Advertisement

ತಂತ್ರಜ್ಙಾನದ ಅತಿಯಾದ ಅವಲಂಬನೆ ಸಲ್ಲದು

11:00 AM Jan 07, 2022 | Team Udayavani |

ಕಲಬುರಗಿ: ತಂತ್ರಜ್ಞಾನದ ಮೇಲೆಯೇ ಅತಿಯಾಗಿ ಅವಲಂಬಿತರಾದರೆ ಸ್ವಂತಿಕೆ ಮತ್ತು ಆಲೋಚನಾ ಶಕ್ತಿಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ರಮೇಶ ಲಂಡನಕರ್‌ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ಜಿಲ್ಲಾ ವಿಜ್ಞಾನ ಕೇಂದ್ರದ 38ನೇ ವಾರ್ಷಿಕೋತ್ಸವ ಅಂಗವಾಗಿ ಗುರುವಾರದಿಂದ ಆರಂಭವಾದ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಂತ್ರಜ್ಞಾನ ಸೃಷ್ಟಿಸಿದ್ದೇ ಮನುಷ್ಯ. ಈಗ ಅದೇ ತಂತ್ರಜ್ಞಾನ ಮನುಷ್ಯನನ್ನೇ ನಿಯಂತ್ರಿಸುತ್ತಿದೆ. ಟಿವಿ, ಮೊಬೈಲ್‌, ಕಂಪ್ಯೂಟರ್‌ ಬಿಟ್ಟರೆ ನಮಗೆ ಬೇರೇನು ಇಲ್ಲವೇನು ಎಂಬಂತೆ ಆಗಿಬಿಟ್ಟಿದೆ ಎಂದರು.

ತಾಂತ್ರಿಕ ಶಕ್ತಿ ಶೋಧಿಸಿದ್ದು ನಮ್ಮ ಅನುಕೂಲಕ್ಕಾಗಿ. ಈಗ ನಾವೇ ಅದನ್ನು ಅವಲಂಬಿಸುವಷ್ಟು ಪರಿಸ್ಥಿತಿ ಬದಲಾಗಿದೆ. ನಮ್ಮ ಬುದ್ಧಿಮತ್ತೆಗಿಂತ ತಂತ್ರಜ್ಞಾನವನ್ನೇ ನಂಬುವ ಮಟ್ಟಕ್ಕೆ ಬಂದು ನಿಂತಿದ್ದೇವೆ. ಆಧುನಿಕ ಪ್ರಪಂಚದ ಎಲ್ಲ ರಂಗಗಳಲ್ಲೂ ಕೃತಕ ಬುದ್ಧಿವಂತಿಕೆ ಪ್ರಯೋಗವೇ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮೊಬೈಲ್‌ ಸೇರಿದಂತೆ ಯಾವುದೇ ತಂತ್ರಜ್ಞಾನವನ್ನಾಗಲಿ ಅಗತ್ಯಕ್ಕೆ ತಕ್ಕಷ್ಟೇ ಬಳಸಬೇಕು. ನಾವು ಅದಕ್ಕೇ ಜೋತು ಬಿದ್ದರೆ ಆ ತಂತ್ರಜ್ಞಾನ ದುರುಪಯೋಗ ಮಾಡಿಕೊಂಡಂತೆ. ವಿಪರೀತ ಬಳಕೆಯಿಂದ ನಮ್ಮ ಆಲೋಚನಾ ಕ್ರಮವನ್ನು ಮರೆತು ಬಿಡುವಂತೆ ಆಗುತ್ತದೆ. ಇದೇ ರೀತಿ ಮುಂದುವರಿದರೆ ಡಿಜಿಟಲ್‌ ಯುಗದಲ್ಲಿ ನಾವು ಮಷಿನ್‌ಗಳ ಅಡಿಯಾಳು ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖ್ಯ ಅತಿಥಿಯಾಗಿ ಆನ್‌ಲೈನ್‌ ಮೂಲಕ ಪಾಲ್ಗೊಂಡ ಬೆಂಗಳೂರಿನ ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ವಸ್ತು ಸಂಗ್ರಹಾಲಯದ ನಿರ್ದೇಶಕಿ ಕೆ.ಎ. ಸಾಧನಾ ಮಾತನಾಡಿ, ಪ್ರಪಂಚದಲ್ಲಿ ವಿಜ್ಞಾನ ಕೇಂದ್ರಗಳಿಗೆ ಸುದೀರ್ಘ‌ ಇತಿಹಾಸವಿದೆ. ಅದರಲ್ಲೂ ಭಾರತದ ಮೊದಲ ಜಿಲ್ಲಾ ವಿಜ್ಞಾನ ಕೇಂದ್ರ ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಸ್ಥಾಪನೆಯಾಗಿದ್ದರೆ, ಕಲಬುರಗಿ ವಿಜ್ಞಾನ ಕೇಂದ್ರವು ದೇಶದ ಎರಡನೇ ಜಿಲ್ಲಾ ವಿಜ್ಞಾನ ಕೇಂದ್ರ ಎಂಬ ಹೆಗ್ಗಳಿಕೆ ಹೊಂದಿದೆ ಎಂದರು.

Advertisement

1851ರಲ್ಲಿ ಲಂಡನ್‌ನಲ್ಲಿ ಜಗತ್ತಿನ ಮೊದಲ ವಿಜ್ಞಾನ ಕೇಂದ್ರ ಆರಂಭವಾಯಿತು. 1903ರಲ್ಲಿ ಜರ್ಮನಿಯಲ್ಲಿ ಇಂತಹ ಪ್ರಯೋಗ ನಡೆಯಿತು. 1959ರಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಭಾರತದ ಮೊದಲ ವಿಜ್ಞಾನ ಕೇಂದ್ರ ಪ್ರಾರಂಭವಾಯಿತು. ಇದೇ ವರ್ಷ ಪಶ್ಚಿಮ ಬಂಗಾಳದಲ್ಲಿ ದೇಶದ ಮೊದಲ ಜಿಲ್ಲಾ ಕೇಂದ್ರವೂ ಆರಂಭವಾಗಿತ್ತು. ಇದರ ನಂತರ ಆರಂಭವಾಗಿದ್ದೇ ಕಲಬುರಗಿ ವಿಜ್ಞಾನ ಕೇಂದ್ರ. 1984ರಲ್ಲಿ ಆರಂಭವಾಗಿರುವ ಈ ಕೇಂದ್ರ ಇಲ್ಲಿಯವರೆಗೆ ಸಾಕಷ್ಟು ಬೆಳವಣಿಗೆ ಕಂಡಿದೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಿಜ್ಞಾನ ಅಧಿ ಕಾರಿ ಸಿ.ಎನ್‌.ಲಕ್ಷ್ಮೀನಾರಾಯಣ ಮಾತನಾಡಿ, ಕೇಂದ್ರದ 38ನೇ ವಾರ್ಷಿಕೋತ್ಸವ ನಿಮಿತ್ತ ವಿವಿಧ ಚಟುವಟಿಕೆಗಳ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಜ.10ರ ವರೆಗೂ ಈ ಸಪ್ತಾಹ ನಡೆಯಲಿದೆ ಎಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಾದ ಕದಳಿಶ್ರೀ, ಹಾಪ್ಸಾ, ಆಯೇಷಾ ಅವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಜಿಲ್ಲಾ ವಿಜ್ಞಾನ ಕೇಂದ್ರದ ಪೊನ್ನರಸನ್‌ ಮತ್ತು ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next