ಚೆನ್ನೈ: ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಇಂಗ್ಲಿಷ್ ಸ್ಥಾನದಲ್ಲಿ ಹಿಂದಿ ಬಳಕೆ ಮಾಡಬೇಕು ಎಂಬ ಅಧಿಕೃತ ಭಾಷೆಗಳಿಗಾಗಿನ ಸಂಸತ್ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿರುವ ಬಗ್ಗೆ ಡಿಎಂಕೆ ಅಧ್ಯಕ್ಷ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂಥ ಸಲಹೆಯಿಂದಾಗಿ ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಹಿಂದಿ ಹೇರಿಕೆಯ ಪ್ರಯತ್ನ ಮಾಡಿ, ಭಾಷಾ ಯುದ್ಧಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಟೀಕಿಸಿದ್ದಾರೆ.
“ದೇಶಾದ್ಯಂತ ಒಂದೇ ಭಾಷೆ’ ಜಾರಿ ಮಾಡುವ ಪ್ರಯತ್ನ ಫಲಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿರುವ ತಮಿಳುನಾಡು ಸಿಎಂ, “ಒಂದು ವೇಳೆ, ಇದು ಜಾರಿಯಾದರೆ, ಹಿಂದಿ ಭಾಷೆಯನ್ನು ಮಾತನಾಡುವವರು ಮಾತ್ರವೇ ದೇಶದ ಪ್ರಜೆಗಳು ಎಂಬ ಭಾವನೆ ಮೂಡಿಸಿದಂತೆ ಆಗುತ್ತದೆ. ಇತರ ಭಾಷೆಗಳನ್ನು ಮಾತನಾಡುವವರು ಎರಡನೇ ದರ್ಜೆಯ ಪ್ರಜೆಗಳಂತೆ ಆಗುತ್ತಾರೆ’ ಎಂದು ತಿಳಿಸಿದ್ದಾರೆ.
ಹಿಂದಿಗೆ ಅನಗತ್ಯವಾಗಿ ಪ್ರಾಧಾನ್ಯತೆ ನೀಡುವುದು ಸಂವಿಧಾನದ ಮೂಲ ಹಿತಕ್ಕೇ ಧಕ್ಕೆ ತಂದಂತೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂಥ ಪ್ರಯತ್ನ ಕೈಬಿಡಬೇಕು.
ಸಂಸತ್‌ನಲ್ಲಿ ಭಾರತ್ ಮಾತಾ ಕೀ ಜೈ ಎಂದು ಹೇಳುವ ಮೂಲಕವೂ ದೇಶದ ಇತರ ಭಾಷೆಗಳನ್ನು ಕಡೆಗಣಿಸಿದಂತೆ ಆಗುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪ್ರತಿಪಾದಿಸಿದ್ದಾರೆ.
ಜತೆಗೆ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಬರುವ ಎಲ್ಲ ಭಾಷೆಗಳನ್ನೂ ಸಮಾನವಾಗಿ ಕಾಣಬೇಕು ಎಂದೂ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.