ಜಮ್ಮು : “ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ಥಾನದ್ದು ಎಂಬ ನನ್ನ ಈ ಮೊದಲಿನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ; ನೀವು ಭಾರತವನ್ನು ಇನ್ನಷ್ಟು ತುಂಡು ಮಾಡಬೇಡಿ’ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಗುಡುಗಿದ್ದಾರೆ.
“ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರಕಾರ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸುವಂತಹ ನೀತಿಗಳನ್ನು ಜಾರಿಗೆ ತರುತ್ತಿದೆ; ಇಂತಹ ಕೆಲಸವನ್ನು ಸರಕಾರ ಮಾಡಬಾರದು; ಹಾಗೆ ಮಾಡುವ ಮೂಲಕ ನೀವು ದೇಶವನ್ನು ಇನ್ನಷ್ಟು ತುಂಡು ಮಾಡುವಿರಿ’ ಎಂದು ಅಬ್ದುಲ್ಲಾ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
“ನೀವು ಈಗಾಗಲೇ ಒಂದು ಪಾಕಿಸ್ಥಾನವನ್ನು ಮಾಡಿದ್ದೀರಿ. ಇನ್ನೆಷ್ಟು ಪಾಕಿಸ್ಥಾನಗಳನ್ನು ನೀವು ಮಾಡಬೇಕೆಂದಿದ್ದೀರಿ ? ಭಾರತವನ್ನು ಇನ್ನೆಷ್ಟು ತುಂಡು ಮಾಡುವಿರಿ ?’ ಎಂದು ಅಬ್ದುಲ್ಲಾ ಅವರು ಇಲ್ಲಿನ ನಡೆದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಪಿಓಕೆ ಪಾಕಿಸ್ಥಾನದ್ದು ಎಂದು ಹೇಳುವ ಮೂಲಕ ಅಬ್ದುಲ್ಲಾ ಈಚೆಗೆ ಭಾರೀ ವಿವಾದವನ್ನು ಸೃಷ್ಟಿಸಿದ್ದರು.
“ಪಿಓಕೆ ಪಾಕಿಸ್ಥಾನದ್ದೇ. ಅಲ್ಲಿನವರು ಬಳೆ ತೊಡುತ್ತಾರಾ ? ಅವರ ಹತ್ತಿರ ಅಣು ಬಾಂಬ್ ಕೂಡ ಇದೆ. ನಮ್ಮನ್ನು ಅವರು ಕೊಂದು ಬಿಡಲೆಂದು ನೀವು ಬಯಸುವಿರಾ ? ನೀವು ಸುಭದ್ರವಾದ ಅರಮನೆಯೊಳಗೆ ಕುಳಿತು ಗಡಿ ಭಾಗದಲ್ಲಿ ವಾಸಿಸಿಕೊಂಡಿರುವ ಬಡ ಜನರ ಬಗ್ಗೆ ಆಲೋಚಿಸುತ್ತೀರಿ. ಪಾಕಿಗಳು ಅವರ ಮೇಲೆ ದಿನನಿತ್ಯ ಎಂಬಂತೆ ಬಾಂಬ್ ದಾಳಿ ನಡೆಸುತ್ತಿದ್ದಾರೆ’ ಎಂದು ಅಬ್ದುಲ್ಲಾ ಗುಡುಗಿದರು.
ಪಿಓಕೆ ಪಾಕಿಸ್ಥಾನದ್ದೆಂದು ಹೇಳಿರುವ ಅಬ್ದುಲ್ಲಾ ಮತ್ತು ಬಾಲಿವುಡ್ ನಟ ರಿಷಿ ಕಪೂರ್ ವಿರುದ್ಧ ಜಮ್ಮು ಕಾಶ್ಮೀರದ ಸುಕೇಶ್ ಖಜೂರಿಯಾ (ರಾಜ್ಯ ಸರಕಾರ ಈಚೆಗೆ ರೂಪಿಸಿದ್ದ ಪೌರ ಸಲಹಾ ಸಮಿತಿಯ ಪ್ರಮುಖ ಸದಸ್ಯರು ಇವರು) ಈಚೆಗೆ ಜಿಲ್ಲಾ ಮ್ಯಾಜಿಸ್ಟ್ರೇಟರಲ್ಲಿ ದೇಹದ್ರೋಹದ ದೂರು ದಾಖಲಿಸಿದ್ದಾರೆ.