ಬೆಂಗಳೂರು: ಒಂದೆಡೆ ವೈದ್ಯ ಸಲಹಾ ಚೀಟಿಯನ್ನು ಕನ್ನಡದಲ್ಲಿ ನೀಡುವ ಪ್ರಯತ್ನ ನಡೆಯುತ್ತಿದ್ದರೆ ಇನ್ನೊಂದೆಡೆ ಎಂಜಿನಿಯರಿಂಗ್‌ನಲ್ಲಿ ಕಳೆದ 4 ವರ್ಷದಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಪ್ರಯತ್ನ ಸಂಪೂರ್ಣ ವಿಫಲವಾಗುತ್ತಿದೆ. ರಾಜ್ಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಮತ್ತು ಮೆಕಾನಿಕಲ್ ಎಂಜಿನಿಯರಿಂಗ್‌ನ್ನು ಕನ್ನಡದಲ್ಲಿ ಓದುವ ಅವಕಾಶವಿದ್ದರೂ ಒಬ್ಬೇ ಒಬ್ಬ ವಿದ್ಯಾರ್ಥಿ ನೋಂದಣಿ ಆಗುತ್ತಿಲ್ಲ. ಈ ವರ್ಷ ಒಬ್ಬ ವಿದ್ಯಾರ್ಥಿ ಮೆಕಾನಿಕಲ್ ಎಂಜಿನಿಯರಿಂಗ್ ಕನ್ನಡದಲ್ಲಿ ಓದಲು ದಾಖಲಾಗಿದ್ದರೂ ತನ್ನ ಓದು ಮುಂದುವರಿಸಲು ಹಿಂದೇಟು ಹಾಕಿದ್ದಾನೆ.
2020-21ರ ಸಾಲಿನಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದೇ ವರ್ಷ 17 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದು ಮುಂದುವರಿಸಲು ಆಸಕ್ತಿ ತೋರಿದ್ದರೂ ಕಾಲೇಜಿಗೆ ದಾಖಲಾಗಿರಲಿಲ್ಲ. 21-22ರಲ್ಲಿ 10, 22-23ರಲ್ಲಿ 30 ಮತ್ತು 23-24ರ ಸಾಲಿನಲ್ಲಿ ಒಬ್ಬ ವಿದ್ಯಾರ್ಥಿ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಓದಲು ಆಪ್ಷನ್ ಎಂಟ್ರಿ ಮಾಡಿಕೊಂಡಿದ್ದರು. ಆದರೆ ಅಂತಿಮವಾಗಿ ಕಾಲೇಜಿಗೆ ದಾಖಲಾಗಿರಲಿಲ್ಲ.
ಆದರೆ, ಈ ಬಾರಿ ಇಬ್ಬರು ಕನ್ನಡದಲ್ಲಿ ಎಂಜಿನಿಯರಿಂಗ್ ಓದಲು ಆಸಕ್ತಿ ತೋರಿದ್ದರು. ಒಬ್ಬ ವಿದ್ಯಾರ್ಥಿ ಚಿಕ್ಕಬಳ್ಳಾಪುರದ ಎಸ್‌ಜೆಸಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಅಪ್ಷನ್ ಎಂಟ್ರಿಯಲ್ಲಿ ಆಯ್ಕೆ ಮಾಡಿಕೊಂಡು ಸೀಟು ಪಡೆದಿದ್ದರೂ ಕಾಲೇಜಿಗೆ ಶುಲ್ಕ ಕಟ್ಟಿ ಸೇರ್ಪಡೆ ಆಗಿಲ್ಲ. ಆದರೆ, ಮೈಸೂರಿನ ಮಹಾರಾಜ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಗೆ (ಎಂಐಟಿ) ಒಬ್ಬ ವಿದ್ಯಾರ್ಥಿ ದಾಖಲಾಗಿದ್ದಾನೆ. ಕಾಲೇಜಿಗೆ ಇನ್ನೂ ಪ್ರವೇಶ ಪಡೆದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಎಂಐಟಿಯ ಪ್ರಾಂಶುಪಾಲ ಪ್ರೊ| ಬಿ.ಜಿ. ನರೇಶ್ ಕುಮಾರ್, ಮೊದಲ ಬಾರಿಗೆ ಕನ್ನಡದಲ್ಲಿ ಎಂಜಿನಿಯರಿಂಗ್ ಓದಲು ಒಬ್ಬ ವಿದ್ಯಾರ್ಥಿ ಪ್ರವೇಶ ಪಡೆದಿರುವುದು ಸಂತಸದ ವಿಚಾರ. ಆದರೆ ಆತ ಇನ್ನೂ ತರಗತಿಗೆ ಹಾಜರಾಗಿಲ್ಲ. ನಾವು ಈ ಬಗ್ಗೆ ಆತನಲ್ಲಿ ವಿಚಾರಿಸಿದಾಗ ಕೋರ್ಸ್ ಬದಲಾಯಿಸುವಂತೆ ಹೇಳುತ್ತಿದ್ದಾನೆ. ಕೋರ್ಸ್ ಬದಲಾಯಿಸುವ ಅಧಿಕಾರ ನಮಗಿಲ್ಲ. ಈ ವಾರ ವಿದ್ಯಾರ್ಥಿಯ ಜೊತೆ ಅಂತಿಮ ತೀರ್ಮಾನ ಪಡೆದುಕೊಳ್ಳಲಾಗುವುದು. ಒಂದು ವೇಳೆ ವಿದ್ಯಾರ್ಥಿ ಕನ್ನಡದಲ್ಲಿ ಓದಲು ಆಸಕ್ತಿ ತೋರಿದರೆ ಅತನ ಪಠ್ಯ ಚಟುವಟಿಕೆಗೆ ಅಗತ್ಯ ನೆರವು ನೀಡಲಾಗುವುದು ಎಂದಿದ್ದಾರೆ.
ಕನ್ನಡದಲ್ಲೇಕೆ ಎಂಜಿನಿಯರಿಂಗ್?
ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣವನ್ನು ಪ್ರೊತ್ಸಾಹಿಸುವ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಕ್ಕೆ ಅನುಗುಣವಾಗಿ ರಾಜ್ಯದಲ್ಲಿಯೂ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಆರಂಭಿಸಲಾಯಿತು. ಆದರೆ, ಕೋರ್ಸ್ ಆರಂಭಿಸಿ 4 ವರ್ಷವಾಗಿದ್ದರೂ ಒಬ್ಬನೇ ಒಬ್ಬ ವಿದ್ಯಾರ್ಥಿಯ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್‌ಗೆ ದಾಖಲಾಗಿ ಓದುವ ಪ್ರಯತ್ನ ಮಾಡಿಲ್ಲ. ರಾಜ್ಯದಲ್ಲಿ ಎಂಐಟಿ, ಎಸ್‌ಜೆಜಿಸಿಯ ಜೊತೆಗೆ ಬಿಕೆಐಟಿ, ಭಾಲ್ಕಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಓದುವ ಅವಕಾಶವಿದೆ. ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಓದದಿರುವುದು, ಕನ್ನಡ ಮಾಧ್ಯಮದಲ್ಲಿ ಓದಿದರೆ ಮುಂದೆ ಉದ್ಯೋಗ ಸಿಗಬಹುದೇ ಎಂಬ ಆತಂಕ, ಪ್ರಚಾರದ ಕೊರತೆಯಿಂದ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಓದಲು ಹೆಚ್ಚಿನ ಆಸಕ್ತಿಯನ್ನು ವಿದ್ಯಾರ್ಥಿಗಳು ತೋರುತ್ತಿಲ್ಲ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.
– ರಾಕೇಶ್ ಎನ್.ಎಸ್.