“ನನ್ನ ಸಿನಿಮಾ ತಂಟೆಗೆ ಬೇರೆ ಯಾರೂ ಕೈ ಹಾಕಬೇಡಿ. ನಿಮ್ಮ ಪಾಡಿಗೆ ನೀವಿರಿ, ನಮ್ಮ ಪಾಡಿಗೆ ನಾವಿರ್ತೀವಿ. ಹಾಗೇನಾದ್ರೂ ಬಂದರೆ, ಯಾರೇ ಇದ್ದರೂ ಸರಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ…’ ಹೀಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದು ನಟ ಗಣೇಶ್. ಅವರು ಈ ರೀತಿ ಮಾತನಾಡೋಕೆ ಕಾರಣ ಅವರ ಅಭಿನಯದ “ಗೀತಾ’ ಚಿತ್ರ. ಹೌದು, “ಗೀತಾ’ ಸೆ.27 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದು ಪರಭಾಷೆಯ ಚಿತ್ರಗಳೂ ಬಿಡುಗಡೆಯಾಗುತ್ತಿವೆ.
ಕರ್ನಾಟಕದಲ್ಲಿರುವ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ “ಗೀತಾ’ ಚಿತ್ರಕ್ಕೆ ಯಾರೂ ಅಡ್ಡಿಪಡಿಸಬಾರದು. ಹಾಗೇನಾದರೂ ಅಡ್ಡಿಯಾದರೆ, ಮುಂದಿನ ಪರಿಣಾಮ ಎದುರಿಸಬೇಕಾಗುತ್ತೆ ಎಂಬರ್ಥದಲ್ಲಿ ಗಣೇಶ್ ಗುಡುಗಿದ್ದಾರೆ. “ಗೀತಾ’ ಅಪ್ಪಟ ಕನ್ನಡ ಸಿನಿಮಾ. ಅದರಲ್ಲೂ ಗೋಕಾಕ್ ಚಳವಳಿ ಹಿನ್ನೆಲೆಯಲ್ಲಿ ಮೂಡಿಬಂದಿರುವ ಚಿತ್ರ. ಚಿತ್ರದ ಟ್ರೇಲರ್ ನೋಡಿದವರಿಗೆ ಸಿನಿಮಾದೊಳಗಿರುವ ಕನ್ನಡತನದ ಬಗ್ಗೆ ಗೊತ್ತಾಗುತ್ತದೆ.
“ಗೀತಾ’ ಚಿತ್ರ ಬಿಡುಗಡೆಯಾಗಲಿರುವ ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳು ಬರಲು ಪ್ರಯತ್ನಿಸಿದರೆ, ಸಮಸ್ಯೆಯಾಗುತ್ತದೆ ಎಂಬುದು ಗಣೇಶ್ ಮಾತು. ಅವರೇ ಹೇಳುವಂತೆ, “ನಮ್ಮ ಚಿತ್ರದ ತಂಟೆಗೆ ಬರಬೇಡಿ. “ಗೀತಾ’ ನನ್ನ ಮನಸ್ಸಿನಲ್ಲಿರುವ ಚಿತ್ರ. ಬಹಳ ಇಷ್ಟಪಟ್ಟು ಮಾಡಿರುವ ಚಿತ್ರ. ಹಾಗೊಂದು ವೇಳೆ, ಚಿತ್ರಕ್ಕೆ ತೊಂದರೆ ಮಾಡಿದರೆ, ಅದು ಯಾರೇ ಆಗಿರಲಿ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಇದು ಎಚ್ಚರಿಕೆಯ ಮಾತು’ ಎಂದಿದ್ದಾರೆ ಗಣೇಶ್.
“ನಮ್ಮೊಂದಿಗೆ ಕನ್ನಡ ಚಿತ್ರಗಳು ಬರಲಿ. ತೊಂದರೆ ಇಲ್ಲ. ಆದರೆ, ದಯವಿಟ್ಟು, ಕನ್ನಡ ಸಿನಿಮಾಗಳಿಗೆ ಕೈ ಹಾಕಬೇಡಿ. ನಾವು ಮೊದಲಿನಿಂದಲೂ ಪರಭಾಷೆಯ ಚಿತ್ರಗಳ ಜೊತೆಯಲ್ಲಿ ಸ್ಪರ್ಧೆ ಮಾಡಿಕೊಂಡು ಬಂದಿದ್ದೇವೆ. ನಿಮ್ಮ ಪಾಡಿಗೆ ನೀವು ಬನ್ನಿ, ನಮ್ಮ ಪಾಡಿಗೆ ನಾವು ಇರುತ್ತೇವೆ. ಆದರೆ, ನಮ್ಮ ಸಿನಿಮಾ ತಂಟೆಗೆ ಬರಬೇಡಿ’ ಎಂದರು ಗಣೇಶ್. ಇನ್ನು, “ಗೀತಾ’ ಚಿತ್ರ ಸದ್ಯಕ್ಕೆ ರಾಜ್ಯದ 160 ಚಿತ್ರಮಂದಿರಗಳು, 60 ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗುತ್ತಿದೆ.
ವಿದೇಶದಲ್ಲೂ ಚಿತ್ರ ತೆರೆ ಕಾಣುತ್ತದೆ. ಆದರೆ, ಈಗಲೇ ಬಿಡುಗಡೆ ಮಾಡುವುದಿಲ್ಲ. ಮೂರು ವಾರಗಳ ಬಳಿಕ ಅಲ್ಲಿ ರಿಲೀಸ್ ಮಾಡುತ್ತೇವೆ ಎನ್ನುತ್ತಾರೆ ಗಣೇಶ್. “ಶೇ.15, 20 ರಷ್ಟು ಮಾತ್ರ ಆಲ್ಲಿ ವರ್ಕೌಟ್ ಆಗುತ್ತಿದೆ. ಅಲ್ಲಿ ಹಂಗೆ, ಹಿಂಗೆ ಅಂತ ಹೇಳಿಕೊಳ್ಳುವುದು ಸರಿ ಇರೋದಿಲ್ಲ. ಹಾಗಾಗಿ, ಇಲ್ಲಿ ಬಿಡುಗಡೆ ನಂತರ ಅಲ್ಲಿ ನೋಡಿಕೊಂಡು ಪ್ಲಾನ್ ಮಾಡ್ತೀವಿ. ದಯವಿಟ್ಟು, ಯಾರೂ ನಮ್ಮ ಚಿತ್ರಮಂದಿರಗಳಿಗೆ ಕೈ ಹಾಕಬೇಡಿ.
ಹಾಗೊಂದು ವೇಳೆ ಬಂದರೆ, ಚಿತ್ರಮಂದಿರ ಮುಂದೆ ಪ್ರತಿಭಟನೆ ನಡೆಯುತ್ತೆ’ ಎಂಬ ಎಚ್ಚರಿಕೆ ಕೊಟ್ಟ ಗಣೇಶ್, ಸದ್ಯಕ್ಕೆ ಪೈರಸಿ ಬಗ್ಗೆಯೂ ಗಮನಹರಿಸಿದ್ದೇವೆ. ಆ ಕುರಿತು, ಏನೆಲ್ಲಾ ಮಾಡಬೇಕೋ, ಯಾರಿಗೆಲ್ಲಾ ಮುಂಚಿತವಾಗಿಯೇ ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಮನವಿ ಮಾಡಲಾಗಿದೆ ಎನ್ನುತ್ತಾರೆ ಗಣೇಶ್.