ವಿಜಯಪುರ : ಸಂವಿಧಾನ ಬದಲಿಸುವ ಹೇಳಿಕೆ ನೀಡುವ ಯಾವುದೇ ಪಕ್ಷದ ನಾಯಕನ ವಿರುದ್ಧ ನಾನು ಇರುತ್ತೇನೆ. ಅನಂತಕುಮಾರ ಹೆಗಡೆ ಅವರಿಗೆ ಉತ್ತರ ಕನ್ನಡ ಕ್ಷೇತ್ರದಿಂದ ಟಿಕೆಟ್ ಕೊಡುವುದು ಬೇಡ. ಇಲ್ಲಿ ಯಾರನ್ನೇ ಅಭ್ಯರ್ಥಿ ಮಾಡಿದರೂ ಮೋದಿ ಹೆಸರಲ್ಲೇ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ವಕ್ತಾರ ಚಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇದೇ ಅನಂತಕುಮಾರ ಸಂವಿಧಾನ ಬದಲಾವಣೆ ಕುರಿತು ಮಾತನಾಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡುತ್ತಲೇ ಪಾರ್ಲಿಮೆಂಟ್‍ಗೆ ಕರೆಸಿ ಕ್ಷಮೆ ಕೇಳಿಸಿದ್ದರು, ಬಳಿಕ ಮಂತ್ರಿ ಸ್ಥಾನ ಹೋಗಿತ್ತು. ನಾನು ಮಾತ್ರವಲ್ಲ ಬಿಜೆಪಿ ಪಕ್ಷದ ಎಲ್ಲ ನಾಯಕ ನಿಲುವು ಇದೇ ಆಗಿದ್ದು, ವಯಕ್ತಿಕ ನಿವಿಲು, ನಿರ್ಧಾರ, ಮಾತಿಗೆ ಮಾನ್ಯತೆ ಇಲ್ಲ ಎಂದರು.
ಸಮಾಜದಲ್ಲಿ ಅಸ್ಪøಶ್ಯತೆ ಹೋಗಿ ಸಮಾನತೆ ಬರುವ ವರೆಗೆ ಮೀಸಲಾತಿ ಬದಲಾವಣೆ ಸಾಧ್ಯವಿಲ್ಲ. ಪ್ರಧಾನಿ ಹುದ್ದೆಗೆ ಏರುವ ಮುನ್ನ ಸಂವಿಧಾನಕ್ಕೆ ಶಿರಬಾಗಿ ನಮಸ್ಕರಿಸಿ ಪ್ರಮಾಣ ವಚನ ಸ್ವೀಕರಿಸಿರುವ ಪ್ರಧಾನಿ ನರೇಂದ್ರ ಮೋದಿ, ಚಾ ಮಾರುವ ಹುಡುಗ ದೇಶದ ಪ್ರಧಾನಿ ಆಗುವ ಅವಕಾಶ ಕಲ್ಪಿಸಿದ್ದೇ ಸಂವಿಧಾನ ಎಂದಿದ್ದು, ಇದು ನಮ್ಮ ಸರ್ಕಾರದ ಬದ್ಧತೆ ಎಂದರು.
ಸಂವಿಧಾನ ತಿದ್ದುಪಡಿಗೆ 400 ಸ್ಥಾನವೂ ಬೇಕಿಲ್ಲ. ಸಾಂದರ್ಭಿಕ ತಿದ್ದಪಡಿ ಅಗತ್ಯವನ್ನು ಅಂಬೇಡ್ಕರ್ ಅವರೇ ಸಂವಿಧಾನದಲ್ಲಿ ಹೇಳಿದ್ದು, ಈಗಾಗಲೇ 104 ತಿದ್ದುಪಡಿಗಳಾಗಿವೆ. ಇಷ್ಟಕ್ಕೂ ಸಂವಿಧಾನ ಜಾರಿಗೆ ಬಂದ ಬಳಿಕ ದೇಶದಲ್ಲಿ ಹೆಚ್ಚು ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ 95 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದೆ ಎಂದು ಅನಂತಕುಮಾರ ಹೆಗಡೆ ಅವರ ಮಾತಿಗೆ ತಮ್ಮ ವಿರೋಧವನ್ನು ಪುನರುಚ್ಚರಿಸಿದರು.
ದೇಶಕ್ಕೆ ಸಂವಿಧಾನ ನೀಡಿದ್ದು ಕಾಂಗ್ರೆಸ್, ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಜೀವ ಗಾಂಧಿ, ರಾಹುಲ್ ಗಾಂಧಿ ಇಂದಿರಾ ಗಾಂಧಿ ಎಂದಿದ್ದ ಸಂತೋಷ ಲಾಡ್ ಹೇಳಿಕೆಯನ್ನು ಒಬ್ಬ ಕಾಂಗ್ರೆಸ್ ನಾಯರಕೂ ಆಕ್ಷೇಪಿಸಲಿಲ್ಲ. ಸಂವಿಧಾನದ ವಿಷಯದಲ್ಲಿ ಅನಗತ್ಯವಾಗಿ ಹೇಳಿಕೆ ಕೊಡುವವರು ಯಾರೇ ಆಗಿದ್ದರೂ, ಸ್ವಪಕ್ಷೀಯರೇ ಆಗಿದ್ದರೂ ನಮ್ಮ ವಿರೋಧ ಇದ್ದೇ ಇರುತ್ತದೆ ಎಂದರು.