Advertisement

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

10:36 PM Jun 16, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಶಾಲಾ ಕಟ್ಟಡಗಳ ದುರಸ್ತಿ ಸೇರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಅಧಿಕಾರಿಗಳಿಗೆ ಶಾಲಾ ಶಿಕ್ಷಣ ಆಯುಕ್ತರು ಸೂಚನೆ ನೀಡಿದ್ದಾರೆ.

Advertisement

ಶಿಥಿಲಾವಸ್ಥೆಯಲ್ಲಿರುವ ಕೆಲವು ಶಾಲಾ ಕಟ್ಟಡಗಳು ಮಳೆಯ ಕಾರಣದಿಂದ ಹಾನಿಗೊಳಗಾಗುವ ಅಥವಾ ಬಿದ್ದು ಹೋಗುವ ಸಂಭವವಿರುತ್ತದೆ. ಹೀಗಾಗಿ, ಅಂತಹ ಶಾಲಾ ಕಟ್ಟಡಗಳನ್ನು, ತರಗತಿಯ ಕೊಠಡಿಗಳನ್ನು ಮತ್ತು ಶೌಚಾಲಯಗಳನ್ನು ಬಳಸದೇ ಸಮೀಪದ ಸುಸ್ಥಿತಿಯಲ್ಲಿರುವ ಕಟ್ಟಡ, ಕೊಠಡಿಗಳನ್ನು ಹಾಗೂ ಶೌಚಾಲಯಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.

ಅಗತ್ಯಬಿದ್ದರೆ ರಜೆ ಕೊಡಲು ಸೂಚನೆ
ವಿದ್ಯಾರ್ಥಿಗಳು ಶಿಥಿಲಾವಸ್ಥೆಯಲ್ಲಿರುವ ಕಟ್ಟಡ, ಕೊಠಡಿ, ಶೌಚಾಲಯ, ಕಾಂಪೌಂಡ್‌ ಹಾಗೂ ಶಾಲಾ ಆವರಣದಲ್ಲಿನ ಮರಗಳ ಸಮೀಪದಲ್ಲಿ ಸುತ್ತಾಡದಂತೆ ಅಗತ್ಯ ಕ್ರಮ ವಹಿಸಬೇಕು. ಕಟ್ಟಡಗಳು ಅಪಾಯಕಾರಿಯಾಗಿದ್ದರೆ ಅವುಗಳನ್ನು ತೆರವುಗೊಳಿಸಬೇಕು. ಶಾಲಾ ಆವರಣದಲ್ಲಿ ನೀರು ನಿಂತಿದ್ದರೆ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ತೆರವುಗೊಳಿಸಬೇಕು. ಅಗತ್ಯಬಿದ್ದರೆ ಬಿಇಒ, ಡಿಡಿಪಿಐಗಳ ಅನುಮತಿ ಪಡೆದು ಶಾಲೆಗಳಿಗೆ ರಜೆ ಘೋಷಿಸಬೇಕು. ಅಂದಿನ ಪಾಠ ಪ್ರವಚನಗಳನ್ನು ರಜಾ ದಿನಗಳಲ್ಲಿ ಸರಿದೂಗಿಸಬೇಕು ಎಂದು ಸೂಚನೆ ನೀಡಲಾಗಿದೆ.

ಜೂನ್‌ 21ಕ್ಕೆ ಶಾಲೆಗಳಲ್ಲಿ ಯೋಗ ದಿನ
ಬೆಂಗಳೂರು: ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ಜೂ. 21ರಂದು 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕವು ನಿರ್ದೇಶನ ನೀಡಿದೆ. ಜಿಲ್ಲಾ ಉಪ ನಿರ್ದೇಶಕರು ಹಾಗೂ ಉಪ ಸಮನ್ವಯ ಯೋಜನಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಯಶಸ್ವಿಗೊಳಿಸುವಂತೆ ಕ್ರಮ ವಹಿಸಬೇಕು. ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ (ಆಡಳಿತ ಮತ್ತು ಅಭಿವೃದ್ಧಿ) ಈ ಸೂಚನೆ ನೀಡಲಾಗಿದೆ. ಹಾಗೆಯೇ ಜೂ. 25ರೊಳಗೆ ಫೋಟೋಗಳೊಂದಿಗೆ ವರದಿಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next