ಬಾಗಲಕೋಟೆ: ಮನುಷ್ಯ ಎಲ್ಲಿದ್ದರೂ ತಾಯಿಯ ಭಾಷೆ ಮರೆಯಬಾರದು. ನಮ್ಮತನ, ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಮಕ್ಕಳನ್ನು ಒಳ್ಳೆಯತನದಿಂದ ಬೆಳೆಸುವಂತ ವ್ಯವಸ್ಥೆ ಸೃಷ್ಟಿ ಮಾಡಿಕೊಳ್ಳಬೇಕು. ದಾನ ಮಾಡುವ ಮಕ್ಕಳು ಇರಬೇಕು ಎಂದು ಖ್ಯಾತ ಜಾನಪದ ಗಾಯಕ ಗುರುರಾಜ ಹೊಸಕೋಟಿ ಹೇಳಿದರು.
ಬೀಳಗಿ ತಾಲೂಕಿನ ಬೂದಿಹಾಳ (ಎಸ್.ಎಚ್.) ಗ್ರಾಮದಲ್ಲಿ ಶ್ರೀ ಮಾರುತೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಕರೆಸಿದ್ಧೇಶ್ವರ ದೈವ ಮಂಡಳಿ ಹಾಗೂ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಸಹಯೋಗದಲ್ಲಿ ಚೌಡಕಿ ಪದ ವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಡಿ.ಎಂ. ಸಾವಕಾರ ಮಾತನಾಡಿ, ಗ್ರಾಮೀಣ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಜಾನಪದಕ್ಕೆ ಬಹುದೊಡ್ಡ ಶಕ್ತಿ ಇದೆ. ಗಟ್ಟಿತನಕ್ಕೆ ಸಾಕ್ಷಿಯಾದ ಜಾನಪದ ಹಾಡುಗಳಲ್ಲಿ ನಮ್ಮ ಸಂಸ್ಕೃತಿಯಿದೆ, ಸಂಸ್ಕಾರ ವಿದೆ, ಪರಂಪರೆಯಿದೆ. ಅದನ್ನು ಯುವ ಜನಾಂಗಕ್ಕೆ ಪರಿಚಯಿಸಿ, ಬೆಳೆಸುವ ನಿಟ್ಟಿನಲ್ಲಿ ಜಾನಪದ ಕಾರ್ಯಕ್ರಮಗಳು ಅವಶ್ಯಕ. ಕಲಾವಿದರಿಗೆ ವೇದಿಕೆ ಕಲ್ಪಿಸಿ ಕೊಡುವುದರ ಜತೆಗೆ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕಿದೆ ಎಂದರು.
ಶಕ್ತಿದೇವಿಯರಾದ ಸವದತ್ತಿ ಯಲ್ಲಮ್ಮ, ಮುನಿರಬಾದನ ಹುಲಿಗೆಮ್ಮದೇವಿಯರ ಪೌರಾಣಿಕ ಕಥೆಗಳನ್ನು ಚೌಡಕಿ ಪದಗಳು ಒಳಗೊಂಡಿವೆ. ದೇವಿಯರ ಜೀವನ ವೃತ್ತಾಂತವನ್ನು ಚೌಡಕಿ ಬಾರಿಸುತ್ತಾ ಹಾಡುವುದು ಒಂದು ವಿಶಿಷ್ಟ ಜಾನಪದ ಕಲೆಯಾಗಿದೆ. ಅಳವಿನ ಅಂಚಿನಲ್ಲಿ ಚೌಡಕಿ ಪದ, ಕುಟ್ಟುವ ಮತ್ತು ಬೀಸುಕಲ್ಲು ಪದ, ಹಂತಿಪದ ಸೇರಿದಂತೆ ಕೃಷಿ ಕಾರ್ಯದಲ್ಲಿ ಹಾಡುತ್ತಿದ್ದ ಪದಗಳು ಇಂದು ಮಾಯವಾಗುತ್ತಿವೆ. ಹೀಗಾಗಿ ಮುಂದಿನ ತಲೆಮಾರಿಗೆ ಈ ಜಾನಪದ ಹಾಡುಗಳನ್ನು ಪರಿಚಯಿಸುವ ಕಾರ್ಯವನ್ನು ಮಾಡಬೇಕಾಗಿದೆ. ಕನ್ನಡ ಜಾನಪದ ಪರಿಷತ್ ಈ ಕಾರ್ಯದಲ್ಲಿ ನಿರತವಾಗಿದೆ ಎಂದು ತಿಳಿಸಿದರು.
ಕಜಾಪ ತಾಲೂಕಾಧ್ಯಕ್ಷ ಬಸವರಾಜ ದಾವಣಗೆರೆ ಮಾತನಾಡಿ, ಮನೆಯಿಂದಲೇ ಜಾನಪದ ಆರಂಭವಾಗುತ್ತದೆ. ಜನಪದದಲ್ಲಿ ಅನೇಕ ರೀತಿಯ ಕಲೆಗಳಿವೆ. ಇಂದಿನ ಯುವ ಸಮೂಹ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಾಡಬೇಕೆಂದು ಹೇಳಿದರು.
ಜಾನಪದ ಗಾಯಕ ಗುರುರಾಜ ಹೊಸಕೋಟಿ, ಆಶುಕವಿ ಸದಾಶಿವ ಆಗೋಜಿ, ಗಾಯಕ ಭೀಮಶಿ ಗಾಣಗೇರ ಹಾಡುಗಳ ಮೂಲಕ ಜನರ ಮನಸೂರೆಗೊಂಡರು. ಬಳಿಕ ಜಮಖಂಡಿ ತಾಲೂಕಿನ ಸಿದ್ದಾಪುರದ ವಿಠರಾಯ ಗಾಯನ ಸಂಘ, ಮುಧೋಳ ತಾಲೂಕಿನ ಬುದ್ನಿ ಪಿಎಂ ಗ್ರಾಮದ ಸರಸ್ವತಿ ಗಾಯನ ಸಂಘದ ಕಲಾವಿದರಿಂದ ಚೌಡಕಿ ಪದಗಳು ಜರುಗಿದವು. ಶಿಕ್ಷಕ ಎಸ್.ಬಿ. ಜಾಡರ ನಿರೂಪಿಸಿ, ವಂದಿಸಿದರು.