ಬೀದರ: ಕಡತಗಳ ವಿಲೇವಾರಿ ವಿಳಂಬ ಸೇರಿದಂತೆ ಯಾವುದೇ ಕಾರ್ಯಕ್ಕೆ ಇನ್ಮುಂದೆ ಕೋವಿಡ್-19 ಕಾರಣ ಹೇಳಲೇಬಾರದು. ನಮ್ಮ ಕೆಲಸದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಡಿಸಿ ರಾಮಚಂದ್ರನ್ ಆರ್. ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಕಂದಾಯ ಸೇರಿದಂತೆ ವಿವಿಧ ಇಲಾಖೆ ಅ ಧಿಕಾರಿಗಳ ಜತೆ ಸಭೆ ನಡೆಸಿ ಅವರು ಮಾತನಾಡಿದರು.
ಕೋವಿಡ್ ನಮ್ಮ ನಿತ್ಯದ ಕೆಲಸ ಕಾರ್ಯಗಳ ಮೇಲೆ ಕೆಟ್ಟ ರೀತಿಯ ಪರಿಣಾಮ ಬೀರಿತು. ಇದರಿಂದಾಗಿ ಯಾವುದೇ ಕಾರ್ಯಗಳ ವಿಳಂಬಕ್ಕೆ ಇದುವರೆಗೆ
ಎಲ್ಲರೂ ಕೋವಿಡ್-19 ಕಾರಣ ಹೇಳಿದ್ದೇವೆ. ಆದರೆ, ಈಗ ಹಾಗೆ ಹೇಳುವಂತಿಲ್ಲ ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸಿದರು.
ತಮ್ಮ ಕೆಲಸ ಕಾರ್ಯಗಳಿಗೆ ತಾವೇ ಮುಖ್ಯಸ್ಥರಿದ್ದಂತೆ ಎಂದು ಆಯಾ ವಿಷಯಗಳಿಗೆ ಇರುವ ವಿಷಯ ನಿರ್ವಾಹಕರ ಕಾರ್ಯವೈಖರಿ ಮಹತ್ವ ಮನವರಿಕೆ ಮಾಡಿದ ಡಿಸಿ, ಕಡತಗಳ ನಿರ್ವಹಣೆ ಎಲ್ಲಿಯೂ ನಿಲ್ಲದಂತೆ ನಿರಂತರತೆಗೆ ಒತ್ತು ಕೊಡಬೇಕು. ತಾವುಗಳು ತಮ್ಮ ಕೆಳಗಿನವರಿಗೆ ಸರಿಯಾದ ಮಾರ್ಗದರ್ಶನ ಮಾಡಿ ಅವರಿಂದ ಕೆಲಸ ತೆಗೆದುಕೊಳ್ಳಬೇಕು ಎಂದು ವಿಷಯ ನಿರ್ವಾಹಕರಿಗೆ ಕಿವಿಮಾತು ಹೇಳಿದರು.
ತಹಶೀಲ್ದಾರ್‌ಗೆ ಸೂಚನೆ: ಪರಿಹಾರ ಪೋರ್ಟಲ್‌ನಲ್ಲಿ ಪ್ರಗತಿ ಮಾಹಿತಿ ಅಳವಡಿಕೆ, 2020ನೇ ಸಾಲಿನ ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆ ಅನುಷ್ಠಾನದ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ 634 ಗ್ರಾಮಗಳ ಪೈಕಿ 590 ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನ ಭೂಮಿ ಇದೆ. ಇನ್ನು 44 ಗ್ರಾಮಗಳಲ್ಲಿ ಇರುವುದಿಲ್ಲ ಎನ್ನುವ ಮಾಹಿತಿ ಇದೆ. ಆದ್ದರಿಂದ ಆಯಾ ಗ್ರಾಮಗಳಿಗೆ ತಾವುಗಳು ಖುದ್ದು ಭೇಟಿ ನೀಡಿ, ಜಮೀನು
ಗುರುತಿಸಿ ಪ್ರಸ್ತಾವನೆ ಸಲ್ಲಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆಸಬೇಕು ಎಂದು ತಹಶೀಲ್ದಾರರು, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರಿಗೆ ಸೂಚಿಸಿದರು.
ಜಿಪಂ ಸಿಇಒ ಸೂಚನೆ: ವಿಡಿಯೋ ಸಂವಾದದಲ್ಲಿ ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಮಾತನಾಡಿ, ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ
ಸಂಬಂಧಿಸಿದಂತೆ ಜಿಲ್ಲೆಯ ಯಾವ ಪಂಚಾಯಿತಿ ಗಳಲ್ಲಿ ಜಮೀನು ಲಭ್ಯವಿರುವುದಿಲ್ಲವೋ ಅಂತಹ ಕಡೆಗಳಲ್ಲಿ ಜಮೀನು ಗುರುತಿಸಿ ಆ ಬಗ್ಗೆ ಕೂಡಲೇ
ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಬೇಕು. ಈಗಾಗಲೇ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಗುರುತಿಸಿದ ಜಮೀನಿನ ಹದ್ದು ಬಸ್ತು ಮಾಡುವ ಬಾಕಿ ಕಾರ್ಯ ಶೀಘ್ರ ನಡೆಸಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಡಿಸಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ್, ಭುವನೇಶ ಪಟೇಲ್, ತಹಶೀಲ್ದಾರರಾದ ಗಂಗಾದೇವಿ ಸಿ.ಎಚ್.,
ಚಂದ್ರಶೇಖರ, ಸಾವಿತ್ರಿ ಸಲಗರ, ಅಣ್ಣರಾವ್ ಪಾಟೀಲ, ನಾಗಯ್ಯ ಹಿರೇಮಠ ಹಾಗೂ ವಿವಿಧ ತಾಲೂಕುಗಳ ಕಂದಾಯ ನಿರೀಕ್ಷಕರು ಇದ್ದರು.