ನಗರದಲ್ಲಿ ಕೊರೊನಾ ಸೋಂಕು ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಸಂಬಂಧ ಪುರಭವನದಲ್ಲಿ ಶುಕ್ರವಾರ ಬಿಬಿಎಂಪಿಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಮಾರ್ಷಲ್ ಮೇಲ್ವಿಚಾರಕರ ಜಂಟಿ ಸಭೆ ನಡೆಸಲಾಯಿತು.
Advertisement
ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಬಿಎಂಪಿ ಆಯುಕ್ತರು, ಬಡವರು ಹಾಗೂ ಆರ್ಥಿಕವಾಗಿ ಅಶಕ್ತರು 50 ರೂ. ನೀಡಿ ಮಾಸ್ಕ್ ಖರೀದಿ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಬಟ್ಟೆ ಮತ್ತು ಕರವಸ್ತ್ರ ಬಳಸಿದರೂ ಮಾಸ್ಕ್ ಎಂದು ಪರಿಗಣಿಸಿ. ಇಂತಹ ಪ್ರಕರಣಗಳಲ್ಲಿ ದಂಡ ವಿಧಿಸಬೇಡಿ. ವ್ಯಕ್ತಿ ಸೀನಿದರೆ ಅಥವಾ ಕೆಮ್ಮಿದಾಗ ಇನ್ನೊಬ್ಬ ವ್ಯಕ್ತಿಗೆ ಸೋಂಕು ಹಬ್ಬಬಾರದು ಎನ್ನುವ ಕಾರಣಕ್ಕೆ ಮಾಸ್ಕ್ ಧರಿಸುವಂತೆ ಹೇಳಲಾಗುತ್ತಿದೆ. ಇದೇ ಸಮಯದಲ್ಲಿ ಮಾಸ್ಕ್ ಧರಿಸಿದವರಿಗೂ ಇದು ಹಬ್ಬದಂತೆ ತಡೆಯಬಹುದು. ಬಟ್ಟೆಯಿಂದ ರಕ್ಷಣೆ ಪಡೆದರೂ ತಪ್ಪಿಲ್ಲ ಎಂದು ವಿವರಿಸಿದರು.
Related Articles
Advertisement
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮಾತನಾಡಿ, ಯಾವುದೇ ಕಾನೂನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ಸಂಘರ್ಷಗಳು ಸೃಷ್ಟಿಯಾಗುತ್ತವೆ. ಮಾರ್ಷಲ್‌ಗಳು ತಾಳ್ಮೆಯಿಂದ ವರ್ತಿಸಬೇಕು. ನಗರದಲ್ಲಿ 120 ಜನ ಪೊಲೀಸ್ ಸಿಬ್ಬಂದಿ ಸಹ ಕೊರೊನಾ ಸೋಂಕು ನಿಯಮ ಉಲ್ಲಂಘನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಗತ್ಯತೆ ಬಿದ್ದರೆ ಸಂಚಾರ ಪೊಲೀಸರನ್ನೂ ಸೇವೆಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಗೋಹತ್ಯೆ ನಿಷೇಧ ಕುರಿತು ಇನ್ನಷ್ಟು ಚರ್ಚೆ ಅಗತ್ಯ: ಸಚಿವ ಡಾ.ಕೆ.ಸುಧಾಕರ್
ಮಾರ್ಷಲ್‌ಗಳ ಮೇಲೆ ಹಲ್ಲೆ ಮಾಡಿದರೆ ಜೈಲು: ನಗರದಲ್ಲಿ ಕೊರೊನಾ ಸೋಂಕು ಹಬ್ಬುವುದನ್ನು ತಡೆಯುವ ಉದ್ದೇಶದಿಂದ ಮಾರ್ಷಲ್‌ಗಳು ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಮತ್ತು ಅವರ ಮೇಲೆ ಹಲ್ಲೆ ಮಾಡಲು ಯಾರಾದರು ಮುಂದಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಜೈಲು ಶಿಕ್ಷೆಯೂ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಇಲಾಖೆಯಿಂದ ಮಾರ್ಷಲ್‌ಗಳಿಗೆ ಸಂಪೂರ್ಣ ರಕ್ಷಣೆ ನೀಡಲಾಗುವುದು. ಅಲ್ಲದೆ, ಕೊರೊನಾ ಸೋಂಕು ತಡೆಗೆ ಪೊಲೀಸ್ ಇಲಾಖೆಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಬಿಬಿ ಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)ರಂದೀಪ್, ಜಂಟಿ ಆಯುಕ್ತ ಸರ್ಪ ರಾಜ್ ಖಾನ್, ಟಾಸ್ಕ್ ಪೋರ್ಸ್ ತಂಡದ ಹಿರಿಯ ಐಎಎಸ್ ಅಧಿಕಾರಿ ನವೀನ್ ರಾಜ್ ಸಿಂಗ್, ಪೂರ್ವ ವಲಯದ ಜಂಟಿ ಆಯುಕ್ತೆ ಕೆ.ಆರ್. ಪಲ್ಲವಿ ಹಾಗೂ ಎಲ್ಲ ವಲಯಗಳ ಮಾರ್ಷಲ್ ಮೇಲ್ವಿಚಾರಕರು ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.