Advertisement

ಸಾಂವಿಧಾನಿಕ ಬಿಕ್ಕಟ್ಟಿಗೆ ಎಡೆಮಾಡಿಕೊಡದಿರಲಿ

12:21 AM Jan 03, 2020 | Team Udayavani |

ಕೇರಳ ಸರಕಾರದ ನಡೆಯಿಂದಾಗಿ ಹೋರಾಟದ ದಿಕ್ಕು ಬದಲಾದಂತಾಗಿದೆ. ಅದು ಈಗ ಒಂದು ಸಮುದಾಯ ಅಥವಾ ಒಂದು ಪಕ್ಷ ನಡೆಸುವ ಹೋರಾಟದ ಬದಲಾಗಿ ಸಮಾನ ಮನಸ್ಕರೆಲ್ಲ ಸೇರಿ
“ದೇಶದ ಜಾತ್ಯಾತೀತ ಚೌಕಟ್ಟನ್ನು ಉಳಿಸಿಕೊಳ್ಳಲು’ ನಡೆಸುವ ಹೋರಾಟದ ರೂಪವನ್ನು ಪಡೆದುಕೊಂಡಿದೆ.

Advertisement

ಪೌರತ್ವ ತಿದ್ದುಪಡಿ ಕಾಯಿದೆಯನ್ನು (ಸಿಎಎ) ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಜೂರಾಗಿರುವುದು ರಾಜ್ಯ ಮತ್ತು ಕೇಂದ್ರದ ನಡುವೆ ಗಂಭೀರವಾದ ಸಾಂವಿಧಾನಿಕ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಮಂಡಿಸಿದ ನಿರ್ಣಯ ಬಹುತೇಕ
ಅವಿರೋಧಿವಾಗಿ ಮಂಜೂರಾಗಿದೆ. ಬಿಜೆಪಿಯ ಏಕೈಕ ಶಾಸಕ ಓ.ರಾಜಗೋಪಾಲ್‌ ಮಾತ್ರ ನಿರ್ಣಯವನ್ನು ವಿರೋಧಿಸಿದ್ದಾರೆ. ವಿಪಕ್ಷ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ನ ಬೆಂಬಲವೂ ನಿರ್ಣಯಕ್ಕಿತ್ತು. ಈ ಮೂಲಕ ಸಿಎಎ ವಿರುದ್ಧದ ಹೋರಾಟಕ್ಕೆ ವಿಪಕ್ಷಗಳು ಸಾಂವಿಧಾನಿಕವಾದ ಆಯಾಮವನ್ನು ನೀಡಿದಂತಾಗಿದೆ.

ಕೇರಳದ ಜೊತೆಗೆ ಪಶ್ಚಿಮ ಬಂಗಾಳ ಮತ್ತು ಎನ್‌ಡಿಎ ಆಡಳಿತವಿರುವ ಬಿಹಾರ ಸೇರಿದಂತೆ ಏಳು ರಾಜ್ಯಗಳು ಈಗಾಗಲೇ ಸಿಎಎ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ಅನುಷ್ಠಾನಿಸಲು ತಕರಾರು ತೆಗೆದಿವೆ. ಈ ಪೈಕಿ ಪಶ್ಚಿಮ ಬಂಗಾಳದಲ್ಲಿ ಎನ್‌ಎಎ ವಿರುದ್ಧ ತೀವ್ರ ಹೋರಾಟ ನಡೆಯುತ್ತಿದೆ. ಎನ್‌ಎಎ ವಿರುದ್ಧ ನಡೆಯುತ್ತಿರುವ ಹೋರಾಟದ ರಾಜಕೀಯ ಕಾರಣಗಳು ಏನೇ ಇದ್ದರೂ ಅದು ಸೃಷ್ಟಿಸಿರುವ ಸಾಂವಿಧಾನಕ ಬಿಕ್ಕಟ್ಟು ಮಾತ್ರ ಕಳವಳಕಾರಿಯಾದದ್ದು.

ಸಾಂವಿಧಾನಿಕವಾಗಿ ರಾಜ್ಯದ ವಿಧಾನಸಭೆಗೆ ಸಂಸತ್ತು ಅಂಗೀಕರಿಸಿರುವ ಮಸೂದೆಯ ವಿರುದ್ಧ ನಿರ್ಣಯ ಕೈಗೊಳ್ಳುವ ಅಧಿಕಾರ ಇಲ್ಲ. ಅಲ್ಲದೆ ಪೌರತ್ವ ನೀಡುವುದು ಕೇಂದ್ರದ ಅಧಿಕಾರ ವ್ಯಾಪ್ತಿಗೆ ಬರುವ ವಿಷಯ. ಇದರಲ್ಲಿ ರಾಜ್ಯಗಳು ಹಸ್ತಕ್ಷೇಪ ಮಾಡುವಂತಿಲ್ಲ. ಈ ಮಾತನ್ನು ಕೇರಳದ ರಾಜ್ಯಪಾಲರು ಕೂಡ ಹೇಳಿದ್ದಾರೆ.

ಕೇರಳದ ಸಿಪಿಎಂ ನೇತೃತ್ವದ ಎಡರಂಗ ಸರಕಾರಕ್ಕೆ ಸಿಎಎಯನ್ನು ವಿರೋಧಿಸುವ ಅನಿವಾರ್ಯತೆಯೂ ಇದೆ ಎನ್ನುವ ವಾದವೂ ಸರಿ. ತನ್ನಿಂದ ವಿಮುಖವಾಗಿರುವ ಮುಸ್ಲಿಂ ಸಮುದಾಯದ ಮತಗಳನ್ನು ಮರಳಿ ಗಳಿಸಿಕೊಳ್ಳಲು ಎಡರಂಗಕ್ಕೆ ಈ ಮಾದರಿಯ ನಡೆಯ ಅಗತ್ಯವಿತ್ತು. ಲೋಕಸಭಾ ಚುನಾವಣೆಯಲ್ಲಾದ ಹೀನಾಯ ಸೋಲಿಗೆ ಕೇರಳ ಜನಸಂಖ್ಯೆಯ ಸುಮಾರು ಶೇ. 44ರಷ್ಟಿರುವ ಮುಸ್ಲಿಂ ಸಮುದಾಯದವರು ಪಕ್ಷದಿಂದ ದೂರವಾದದ್ದೇ ಕಾರಣ ಎನ್ನುವುದನ್ನು ಎಡರಂಗದ ನಾಯಕರು ಅರಿತುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲೇ ಪಿಣರಾಯಿ ವಿಜಯನ್‌ ವಿಧಾನಸಭೆಯಲ್ಲಿ ಸಿಎಎ ಒಂದು ಸಮುದಾಯಕ್ಕೆ ಧಾರ್ಮಿಕ ನೆಲೆಯಲ್ಲಿ ತಾರತಮ್ಯ ಮಾಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಪಿಣರಾಯಿ ವಿಜಯನ್‌ ಸಿಎಎ ವಿರುದ್ಧದ ಹೋರಾಟದ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

Advertisement

ಆರಂಭದಲ್ಲಿ ಸಿಎಎ ವಿರುದ್ಧ ನಡೆದದ್ದು ಹಿಂಸಾತ್ಮಕ ಪ್ರತಿಭಟನೆ. ಇದನ್ನು ಆಡಳಿತ ವ್ಯವಸ್ಥೆ ಸುಲಭವಾಗಿ
ಹತ್ತಿಕ್ಕಿದೆ. ಆದರೆ ಕೇರಳ ಸರಕಾರದ ನಡೆಯಿಂದಾಗಿ ಹೋರಾಟದ ದಿಕ್ಕು ಬದಲಾದಂತಾಗಿದೆ. ಅದು ಈಗ ಒಂದು ಸಮುದಾಯ ಅಥವಾ ಒಂದು ಪಕ್ಷ ನಡೆಸುವ ಹೋರಾಟದ ಬದಲಾಗಿ ಸಮಾನ ಮನಸ್ಕರೆಲ್ಲ ಸೇರಿ “ದೇಶದ ಜಾತ್ಯಾತೀತ ಚೌಕಟ್ಟನ್ನು ಉಳಿಸಿಕೊಳ್ಳಲು’ ನಡೆಸುವ ಹೋರಾಟದ ರೂಪವನ್ನು ಪಡೆದುಕೊಂಡಿದೆ. ಇದು ಕೇಂದ್ರಕ್ಕೆ ಖಂಡಿತ ತಲೆನೋವಾಗುವ ಕೆಲಸ.

ಬೀದಿ ಹೋರಾಟಗಳನ್ನು ನಿಭಾಯಿಸಿದಷ್ಟು ಸುಲಭವಾಗಿ ಇಂಥ ಸೈದ್ಧಾಂತಿಕ ಮತ್ತು ತಾತ್ವಿಕ
ಹೋರಾಟಗಳನ್ನು ನಿಭಾಯಿಸಲು ಸಾಧ್ಯವಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಮತ್ತು ಕೇಂದ್ರದ ನಡುವಿನ ಸಂಬಂಧದಲ್ಲಿ ಬಿರುಕು ಮೂಡುವುದು ಹೊಸದಲ್ಲವಾದರೂ ಅದು ಸಾಂವಿಧಾನಿಕ ಬಿಕ್ಕಟ್ಟಿಗೆ ಎಡೆ ಮಾಡಿಕೊಡುವಷ್ಟು ಗಂಭೀರವಾಗದು. ಇದರಿಂದ ಅಂತಿಮವಾಗಿ ಒಕ್ಕೂಟ ವ್ಯವಸ್ಥೆಯೇ ವಿಫ‌ಲಗೊಳ್ಳುವ ಅಪಾಯವಿದೆ. ಸಿಎಎ ಮತ್ತು ಎನ್‌ಆರ್‌ಸಿಗೆ ರಾಜ್ಯಗಳು ವ್ಯಕ್ತಪಡಿಸುತ್ತಿರುವ ಕಳವಳವನ್ನು ಆಲಿಸಿ ಸಮರ್ಪಕಪರಿಹಾರವನ್ನು ಕಂಡುಕೊಳ್ಳುವ ಜವಾಬ್ದಾರಿ ಕೇಂದ್ರ
ಸರಕಾರದ್ದು. ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಕ್ತವಾಗಿ ಚರ್ಚೆ ನಡೆಸಿದ ಬಳಿಕ ಸೂಕ್ತ
ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಈಗ ಎದುರಾಗಿರುವ ಬಿಕ್ಕಟ್ಟನ್ನು ಸೌಹಾರ್ದಯುತವಾಗಿಯೇ ಬಗೆಹರಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next