ಉಡುಪಿ: ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡಬೇಕು ಮತ್ತು ಹಿಜಾಬ್ ವಿಚಾರದಲ್ಲಿ ನಮ್ಮ ಕುಟುಂಬವನ್ನು ಎಳೆದುತರುವುದು ಸರಿಯಲ್ಲ ಎಂದು ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಪಿಯುಸಿ ವಾರ್ಷಿಕ ಪ್ರಾಯೋಗಿಕ ಪರೀಕ್ಷೆಯೂ ನಡೆಯಲಿರುವುದರಿಂದ ಸದ್ಯಕ್ಕೆ ಪರೀಕ್ಷೆ ಮುಂದೂಡಬೇಕು. ಈ ಬಗ್ಗೆ ಡಿಡಿಪಿಯು ಮನವಿ ಸಲ್ಲಿಸಿದ್ದೇವೆ ಎಂದು ವಿದ್ಯಾರ್ಥಿನಿಯರಾದ ಅಲ್ಮಾಸ್, ಆಲಿಯಾ, ಮುಸ್ಕಾನ್, ಶಫಾ ಹೇಳಿದರು.
ನಮ್ಮಲ್ಲಿ ತಲಾ ಮೂವರು ದ್ವಿತೀಯ ಪಿಯುಸಿ ಹಾಗೂ ಪ್ರಥಮ ಪಿಯುಸಿಯಲ್ಲಿದ್ದೇವೆ. ಕಲಿಕೆಗೆ ಅನುಕೂಲ ಮಾಡಿಕೊಡಲು ಪರೀಕ್ಷೆ ಮುಂದೂಡಬೇಕು. ಸರಿಯಾಗಿ ಪಾಠ ಆಗಿಲ್ಲ ಎಂದರು.
ನಮ್ಮ ವೈಯಕ್ತಿಕ ದಾಖಲೆ ಸೋರಿಕೆಯಿಂದ ಬೆದರಿಕೆ ಕರೆ ಬರುತ್ತಿದೆ. ಅಣ್ಣನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಶೀಘ್ರ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನಮ್ಮ ಫ್ಯಾಮಿಲಿಯನ್ನು ಈ ವಿವಾದದಲ್ಲಿ ಸಿಲುಕಿಸಬೇಡಿ. ನಮಗೆ ದೇಶದ್ರೋಹಿ ಸಂಘಟನೆಗಳ ಜೊತೆ ಲಿಂಕ್ ಇದೆ ಎಂಬ ಆರೋಪ ಅನಾಗರಿಕ ವ್ಯಕ್ಯಿಗಳು ಮಾಡಿರುವುದು. ಅದಕ್ಕೆ ನಾವು ಪ್ರತಿಕ್ರಿಯೆ ನೀಡಲ್ಲ. ನಮ್ಮ ಪರವಾಗಿ ತೀರ್ಪು ನಿರೀಕ್ಷೆ ಮಾಡುತ್ತಿದ್ದೇವೆ. ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆಯಿದೆ ಎಂದರು.
ಇದನ್ನೂ ಓದಿ:ಹಿಜಾಬ್ ಗಲಾಟೆಗೂ ಶಿವಮೊಗ್ಗ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ: ಕುಮಾರಸ್ವಾಮಿ
ಇದೊಂದು ರಾಜಕೀಯ ಷಡ್ಯಂತ್ರ. ನಾವು ನಮ್ಮ ಹಕ್ಕಿಗಾಗಿ ಹೋರಾಟ ಮಾಡಿದ್ದೇವೆ. ರಾಜ್ಯಾದ್ಯಂತ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇವೆ ಎಂದರು.