Advertisement
ಸೆಲ್ಫಿ ಬರುವುದಕ್ಕೆ ಮೊದಲು ನಮಗೆ ಗೊತ್ತಿದ್ದ ಎರಡು ಪದ ಸೆಲ್ಫಿಶ್ ಎನ್ನುವ ಇಂಗ್ಲೀಷಿನ ಸ್ವಾರ್ಥ ಹಾಗೂ ಕುಲ್ಫಿà ಎನ್ನುವ ಹಾಲಿನಿಂದ ತಯಾರು ಮಾಡಲಾಗುವ ಒಂದು ಬಗೆಯ ಐಸ್‌ಕ್ಯಾಂಡಿ. ಅದು ಬಹಳ ರುಚಿಕಟ್ಟಾಗಿರುತಿತ್ತು. ಈಗಲೂ ಅಲ್ಲಲ್ಲಿ ಕುಲ್ಫಿ ಸಿಗುತ್ತದಾದರೂ ಆ ಹಳೆಯ ರುಚಿ ಅದರಲ್ಲಿ ಕಾಣಿಸುತ್ತಿಲ್ಲ. ಎಲ್ಲಾ ತಿಂದಾದ ಮೇಲೆ ಸ್ನೇಹಿತರನ್ನು ಗೋಳು ಹೊಯ್ದುಕೊಳ್ಳುವ ಸಲುವಾಗಿ ಅದರ ಕಡ್ಡಿಯನ್ನು ಒಮ್ಮೆ ಮೂಸಿ ನೋಡು ಬಹಳ ಚೆನ್ನಾಗಿದೆ ಎನ್ನುತ್ತಿದ್ದೆವು. ಅಪ್ಪಿತಪ್ಪಿ ಆ ವಿಚಾರ ತಿಳಿಯದೆ ಮೂಸಿ ನೋಡಿದರೆ ಆ ಕಡ್ಡಿಯ ಕೆಟ್ಟ ವಾಸನೆಗೆ ಹೊಟ್ಟೆಯಲ್ಲಿ ತಿಂದಿದ್ದ ಕುಲ್ಫಿ ಮೊಸರು ಕಡೆದಂತಾಗುತಿತ್ತು. ಅಯ್ಯೋ ಇದೆಲ್ಲಾ ಏಕೆ ಎಂದಿರಾ ಮೊನ್ನೆ ಒಬ್ಬರು ಕುಲ್ಫಿಯೊಂದಿಗೂ ಸೆಲ್ಫಿಯನ್ನು ಫೇಸ್‌ಬುಕ್ಕಿನಲ್ಲಿ ಹಾಕಿಬಿಟ್ಟಿದ್ದರು. ಹಾಗಾಗಿ ಇದೆಲ್ಲಾ ನೆನಪಾಯಿತು.
Related Articles
Advertisement
ಜೀವನದ ಹಲವಷ್ಟು ಸಿಹಿ ಗಳಿಗೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಸೆಲ್ಫಿ ಸಹಾಯ ಮಾಡುವುದು ನಿಜವಾದರೂ ಸಾಧನೆಗಳನ್ನು ಮಾಡುವ ವ್ಯವಧಾನವಿಲ್ಲದೆ ಪರಿಶ್ರಮ ಪಡಲು ತಯಾರಿಲ್ಲದೆ ತನ್ನ ಮುಖವನ್ನು ಎಲ್ಲರೂ ಗುರುತಿಸಬೇಕು ಎನ್ನುವ ಹುಚ್ಚು ಹಂಬಲಕ್ಕೆ ಬಿದ್ದು ಸೆಲ್ಫಿ ತೆಗೆದುಕೊಂಡು ಅದನ್ನೇ ಸಾಧನೆ ಎಂಬಂತೆ ಫೇಸುºಕ್ಕು ಇನ್‌ಸ್ಟಾಗ್ರಾಮ್, ವಾಟ್ಸಪ್, ಹೈಕು ಎಂದೆಲ್ಲಾ ಅಪ್‌ಲೋಡ್ ಮಾಡಿ ಅಲ್ಲಿ ಬರುವ ಲೈಕು ಕಮೆಂಟುಗಳನ್ನು ಲೆಕ್ಕ ಹಾಕುತ್ತಾ ತಮ್ಮ ವ್ಯಕ್ತಿತ್ವದ ಜನಪ್ರಿಯತೆಯನ್ನು ಅಳೆಯುತ್ತಾ ಕೂರುವವರೆ ಇಂದು ಅಧಿಕ ಸಂಖ್ಯೆಯಲ್ಲಿರುವುದು ಸತ್ಯ. ಹಾಗಾದರೆ ಸೆಲೆಬ್ರಿಟಿಗಳು ಸೆಲ್ಫಿ ತೆಗೆಯುತ್ತಾರಲ್ಲಾ ಅಂತೀರಾ?ಅದು ಮತ್ತೂಂದು ರೀತಿಯ ಗೀಳು. ಸೆಲ್ಫಿ ಎನ್ನುವುದು ಮಾನಸಿಕ ರೋಗವಾಗು ವಷ್ಟರ ಮಟ್ಟಿಗೆ ಬೆಳೆಯವುದಕ್ಕೆ ಯಾರೊಬ್ಬರೂ ಅವಕಾಶ ಮಾಡಿಕೊಡಬಾರದು.
ಇತ್ತೀಚೆಗೆ ಪರಿಚಿತರೊಬ್ಬರು ತಾನು ಅಷ್ಟೇನು ಸುಂದರವಾಗಿಲ, ಫೋಟೋಗಳಲ್ಲಿ ತನ್ನ ಮುಖ ಚೆಂದ ಬರುವುದಿಲ್ಲ ಎನ್ನುವ ಕಾರಣಕ್ಕೆ ಪ್ರೀತಿಸುವ ಹುಡುಗಿ ಸೆಲ್ಫಿ ತೆಗೆದುಕೊಳ್ಳೋಣ ಎಂದಾಗ ನಿರಾಕರಿಸಿದ್ದ. ಎಷ್ಟು ಒತ್ತಾಯಿಸಿದರೂ ಇವನು ಕೇಳದಿದ್ದಾಗ ಕೋಪಗೊಂಡ ಹುಡುಗಿ ಇವನ ಕೆನ್ನೆಗೆ ಬಾರಿಸಿದ್ದಳು. ನೀ ಚೆಂದ ಇಲ್ಲದಿದ್ದರೇನು ನಾನು ಚೆಂದ ಇದ್ದೇನಲ್ಲ ಸಾಕು ಎಂದು ಬೈದು ಒತ್ತಾಯ ಮಾಡಿ ಸೆಲ್ಫಿ ಕ್ಲಿಕ್ಕಿಸಿದ್ದಳು. ಇದು ಬೇರೆಯವರನ್ನು ಕೆಳದೂಡಿ ಸ್ವಪ್ರತಿಷ್ಠೆ ಮೆರೆಯುವ ಅಹಮಿಕೆಯ ಲಕ್ಷಣವಾಗಿತ್ತು. ಸೆಲ್ಫಿ ಹುಚ್ಚನ್ನು ಈ ಮಟ್ಟಿಗೆ ಬೆಳೆಯಗೊಡಬಾರದು. ಸೆಲ್ಫಿ ಮಿತವಾದರೆ ರಸ. ಅತಿಯಾದರೆ ವಿಷ.
ಒಂದಂತೂ ನಿಜ ಯಾವ ಸೆಲ್ಫಿಯೂ ಮನುಷ್ಯನ ವ್ಯಕ್ತಿತ್ವವನ್ನು ಕಟ್ಟಿಕೊಡಲಾರದು. ಇದರ ಗೀಳಿನಿಂದಾಗಿ ವ್ಯಕ್ತಿ ತನ್ನ ಅಮೂಲ್ಯ ಸಮಯವನ್ನು ಹಾಳುಮಾಡಿಕೊಳ್ಳುತ್ತಿದ್ದಾನೆ. ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾನೆ. ವಸ್ತುಸ್ಥಿತಿ ಹೀಗಿರುವಾಗ ಸೆಲ್ಫಿ ಎನ್ನುವ ಮಾನಸಿಕ ಗೀಳಿನ ಬಗೆಗೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಎಚ್ಚರವನ್ನು ಮೂಡಿಸಬೇಕಾದ ಅನಿವಾರ್ಯತೆ ಇದೆ. ಅದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಕೂಡ. ಕೆಲವೊಮ್ಮೆ ಜಾತ್ರೆ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಜನರಿಗಾಗಿ ಸೆಲ್ಫಿ ಸ್ಪರ್ಧೆಯನ್ನು ಆಯೋಜಿಸಿ ಉತ್ತಮ ಸೆಲ್ಫಿಗೆ ಬಹುಮಾನ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಯೋಚಿಸಬೇಕಾಗಿದೆ.
ಕೆಲವೊಂದು ಸ್ಪರ್ಧೆಗಳ ಉದ್ದೇಶ ಒಳ್ಳೆಯ ದಾಗಿರುತ್ತದೆ. ಅಂತಹ ಸ್ಪರ್ಧೆಗಳನ್ನು ಒಂದು ಮಟ್ಟಿಗೆ ಒಪ್ಪಬಹುದು. ಆದರೆ ಕೇವಲ ಮನರಂಜನೆಗಾಗಿ ಆಯೋಜಿಸುವ ಸೆಲ್ಫಿ ಸ್ಪರ್ಧೆಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಖಂಡಿತಾ ಇದೆ. ಕೇವಲ ಸೆಲ್ಫಿ ಹುಚ್ಚಿನಿಂದಾಗಿ ಯಾರೋ ಪ್ರಾಣ ಕಳೆದುಕೊಂಡಾಗಷ್ಟೇ ನಾವು ಗಂಭೀರವಾಗಿ ಮಾತನಾಡಿದರೆ ಪ್ರಯೋಜನ ವಿಲ್ಲ. ನಮ್ಮ ನಿತ್ಯದ ಚಟುವಟಿಕೆಗಳಲ್ಲೂ ಸೆಲ್ಫಿಗೆ ನೀಡುವ ಪ್ರಾಧಾನ್ಯತೆ ಕಡಿಮೆ ಆಗಬೇಕಿದೆ. ಹಾಗಾಗಲಿ ಎಂದು ಆಶಿಸೋಣ. ಸೆಲ್ಫಿಗೆ ಕೊಡುವ ಸಮಯವನ್ನು ಸಂಬಂಧಗಳನ್ನು ಬೆಳೆಸಲು ಪ್ರಕೃತಿಯನ್ನು ಆಸ್ವಾದಿಸಲು ಮತ್ತು ಇನ್ನಿತರ ಕೆಲಸಗಳಿಗೆ ಕೊಡೋಣ. ಸೆಲ್ಫಿಯ ಗುಂಗಿನಲ್ಲಿ ಜೀವನದ ನಿಜವಾದ ರಸಮಯ ಕ್ಷಣಗಳನ್ನು ಕಳೆದುಕೊಳ್ಳದಿರೋಣ.
ನರೇಂದ್ರ ಎಸ್ ಗಂಗೊಳ್ಳಿ