Advertisement

ರಾಜಕಾರಣದ ಮಾತು ಹಳಿ ತಪ್ಪದಿರಲಿ

02:33 AM Aug 16, 2021 | Team Udayavani |

ರಾಜಕೀಯವಾಗಿ ತಾವೇ ಸರ್ವಜ್ಞರೆಂದು ಅಬ್ಬರಿಸುವ ನಾಯಕರು ದಿನ ನಿತ್ಯ ಒಂದಿಲ್ಲೊಂದು ಮಾತುಗಳನ್ನಾಡಿ ವಿವಾದವನ್ನು ಸೃಷ್ಟಿ ಸುತ್ತಿದ್ದಾರೆ. ಇದಕ್ಕೆ ಆ ಪಕ್ಷ, ಈ ಪಕ್ಷವೆಂಬ ಅಂತರವೇನಿಲ್ಲ. “ರಸಿಕರಾ ಡುವ ಮಾತು ಶಶಿ ಉದಯವಾದಂತೆ, ರಸಿಕರಲ್ಲದವರ ಬಿರು ನುಡಿಯು ಕಿವಿಯೊಳು ಕೂರ್ದಸಿಯ ಬಲಿದಂತೆ’ ಎಂದು ಸರ್ವಜ್ಞನ ಮಾತು. ಹಾಗೆಯೇ “ಮಾತು ಬಂದಲ್ಲಿ ತಾ ಸೋತು ಬರುವುದು ಲೇಸು, ಮಾತಿಂಗೆ ಮಾತ ಮತನಿಸೆ ವಿಧಿ ಬಂದು ಆತುಕೊಂಡಿಹುದು,’ ಎಂದೂ ಸರ್ವಜ್ಞ ಉಚ್ಚರಿಸಿದ್ದಾನೆ. ಇವೆಲ್ಲವನ್ನೂ ನಮ್ಮ ರಾಜಕಾರಣಿಗಳು ಅನುಸರಿಸಿದರೆ, ಅದರಲ್ಲೂ ಒಳ್ಳೆಯ ಸಂಸ್ಕಾರ, ಸಚ್ಚಾರಿತ್ರ್ಯಕ್ಕೆ ಹೆಸರಾ ಗಿರುವ ಕರುನಾಡಿನ ರಾಜಕಾರಣಿಗಳು ಅನುಸರಿಸಿದರೆ ಅಷ್ಟೇ ಸಾಕು!

Advertisement

ನಮ್ಮ ರಾಜಕಾರಣಿಗಳಿಗೆ “ಮಾತಿನ ಪಾಠ’ವನ್ನು ಹೇಳುವಂಥ ಸಂದರ್ಭ ಬಂದಿರುವುದು ವಿಪರ್ಯಾಸ. ರಾಜ್ಯದಲ್ಲಿ ಸದ್ಯ ಸದ್ದು ಮಾಡುತ್ತಿರುವ “ಮಾತಿನ ಹದತಪ್ಪಿದ’ ನಾಯಕರು ಸರ್ವಪಕ್ಷಗಳಿಗೆ ಸೇರುತ್ತಾರೆ. ವಿಶೇಷ ಎಂದರೆ, ಈ ನಾಯಕರೆಲ್ಲರೂ ಸಂವಿಧಾನದ ವಿಧಿವತ್ತಳೆ ಗನ್ವಯ ಶಪಥಗೈದು ವಿಧಾನಸಭೆ ಪ್ರವೇಶಿದವರು.

ನಾಯಕರೊಬ್ಬರು ನೆಹರೂ ಬಾರ್‌, ನೆಹರೂ ಹುಕ್ಕಾ ಬಾರ್‌ ಎಂದು ಜರೆದರೆ, ಪ್ರತ್ಯುತ್ತರವಾಗಿ ವಾಜಪೇಯಿ ಬಾರ್‌ ಎಂದು ಇನ್ನೊಬ್ಬರು ಜರೆಯುತ್ತಾರೆ. ಈ ಮಾತಿನ ಮರ್ಮರಗಳಲ್ಲಿ ಭಾಗಿಯಾದವರೆಲ್ಲರೂ ಸಾರ್ವಜನಿಕವಾಗಿ ತಮ್ಮನ್ನು ತಾವು ತಮ್ಮ ಮಾತುಗಳಿಂದಲೇ ಬೆತ್ತಲು ಮಾಡಿಕೊಂಡಿದ್ದಾರೆ! ರಾಷ್ಟ್ರಮಟ್ಟದಲ್ಲಿ ರಾಜಕಾರಣಕ್ಕೆ, ರಾಜಕೀಯ ಸುಸಂಸ್ಕೃತಿಗೆ ಪ್ರಖ್ಯಾತವಾದ ಕರ್ನಾಟಕಕ್ಕೆ ಇಂಥ ಘಟನೆಗಳು ನಿಜಕ್ಕೂ ಕಪ್ಪುಚುಕ್ಕೆ. ಇದರಿಂದ ಆ ನಾಯಕರಿಗೆ ರಾಜಕೀಯ ಲಾಭ ಸಿಗಬಹುದು ಎಂದು ಕೊಂಡರೆ ತಪ್ಪು, ಅವರ ಸಿಟ್ಟಿನ, ಸೆಡವಿನ ಮಾತುಗಳನ್ನು ನಂಬಲು ಮತದಾರರು ದಡ್ಡರಲ್ಲ. ಉತ್ತಮ ರಾಜಕೀಯ ಮಾಡಿ, ರಾಜ್ಯದ ಬೆಳವಣಿಗೆಗೆ ಕೆಲಸ ಮಾಡಿ, ರಾಷ್ಟ್ರದಲ್ಲೇ ರಾಜ್ಯದ ಕೀರ್ತಿಯನ್ನು ಸದಾ ಬೆಳಗುವ ಕಾಯಕ ಮಾಡಬೇಕೆನ್ನುವುದು ಜನರ ಆಶಯ.

ಅದೇನೆ ಇರಲಿ, ಸರಕಾರಿ ಯೋಜನೆಗಳು ಜನರನ್ನು ಶತಪ್ರತಿಶತ ತಲುಪುತ್ತಿಲ್ಲ! ಆದರೆ ಆ ಯೋಜನೆಗಳಿಗೊಂದು ರಾಜಕಾರಣಿಯ ಹೆಸರಿಟ್ಟು ಮಾಡುವ ರಾಜಕಾರಣವೂ ತಪ್ಪು. ಮತ್ತೆ ಮತ್ತೆ ಆ ತಪ್ಪನ್ನು ಮರುಕಳಿಸುತ್ತಿರುವ ನಾಯಕರು, ರಾಜಕೀಯಕ್ಕೋಸ್ಕರ ಕೆಟ್ಟ ರೀತಿ ಯಲ್ಲಿ ಹಳಿಯುತ್ತಿರುವುದೂ ತಪ್ಪು! ನಡುನಡುವೆ, ರಾಷ್ಟ್ರ ಕಟ್ಟಿದ ನಾಯಕರನ್ನು ಅವರ ವೈಯಕ್ತಿಕ ಬದುಕಿನ ಹಿನ್ನೆಲೆಯಲ್ಲಿ ಎಳೆತಂದು ರಾಜಕೀಯ ಮಾಡುವುದು ಕೀಳು ಮಟ್ಟದ ರಾಜಕಾರಣವಾದೀತು. ಈಗ ಚರ್ಚೆಯಲ್ಲಿರುವ ನಾಯಕರು ಯಾವುದೇ ಪಕ್ಷಕ್ಕೆ ಸೇರಿದವರಾಗಿದ್ದರೂ ಈ ದೇಶಕ್ಕೆ ಅವರು ನೀಡಿದ ಕೊಡುಗೆ ಅಗಣ್ಯವೇನಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೆ ಚರ್ಚೆಗೆ ಸಾಕಷ್ಟು ಪ್ರಬುದ್ಧª ಅವಕಾಶಗಳಿವೆ. ಅದನ್ನು ಹೊರತುಪಡಿಸಿ ನಾಯಕರ ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚಿಸುವುದು, ಕೀಳುಭಾಷೆಯಲ್ಲಿ ಮಾತನಾ ಡುವುದು ತರವಲ್ಲ. ಸದ್ಯಕ್ಕೆ ಕೊರೊನಾ, ನಿರುದ್ಯೋಗ, ಪ್ರವಾಹದಂಥ ಹಲವು ಸಮಸ್ಯೆಗಳಿವೆ. ಆ ಕಡೆ ಸ್ವಲ್ಪ ಗಮನ ನೀಡುವಂತಾದರೆ ಸಾಕೆನ್ನುವಂತಾಗಿದೆ. ಜತೆಗೆ ಕರ್ನಾಟಕದ ಇತಿಹಾಸಕ್ಕೆ, ಅಕ್ಷರ-ಭಾಷಾ ಸಂಸ್ಕೃತಿಗೆ ಕೆಡುಕು ಮಾಡಿ ರಾಜ್ಯದ ಮಣ್ಣನ್ನು ಮಲಿನ ಮಾಡಬೇಡಿ ಎಂಬುದು ಜನರ ಒಕ್ಕೊರಲ ಅಂಬೋಣ. ನಾಯಕರ ಮಾತುಗಳು ಇಡೀ ನಾಡಿಗೆ ಆದರ್ಶಪ್ರಾಯವಾಗಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next