ಬೆಂಗಳೂರು: “ನನಗೂ ಐಎಂಎ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ. ಮನ್ಸೂರ್ ಖಾನ್ ಯಾರು ಎನ್ನುವುದೇ ನನಗೆ ಗೊತ್ತಿಲ್ಲ’ ಎಂದು ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಐಎಂಎ ಪ್ರಕರಣದಲ್ಲಿ ನೀವು ಬಚಾವಾದಿರಿ ಎಂದು ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ವೀಡಿಯೋದಲ್ಲಿ ತಮ್ಮ ಹೆಸರು ಪ್ರಸ್ತಾಪ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, “ಮನ್ಸೂರ್ ಖಾನ್ ನನ್ನ ಮೇಲೆ ಆರೋಪ ಮಾಡಿಲ್ಲ. ನೀವು ತಪ್ಪಿಸಿಕೊಂಡಿದ್ದೀರಿ ಎಂದು ಹೇಳಿದ್ದಾರಷ್ಟೇ.
ನಾನು ಹಣ ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿಲ್ಲ. ಯಾರು, ಯಾರ ಮೇಲಾದರೂ ಆರೋಪ ಮಾಡಬಹುದು. ಆರೋಪ ಮಾಡುವುದಕ್ಕೆ ಬೆಲೆ ಇದೆಯೇ?’ ಎಂದು ರೆಹಮಾನ್ ಖಾನ್ ಪ್ರಶ್ನಿಸಿದ್ದಾರೆ. “ಐಎಂಎ ಪ್ರಕರಣದಲ್ಲಿ ನೂರಾರು ಜನರಿಗೆ ಅನ್ಯಾಯವಾಗಿದೆ.
ಈ ಪ್ರಕರಣದಲ್ಲಿ ಸತ್ಯಾ ಸತ್ಯತೆ ಹೊರ ಬರಬೇಕು. ನನ್ನ ಮೇಲೆ ಯಾವ ತನಿಖೆ ಬೇಕಾದರೂ ಮಾಡಲಿ, ಎಸ್‌ಐಟಿ ತನಿಖೆಗೂ ನಾನು ಸಹಕರಿಸುತ್ತೇನೆ. ಅದು ವಂಚನೆಯ ಕಂಪನಿ ಎನ್ನುವುದು ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್‌ಗೂ ಗೊತ್ತಿದೆ. ಆದರೂ, ಯಾರೂ ತಡೆಯುವ ಪ್ರಯತ್ನ ಮಾಡಲಿಲ್ಲ.
ನನಗೂ, ಆ ಸಂಸ್ಥೆಗೂ ಸಂಬಂಧವೇ ಇಲ್ಲ. ನಾನು ಸಮುದಾಯದ ನಾಯಕ ಆದ ಮಾತ್ರಕ್ಕೆ ನನ್ನನ್ನು ಪ್ರಕರಣದಲ್ಲಿ ಎಳೆದು ತರುವುದು ಎಷ್ಟು ಸರಿ?. ನನಗೆ ಯಾವುದೇ ಭಯವಿಲ್ಲ. ಜನರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪೊಲೀಸ್ ಹಾಗೂ ಸರ್ಕಾರ ಮಾಡಬೇಕು’ ಎಂದು ಅವರು ತಿಳಿಸಿದ್ದಾರೆ.