ಮೈಸೂರು: ವಿಶ್ವವಿದ್ಯಾಲಯಗಳು ದೇಶದ ಮೆದುಳು ಇದ್ದಂತೆ. ವಿವಿಗಳನ್ನು ಹತ್ತಿಕ್ಕಲು ಮುಂದಾದರೆ ದೇಶದ ಬೌದ್ಧಿಕ ಮೆದುಳನ್ನು ತೆಗೆದು ಹಾಕಿದಂತಾಗಲಿದೆ. ಹಾಗಾಗಿ ವಿವಿಗಳನ್ನು ಬಲಹೀನಗೊಳಿಸಬಾರದು ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.
ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಏರ್ಪಡಿಸಿದ್ದ “ಬೇಕಿರುವುದು ಇಇಇ’ (ಶಿಕ್ಷಣ, ಉದ್ಯೋಗ, ಆರ್ಥಿಕತೆ) ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಯಾವ ದೇಶದಲ್ಲಿ ಧರ್ಮ ಮುಂದಾಗುತ್ತದೋ ಆ ದೇಶ ಹಿಂದುಳಿಯುತ್ತದೆ. ಧರ್ಮದ ಪರಿಭಾಷೆಯಿಂದ ಪ್ರಜಾಪ್ರಭುತ್ವ ಹಿನ್ನಡೆ ಅನುಭವಿಸುತ್ತದೆ ಎನ್ನುವುದನ್ನು ಆಡಳಿತಗಾರರು ಅರಿಯಬೇಕಿದೆ ಎಂದರು.
ಸಂವಿಧಾನದ ಪ್ರಸ್ತಾಪವನ್ನು ಪಕ್ಕಕ್ಕೆ ಸರಿಸಿ ಪೌರತ್ವ ಕಾಯಿದೆ ತರಲಾಗಿದೆ. ಮೂರು ದೇಶಗಳಲ್ಲಿನ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಿದರೆ ಅವರಿಗೆ ಉದ್ಯೋಗ ಎಲ್ಲಿ ನೀಡುತ್ತೀರಿ? ಇಲ್ಲಿರುವವರಿಗೇ ಉದ್ಯೋಗವಿಲ್ಲ, ಬೇರೆ ದೇಶದವರನ್ನು ಕರೆದುಕೊಂಡು ಬಂದರೆ ಉದ್ಯೋಗ ಹೇಗೆ ಕಲ್ಪಿಸುತ್ತೀರಿ ಎಂದು ಪ್ರಶ್ನಿಸಿದರು.
ರಾಜಕೀಯ ವ್ಯವಸ್ಥೆಯಲ್ಲಿ ಅಧಿಕಾರ ಚಲಾಯಿಸಲು ಮುಂದಾದರೆ, ಜನ ಸಾಮಾನ್ಯರು ಎದ್ದು ನಿಲ್ಲುತ್ತಾರೆ. ಈಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ಜನ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಜನರ ಧ್ವನಿ ಖಚಿತತೆಯು ನನ್ನ ದೇಶದ ಸಂವಿಧಾನ ಸುಭದ್ರ ಎಂಬುದನ್ನು ಸಾರುತ್ತಿದೆ. ಈಗ ಅಂಬೇಡ್ಕರ್ ಎಲ್ಲರ ನಾಲಗೆ ಮೇಲೆ ಹರಿದಾಡುತ್ತಿದ್ದಾರೆ.
ಸನಾತನ ವಿಚಾರ ಮುಂದಿಟ್ಟುಕೊಂಡು ಜನತೆಯನ್ನು ಭಾವನಾತ್ಮಕವಾಗಿ ಬಡಿದೆಬ್ಬಿಸಿ ಮುಂದೆ ಹೋಗುವವರಿಗೆ ಜನರು ತಡೆಗೋಡೆ ಯಾಗಿದ್ದಾರೆ ಎಂದು ಹೇಳಿದರು. 13 ರಾಜ್ಯ ಸರ್ಕಾರಗಳು ಸಿಎಎ ಜಾರಿ ಮಾಡಲ್ಲ ಎಂದಿರುವುದರಿಂದ ಕೇಂದ್ರ ಸರ್ಕಾರ ಮರು ಚಿಂತನೆಗೆ ಮನಸ್ಸು ಮಾಡಬೇಕು ಎಂದರು. ಶಾಸಕ ಎನ್.ಮಹೇಶ್ ಮಾತನಾಡಿ, ಜನರು ಅನುಭವಿಸುತ್ತಿರುವ ಸಾಮಾನ್ಯ ಸಮಸ್ಯೆಗಳನ್ನು ಮುಂದಿಟ್ಟು ಬಹುಜನ ವಿದ್ಯಾರ್ಥಿ ಸಂಘ ಸಂಘಟನೆ ರೂಪಿಸಬೇಕು.
ಪಟ್ಟಭದ್ರ ಹಿತಾಸಕ್ತಿಗಳು ಆ್ಯಕ್ಷನ್ ಮಾಡಿ ರಿಯಾಕ್ಷನ್ ನಿರೀಕ್ಷಿಸುತ್ತಾರೆ. ವಿದ್ಯಾರ್ಥಿಗಳು ಈ ಬಗ್ಗೆ ಎಚ್ಚರಿಕೆಯಿಂದ ಇದ್ದು ರಿಯಾಕ್ಷನ್ ಬದಲು ಪ್ರೋ ಆ್ಯಕ್ಷನ್ ಮಾಡಬೇಕು ಎಂದು ಹೇಳಿದರು. ಅಂಕಣಕಾರ ಡಾ.ಕೆ.ಸಿ.ರಘು, ಪತ್ರಕರ್ತ ಟಿ.ಗುರುರಾಜ್, ಐಎಎಸ್ ಅಕಾಡೆಮಿಯ ತರಬೇತುದಾರ ಡಾ. ಶಿವಕುಮಾರ್ , ಬಿವಿಎಸ್ ಜಿಲ್ಲಾ ಸಂಯೋಜಕ ಎಚ್.ಎಸ್. ಗಣೇಶ್‌ಮೂರ್ತಿ ಇತರರಿದ್ದರು.
ಇವರ್ಯಾಕೆ ಇರಬೇಕು?: ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಅಚಾತುರ್ಯ ಘಟನೆ ಮುಗಿದ ಅಧ್ಯಾಯ. ಈ ಘಟನೆ ಮುಂದಿಟ್ಟುಕೊಂಡು ಕುಲಪತಿ ಮತ್ತು ಕುಲಸಚಿವರು ವಿದ್ಯಾರ್ಥಿಗಳ ಬಾಯಿ ಮುಚ್ಚಿಸಲು ಮುಂದಾಗಬಾರದು. ಸಿಂಡಿಕೇಟ್ ಸದಸ್ಯರು ಹೇಳಿದಂತೆ ಕೇಳುವುದಾದರೆ ಇವರ್ಯಾಕೆ ಇರಬೇಕು? ಎಂದು ಶಾಸಕ ಎನ್. ಮಹೇಶ್ ಪ್ರಶ್ನಿಸಿದರು.