರುವಾಗ ಆ ಊರಿನಿಂದ ಒಂದು ಮೈಲಿ ದೂರವಿದ್ದ ಬಸ್ ನಿಲ್ದಾಣದಲ್ಲಿ ಒಬ್ಬ ಮುದುಕ ನಡುಗುತ್ತಾ ನಿಂತಿದ್ದ. ಅವನ ಕೈಲಿ ಒಂದು ದಪ್ಪ ಪುಸ್ತಕವಿತ್ತು.
ಇದೇ ಸಂದರ್ಭಕ್ಕೆ ಒಬ್ಬ ಶ್ರೀಮಂತ ತರುಣನೂ ಅಲ್ಲಿಗೆ, ಮಳೆಯಿಂದ ಆಶ್ರಯ ಪಡೆಯಲು ಬಂದ. ಮುದುಕನ ಕೈಯಲ್ಲಿದ್ದ ಪುಸ್ತಕ ನೋಡಿದಾಕ್ಷಣ ಅದೊಂದು ಪತ್ತೇದಾರಿ ಕಾದಂಬರಿ ಎಂದು ತರುಣನಿಗೆ ಅರ್ಥವಾಗಿ ಹೋಯಿತು. ಅದೇಕೋ ಕಾಣೆ; ಈ ಪುಸ್ತಕ ಓದಲೇಬೇಕು ಎಂಬ ಆಸೆ ಅವನಿಗೆ ಬಂತು. ತಕ್ಷಣವೇ ಅಜ್ಜಾ, ಈ ಪುಸ್ತಕ ನನಗೆ ಬೇಕು. ಬೇಕೇ ಬೇಕು. ಎಷ್ಟಕ್ಕೆ ಕೊಡ್ತೀಯ?’ ಎಂದು ವ್ಯಾಪಾರಕ್ಕಿಳಿದ.
ಅರ್ಧಗಂಟೆ ಚೌಕಾಶಿಯ ನಂತರ 3,000 ರೂ. ಬೆಲೆಗೆ ಆ ಪುಸ್ತಕ ಮಾರಿದ ಮುದುಕ ಎಚ್ಚರಿಸುವ ದನಿಯಲ್ಲಿ ಹೇಳಿದ : “ನೋಡೂ, ನೀನು ಯಾವುದೇ ಕಾರಣಕ್ಕೂ ಈ ಪುಸ್ತಕದ ಕಡೆಯ ಪುಟ ಓದಬೇಡ. ಅದನ್ನು ಓದಿದರೆ ನಿನ್ನ ಜೀವಕ್ಕೂ ತೊಂದರೆಯಾಗಬಹುದು ಈ ಯುವಕ ಮನೆಗೆ ಬಂದವನೇ ಮುದುಕನ ಮಾತನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಾ ಕುತೂಹಲದಿಂದಲೇ ಆ ಪುಸ್ತಕ ಓದಿದ. ಸ್ವಾರಸ್ಯವೆಂದರೆ, ಕಡೆಯ ಎರಡು ಪುಟಗಳು ಉಳಿದಿದ್ದಾಗಲೇ ಕಥೆ ಮುಗಿದುಹೋಯಿತು. ಕಥೆಯೇ ಮುಗಿದ ಮೇಲೆ ಜೀವಕ್ಕೇ ಅಪಾಯ ಉಂಟು ಮಾಡುವಂಥ ಸಂಗತಿ ಕಡೆಯ ಪುಟದಲ್ಲಿ ಏನಿರಬಹುದು ಎಂಬ ಕುತೂಹಲದಿಂದಲೇ, ಈತ ನಡುಗುವ ಕೈಗಳಿಂದಲೇ ಕಡೆಯ ಪುಟವನ್ನು ತೆರೆದು ನೋಡಿದ.
ಅಲ್ಲಿದ್ದುದನ್ನು ಕಂಡು ಆಂಂಂ ಎಂದು
ಉದ್ಗರಿಸಿದ: ಏಕೆಂದರೆ ಅಲ್ಲಿ- ಪುಸ್ತಕದ ಅಧಿಕೃತ ಮಾರಾಟ ಬೆಲೆ 30 ರೂ. ಎಂದಿತ್ತು !