Advertisement
ಬೆಳಗ್ಗಿನಿಂದ ಮೂವರು ಪರಿಚಿತರ/ಸಂಬಂಧಿಕರ ಕರೆ. ಒಬ್ಬರ ಮನೆಯಲ್ಲಿ ಮದುವೆ, ಇನ್ನೊಬ್ಬರ ಮನೆಯಲ್ಲಿ ಸತ್ಯನಾರಾಯಣ ಪೂಜೆ, ಮತ್ತೂಬ್ಬರ ಮಗಳ ನೃತ್ಯದ ಆರಂಗೇಟ್ರಂ ಕಾರ್ಯಕ್ರಮವಂತೆ. ಒಂದು ಬುಧವಾರದಂದು, ಮತ್ತೆರಡು ಕಾರ್ಯಕ್ರಮಗಳು ಅದರ ಮರುದಿವಸವೇ. ಆ ಎರಡು ಜಾಗಗಳ್ಳೋ, ಬೆಂಗಳೂರಿನ ಎರಡು ವಿರುದ್ಧ ಮೂಲೆಗಳಲ್ಲಿವೆ. ಈ ಟ್ರಾಫಿಕ್ ಅನ್ನು ದಾಟಿಕೊಂಡು, ಎಲ್ಲ ಕಾರ್ಯಕ್ರಮಗಳನ್ನೂ ಅಟೆಂಡ್ ಮಾಡಬೇಕೆಂದರೆ, ಎರಡು ದಿವಸಗಳ ರಜಾ ಹಾಕಬೇಕು. ಅಷ್ಟೇ ಅಲ್ಲ, ಬಾಸ್ ಕೈಲಿ ಉಗಿಸಿಕೊಳ್ಳಬೇಕು, ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಬೇಕು. ಇದರ ಮಧ್ಯೆ, ಮನೆಯಲ್ಲಿರುವ ಹಿರಿಯರ ಉಪಚಾರ, ಮಕ್ಕಳ ಪರೀಕ್ಷೆಯ ತಯಾರಿ…
Related Articles
Advertisement
ಕಳೆದ ವಾರ ಸಂಬಂಧಿಕರೊಬ್ಬರ ಆರತಕ್ಷತೆಗೆ ಹೋಗಬೇಕಾಯಿತು. ಹತ್ತು ದಿನಗಳ ಹಿಂದೆ ಹಳ್ಳಿಯಲ್ಲಿ ಮದುವೆ ನಡೆದಿತ್ತು. ಕಾರಣಾಂತರಗಳಿಂದ ಮದುವೆಗೆ ಹೋಗಲಾಗಿರಲಿಲ್ಲ. ಹಾಗಾಗಿ, ಆರತಕ್ಷತೆಗೆ ಹೋಗಲೇಬೇಕೆಂದು ನಿರ್ಧರಿಸಿ, ಪ್ರೀತಿವಿಶ್ವಾಸಗಳನ್ನು ಹೃನ್ಮನಗಳಲ್ಲಿ ತುಂಬಿಕೊಂಡು ಒಂದೂವರೆ ಗಂಟೆಯ ಪ್ರಯಾಣದ ನಂತರ ಗುರಿ ತಲುಪಿದೆ. ಯಥಾವತ್ತಾಗಿ ಸಾಲಿನಲ್ಲಿ ನಿಂತು, ಯುವ ಜೋಡಿಗೆ ವಿಶ್ ಮಾಡಲು ಕಾಯುತ್ತಿದ್ದೆ. ಇನ್ನೇನು ಕೈ, ಕುಲುಕಿ ಶುಭಾಶಯ ಕೋರಬೇಕು ಅನ್ನುವಷ್ಟರಲ್ಲಿ, ಮದುಮಗಳ ತಾಯಿಯ ಆಕ್ಷೇಪಣೆ ಬಂತು. ಎಲ್ಲರೆದುರಿಗೆ, “ಮದುವೆಗೆ ಬರಲೇ ಇಲ್ಲವಲ್ಲ…’ ಅಂತ ಕುಹಕದಿಂದ ಕೇಳಿದರು. ಯಾಕೋ ನನಗೆ ತಡೆದುಕೊಳ್ಳುವುದು ಕಷ್ಟವೆನಿಸಿತು. “ನೋಡಿ, ನಿಮ್ಮ ಕರೆಯೋಲೆ ಬೇರೆಯವರ ಮುಖಾಂತರ ಹಾಗೂ ಮೊಬೈಲ್‌ನಲ್ಲಿ ತಲುಪಿದರೂ, ವಿಶ್ವಾಸ ಉಳಿಸಿಕೊಳ್ಳಲು ಇಲ್ಲಿ ವೈಯಕ್ತಿಕ ಹಾಜರಿ ಹಾಕಿದ್ದೇನೆ. ಆರತಕ್ಷತೆಗೆ ಬಂದದ್ದಕ್ಕೆ ಸಂತೋಷ ವ್ಯಕ್ತಪಡಿಸುವುದನ್ನು ಬಿಟ್ಟು, ಮದುವೆಗೆ ಬಂದಿಲ್ಲವೆಂದು ಮುಖ ಸಣ್ಣ ಮಾಡಿಕೊಳ್ಳುವುದು ಸರಿಯೇ? ಹಾಗಾದ್ರೆ, ಈಗ ತಿರುಗಿ ಹೋಗಿಬಿಡಲೇ?’- ಬಾಣದಂತೆ ಹೊರಬಂತು ನನ್ನ ಮಾತು. “ಸಾರಿ’ ಎಂಬ ಮಾತು ಆ ಕಡೆಯಿಂದ ಬಂದರೂ, ನನ್ನ ಹೃದಯಾಳದ ಭಾವನೆ ಅವರಿಗೆ ಅರ್ಥವಾದಂತೆ ಕಾಣಲಿಲ್ಲ. “ವಿಲನ್’ ಪಟ್ಟ ಹೊತ್ತು ಅಲ್ಲಿಂದ ಹಿಂತಿರುಗಿದೆ.
ಇನ್ನು ಮುಂದೆ ಸಮಾರಂಭಗಳಿಗೆ ಖುದ್ದಾಗಿ ಹೋಗಿ, ಇಲ್ಲಸಲ್ಲದ ಮಾತು ಹೇಳಿಸಿಕೊಳ್ಳುವುದಕ್ಕಿಂತ ತಾಂತ್ರಿಕತೆಯನ್ನು ಉಪಯೋಗಿಸಿ ಆಮಂತ್ರಣ ಬಂದ ರೀತಿಯಲ್ಲೇ ಶುಭ ಸಂದೇಶಗಳನ್ನು ರವಾನಿಸಿ, ಆರಾಮವಾಗಿರುವುದೇ ಕ್ಷೇಮ ಅಂದುಕೊಂಡಿದ್ದೇನೆ…
-ಡಾ. ಉಮಾಮಹೇಶ್ವರಿ ಎನ್