Advertisement

ಸಮಾಜ ಸೇವೆಯಿಂದ ಮನಸ್ಸಿಗೆ ನೆಮ್ಮದಿ

06:10 PM Jan 20, 2022 | Shwetha M |

ಸಿಂದಗಿ: ಎಲ್ಲಿ ಅಗತ್ಯತೆ ಇದೆಯೋ ಅಲ್ಲಿ ನಾವಿರಬೇಕು. ಸೇವೆ ಮಾಡುವುದರಿಂದ ನಮಗೆ ತೃಪ್ತಿ ದೊರೆಯುತ್ತದೆ. ದೀನ ದಲಿತರ ಮತ್ತು ಬಡವರ ಮುಖದಲ್ಲಿ ನಗು ತರುವುದೇ ನಮ್ಮ ಕ್ಲಬ್‌ ಉದ್ದೇಶ ಎಂದು ಅಂತಾರಾಷ್ಟ್ರೀಯ ಲಯನ್ಸ್‌ ಸೇವಾ ಸಂಸ್ಥೆ 317ಬಿ ಜಿಲ್ಲಾ ಗವರ್ನರ್‌ ಎಂ.ಜೆ.ಎಫ್‌. ಶ್ರೀಕಾಂತ ಮೋರೆ ಹೇಳಿದರು.

Advertisement

ಪಟ್ಟಣದ ಪಿಇಎಸ್‌ ಕಾಲೇಜಿನಲ್ಲಿ ಸಿಂದಗಿ ಲಯನ್ಸ್‌ ಕ್ಲಬ್‌ ಬುಧವಾರ ಹಮ್ಮಿಕೊಂಡಿದ್ದ ಲಯನ್ಸ್‌ ಕ್ಲಬ್‌ ಚಟುವಟಿಕೆಗಳ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ನಮ್ಮ ಬದುಕು ವ್ಯವಹಾರಿಕವಾಗಿದೆ. ಮಾನವೀಯ ವೌಲ್ಯಗಳು ಕುಸಿಯುತ್ತವೆ. ಕೇವಲ ಹಣ, ಸಂಪತ್ತು ಗಳಿಕೆಯಿಂದ ಮನುಷ್ಯ ನೆಮ್ಮದಿಯ ಬದುಕು ಹುಡುಕುತ್ತಿದ್ದಾನೆ. ಆದರೆ, ಅದು ಹಣದಿಂದ ಸಿಗಲಾರದು. ಹಾಗಾಗಿ ಲಾಯನ್ಸ ಕ್ಲಬ್‌ನಂತಹ ಸಾಮಾಜಿಕ ಸೇವಾ ಸಂಸ್ಥೆಗಳ ಸದಸ್ಯರಾಗಿ ಸಮಾಜಮುಖೀಗಳಾಗಿ ಬಾಳಿದರೆ ಮಾತ್ರ ನಮ್ಮ ಬದುಕು ಪರಿಪೂರ್ಣತೆಯನ್ನು ಪಡೆಯುತ್ತದೆ. ಈ ನಿಟ್ಟಿನಲ್ಲಿ ಸಿಂದಗಿ ಲಯನ್ಸ್‌ ಕ್ಲಬ್‌ ಹಮ್ಮಿಕೊಂಡಿರುವ ಹಲವು ಜನಪರ ಸೇವಾ ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೀಯ ಎಂದರು.

ಲಯನ್ಸ್‌ ಕ್ಲಬ್‌ ಅಧ್ಯಕ್ಷ ಕೆ.ಎಚ್‌. ಸೋಮಾಪುರ ಮಾತನಾಡಿ, ಲಯನ್ಸ್‌ ಕ್ಲಬ್‌ ಸಮಾಜೋದ್ಧಾರ ಕಾರ್ಯವನ್ನು ಮಾಡುವ ಜೊತೆಗೆ ಮನುಷ್ಯ ಹಾಗೂ ಸಮಾಜದ ನಡುವೆ ಅವಿನಾಭಾವ ಸಂಬಂಧವನ್ನು ಬೆಸೆಯುವ ಸಂಸ್ಥೆಯಾಗಿದೆ. ಲಯನ್ಸ್‌ ಕ್ಲಬ್‌ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ, ಪ್ಲಾಸ್ಟಿಕ್‌ ನಿಷೇಧ, ಆರೋಗ್ಯ ಜಾಗೃತಿ ಕುರಿತು ಕಾರ್ಯಾಗಾರ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತೇವೆ. ಸಮಾಜದಲ್ಲಿ ಹಿಂದುಳಿದಿರುವ ಜನರನ್ನು ಮುಖ್ಯವಾಹಿನಿಗೆ ತರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಅಂತಾರಾಷ್ಟ್ರೀಯ ಲಯನ್ಸ್‌ ಕ್ಲಬ್‌ 175 ರಾಷ್ಟ್ರಗಳಲ್ಲಿ 102 ವರ್ಷಗಳವರೆಗೆ ಅವಿಚ್ಛಿನ್ನವಾಗಿ ಹೆಜ್ಜೆ ಹಾಕಿದ್ದಲ್ಲದೇ ಸಮಾಜದ ಕಟ್ಟಕಡೆಯ ಸಮುದಾಯಕ್ಕೆ ಹಾಗೂ ನೇತ್ರ ಚಿಕಿತ್ಸೆ ಮುಂತಾದ ಸೇವಾಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಪಿಇಎಸ್‌ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಪಿ. ಕರ್ಜಗಿ ಮಾತನಾಡಿ, ನಮ್ಮ ವ್ಯಕ್ತಿತ್ವಕ್ಕೆ ರೂಪ ನೀಡಿದ ಹಾಗೂ ಏಳ್ಗೆಗೆ ಕಾರಣವಾದ ಸಮಾಜದ ಋಣ ತೀರಿಸಲು ಪ್ರತಿಯೊಬ್ಬರು ತಮ್ಮ ಜೀವನದ ಕೆಲ ಸಮಯವನ್ನು ಸಮಾಜ ಸೇವೆಗೆ ಮೀಸಲಿಡಬೇಕು. ಹಾಗಾದಾಗ ಮಾತ್ರ ಮನುಷ್ಯನ ಬದುಕು ಸಾರ್ಥಕಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

Advertisement

ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಐ.ಬಿ. ಬಿರಾದಾರ ಮಾತನಾಡಿ, ಸಮಾಜ ಸೇವೆಗಿಂತ ಮಿಗಿಲಾದ ಈಶ ಸೇವೆ ಬೇರೆ ಯಾವುದು ಇಲ್ಲ ಎಂದು ಹೇಳಿದರು.

ಲಯನ್ಸ್‌ ಕ್ಲಬ್‌ ಸದಸ್ಯರಾದ ಎಸ್‌.ಪಿ. ಚಾಗಶೆಟ್ಟಿ, ಎಸ್‌.ಎಸ್‌. ಪಾಟೀಲ, ಎಂ.ಆರ್‌. ಲೋಣಿ, ನೆಹರು ಪೋರವಾಲ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಾಚಾರ್ಯ ಜಿ.ಎಸ್‌. ಕಡಣಿ ಸ್ವಾಗತಿಸಿದರು. ಉಪನ್ಯಾಸಕ ಪರಮಾನಂದ ಬಿರಾದಾರ ನಿರೂಪಿಸಿದರು. ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಐ.ಬಿ. ಬಿರಾದಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next