Advertisement

ನಾವೇ ಸಂವಿಧಾನ ಶಿಲ್ಪಿಗೆ ಹೆಚ್ಚಿನ ಗೌರವ ಕೊಟ್ಟದ್ದು

07:00 AM Apr 05, 2018 | |

ಹೊಸದಿಲ್ಲಿ: ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೀಡಿದಷ್ಟು ಮಹತ್ವ ಬೇರೆ ಯಾವ ಸರಕಾರವೂ ನೀಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಅವರನ್ನು ಎಳೆದು ತರುವುದರ ಬದಲಾಗಿ ಅವರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯಬೇಕಾಗಿದೆ ಎಂದಿದ್ದಾರೆ ಪ್ರಧಾನಿ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಸರ್ಕಾರಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾದರೆ ಬಂಧನ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ದೇಶದ ಏಳು ರಾಜ್ಯಗಳಲ್ಲಿ ಉಂಟಾದ ಪ್ರತಿಭಟನೆ, ಬಂದ್‌ ಹಿನ್ನೆಲೆಯಲ್ಲಿ ಪ್ರಧಾನಿಯವರ ಮಾತುಗಳು ಮಹತ್ವ ಪಡೆದಿವೆ.

Advertisement

ಹೊಸದಿಲ್ಲಿಯಲ್ಲಿ ಸಂಸದರಿಗೆ ಹೊಸತಾಗಿ ನಿರ್ಮಿಸಲಾದ ವಸತಿ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಹೆಸರನ್ನು ಅವರವರ ರಾಜಕೀಯ ಲಾಭಕ್ಕಾಗಿಯೇ ಬಳಕೆ ಮಾಡುತ್ತಿದ್ದಾರೆ ಎಂದರು. ವಾಜಪೇಯಿ ನೇತೃತ್ವದ ಸರಕಾರದ ಅವಧಿಯಲ್ಲಿ ನವದೆಹಲಿಯಲ್ಲಿ ಅಂಬೇಡ್ಕರ್‌ ಸ್ಮರಣಾರ್ಥ ಅಂತಾರಾಷ್ಟ್ರೀಯ ಕೇಂದ್ರ ನಿರ್ಮಿಸಲು ಮುಂದಾಗಿತ್ತು. ಯುಪಿಎ ಸರಕಾರದ ಅವಧಿಯಲ್ಲಿ ಈ ಯೋಜನೆಯ ಬಗ್ಗೆ ಗಮನ ಹರಿಸ‌ಲಿಲ್ಲ. ಹಾಲಿ ಸರಕಾರ ಅದನ್ನು ಪೂರ್ಣಗೊಳಿಸಿತು ಎಂದು ಹೇಳಿದ್ದಾರೆ. ಸಬ್‌ ಸಾ ಸಾಥ್‌; ಸಬ್‌ ಕಾ ವಿಕಾಸ್‌ ಎಂಬ ಘೋಷಣೆ ಜಾರಿಗೆ ತರಲು ನಮ್ಮ ಸರಕಾರ ಬದ್ಧವಾಗಿದೆ ಎಂದರು  ಪ್ರಧಾನಿ. ಇದೇ ವೇಳೆ ನವದೆಹಲಿಯಲ್ಲಿ ಕೇಂದ್ರದ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು. ರಾಜಸ್ಥಾನದ ಹಿಂದೌನ್‌ ಪಟ್ಟಣದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಹಿಂಪಡೆ ಯಲಾಗಿದೆ.

ಮೀಸಲು ತೆಗೆದು ಹಾಕುವುದಿಲ್ಲ: ಅಮಿತ್‌ ಶಾ
ಮೀಸಲು ವ್ಯವಸ್ಥೆಯನ್ನು ಬಿಜೆಪಿ ನೇತೃತ್ವದ ಸರಕಾರ ತೆಗೆದು ಹಾಕುವುದಿಲ್ಲ ಮತ್ತು ಅಂಥ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಒಡಿಶಾದ ಭವಾನಿಪಟ್ಟಣದಲ್ಲಿ ಮಾತನಾಡಿದ ಅವರು, “ಮೀಸಲು ವ್ಯವಸ್ಥೆಯನ್ನು ತೆಗೆದು ಹಾಕುವ ಧೈರ್ಯವನ್ನು ಯಾರೂ ಮಾಡಲಾರರು’ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್‌ ತೀರ್ಪು ಹಿನ್ನೆಲೆಯಲ್ಲಿ ದೇಶದ ಹಲವೆಡೆ ಉಂಟಾದ ಗಲಭೆ, ಸಾವು ನೋವುಗಳಿಗೆ ಕಾಂಗ್ರೆಸ್‌ ಕಾರಣ ಎಂದು ಆರೋಪಿಸಿದರು ಬಿಜೆಪಿ ಅಧ್ಯಕ್ಷ, ಕೇಂದ್ರ ಸರಕಾರ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದರೂ, ಬಂದ್‌ಗೆ ಕರೆ ಯಾಕೆ ನೀಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ ಅಮಿತ್‌ ಶಾ.

Advertisement

Udayavani is now on Telegram. Click here to join our channel and stay updated with the latest news.

Next