ಬೆಂಗಳೂರು: ಪೌರತ್ವ ಕಾಯ್ದೆ ವಿಚಾರವಾಗಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ನೇರ ಹೊಣೆ ಯು.ಟಿ. ಖಾದರ್ ಎಂದು ಬೃಹತ್ ಮತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆರೋಪಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೌರತ್ವ ಕಾಯ್ದೆ ಅನುಷ್ಠಾನವಾದರೆ ಮಂಗಳೂರಿನಲ್ಲಿ ಹಿಂಸಾಚಾರ ನಡೆಯಲಿದೆ ಎಂದು ಖಾದರ್ ಹೇಳಿಕೆ ನೀಡಿದ್ದರಿಂದಲೇ ಅಲ್ಲಿ ಗಲಭೆ ನಡೆಯಲು ಪ್ರೇರಣೆಯಾಯಿತು. ಹಾಗಾಗಿ ಮಂಗಳೂರಿನಲ್ಲಿ ಇಬ್ಬರು ಅಮಾಯಕರ ಸಾವಿಗೆ ಖಾದರ್ ಅವರೇ ನೇರ ಹೊಣೆ ಎಂದರು.
ಮಂಗಳೂರಿನಲ್ಲಿನ ವಾತಾವರಣ ಸಂಪೂರ್ಣ ಪ್ರಕ್ಷ್ಯುಬ್ಧವಾಗಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಅಲ್ಲಿಗೆ ತೆರಳಿದರೆ ವಾತಾವರಣ ಇನ್ನಷ್ಟು ಹಾಳಾಗುತ್ತದೆ ಎನ್ನುವ ಕಾರಣದಿಂದ ಅವರಿಗೆ ಮಂಗಳೂರಿಗೆ ತೆರಳಲು ಪೊಲೀಸರು ಅವಕಾಶ ನೀಡಿಲ್ಲ. ಪ್ರತಿಪಕ್ಷ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದವರು, ಕಾನೂನು ಸುವ್ಯವಸ್ಥೆ ಕಾಪಾಡುವುದು ಎಲ್ಲರ ಜವಾಬ್ದಾರಿ ಎನ್ನುವುದನ್ನು ಅವರು ಅರಿತುಕೊಳ್ಳಬೇಕು ಎಂದು ಶೆಟ್ಟರ್ ಅಭಿಪ್ರಾಯಪಟ್ಟರು.
ಪೌರತ್ವ ಕಾನೂನು ದೇಶದಲ್ಲಿನ ಜನರನ್ನು ಹೊರಗೆ ಹಾಕುವುದಲ್ಲ. ಹೊರಗಿನಿಂದ ಬಂದವರಿಗೆ ಪೌರತ್ವ ಕೊಡುವ ಉದ್ದೇಶಕ್ಕೆ ಈ ಕಾನೂನು ತರಲಾಗಿದೆ. ಆದರೆ ಕಾಂಗ್ರೆಸ್‌ನವರು ಈ ಕಾಯಿದೆ ಬಗ್ಗೆ ಅಪಪ್ರಚಾರ ಮಾಡಿ ಜನರನ್ನು ಆತಂಕಕ್ಕೆ ಒಳಗಾಗುವಂತೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಮಹಾದಾಯಿ ವಿವಾದ ಬಗೆ ಹರಿಸಲು, ಗೋವಾ ಮತ್ತು ಮಹಾರಾಷ್ಟ್ರ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ಸಂಧಾನಸಭೆ ನಡೆಸಲು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಆಸಕ್ತಿ ತೋರಿಸಿದ್ದಾರೆ. ಅದಕ್ಕೆ ಶೀಘ್ರದಲ್ಲೇ ಸಿಹಿ ಸುದ್ದಿ ಕೊಡುವುದಾಗಿ ಹೇಳಿದ್ದಾರೆ. ಮಹದಾಯಿ ವಿಚಾರವಾಗಿ ಈಗಾಗಲೇ ನೀಡಿರುವ ತೀರ್ಪಿನನ್ವಯ ಅದನ್ನು ಅನುಷ್ಠಾನ ಮಾಡಲಾಗುವುದು ಎಂದವರು ತಿಳಿಸಿದರು.