Advertisement
ಅನಾರೋಗ್ಯ, ಪ್ರೇಮ ವೈಫಲ್ಯ, ಸಾಲದ ಹೊರೆ, ಅವಮಾನ, ಪರೀಕ್ಷೆಗಳಲ್ಲಿ ಸೋಲು ಇವೆಲ್ಲವೂ ಆತ್ಮಹತ್ಯೆಯ ತತ್‌ಕ್ಷಣದ ಕಾರಣಗಳು. ಆದರೆ ಆತ್ಮಹತ್ಯೆಯ ಯೋಚನೆಯ ಹಿಂದೆ ಅನೇಕ ಸಮಯದ ಮಾನಸಿಕ ತೊಳಲಾಟ ಇಲ್ಲದಿರದು. ಈ ನಿರ್ಧಾರಕ್ಕೆ ಬರುವ ಮೊದಲು ಆತ /ಆಕೆ ಒಂದಷ್ಟು ಕಾಲ ಮಾನಸಿಕ ಖಿನ್ನತೆಯನ್ನು ಅನುಭವಿಸಿ ಹತಾಶರಾಗಿರುತ್ತಾರೆ. ಸೋಲು ಎದುರಿಸಲಾರದ ದುರ್ಬಲ ಮನಸ್ಸು ಈ ಕೃತ್ಯಕ್ಕೆ ಪ್ರೇರೇಪಿಸುತ್ತದೆ.
Related Articles
Advertisement
ಸಮಸ್ಯೆಗಳು ಬಂದಾಗ ಕುಸಿದು ಹೋಗುವುದು ಸಹಜ. ಆದರೆ ಇವುಗಳಿಗೆಲ್ಲ ಆತ್ಮಹತ್ಯೆ ಪರಿಹಾರವಾಗ ಕೂಡದು. ಹಾಗೆ ಸತ್ತಾಗ ನೂರಾರು ಸಮಸ್ಯೆಗಳನ್ನು ಬಿಟ್ಟು ಹೋದಂತೆಯೇ. ಸತ್ತವರ ಕುರಿತು ನೂರಾರು ಮಾತುಗಳು ಮನೆಯರಿಗೆ, ಹೆತ್ತವರಿಗೆ ಅಸಹನೀಯ ನೋವು, ಏನೇನೋ ಪ್ರಶ್ನೆಗಳು, ಹಲವಾರು ಸಂಶಯಗಳು ಹೆತ್ತವರನ್ನು ಹಿಂಸಿಸುತ್ತವೆ.
ಯಾಕೆ ಮನಸ್ಸು ಅಷ್ಟೊಂದು ದುರ್ಬಲವಾಗುತ್ತದೆ? ನಮ್ಮ ಸಾಮಾಜಿಕ ಪರಿಸ್ಥಿತಿಯೇ ಇದನ್ನು ಪರೋಕ್ಷವಾಗಿ ಪ್ರೇರೇಪಿಸುತ್ತಿದೆಯಾ? ಇನ್ನೊಬ್ಬರ ಸೋಲು, ನೋವುಗಳನ್ನು ಕಂಡು ಸಮಾಧಾನ ಹೇಳುವ ಬದಲು ಖುಷಿಪಡುವ ಮನೋಭಾವ ಹೆಚ್ಚುತ್ತಿದೆಯಾ? ನಮ್ಮನಮ್ಮೊಳಗೆ ಪರಸ್ಪರ ಪ್ರೀತಿ, ನಂಬಿಕೆ, ಸಹಕಾರ, ವಿಶ್ವಾಸಗಳು ಕಳೆದು ಹೋಗಿದೆಯಾ? ಕುಟುಂಬದಲ್ಲಿನ ಕಾಳಜಿ, ಬಾಂಧವ್ಯಗಳು ಕುಸಿದು ಹೋಗಿವೆಯಾ?
ಇದಕ್ಕೇನು ಪರಿಹಾರ?ಎಲ್ಲರಿಗೂ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಸೋಲು ಹತಾಶೆಗಳು ಬಂದು ಹೋಗುವುದು ಸಹಜ. ಆರ್ಥಿಕ ಸಂಕಷ್ಟ , ಸಾಂಸಾರಿಕ ತಾಪತ್ರಯಗಳು, ಆರೋಗ್ಯ ಸಮಸ್ಯೆ, ಪ್ರೇಮ ವೈಫಲ್ಯ, ಅವಮಾನ ಇವೆಲ್ಲವೂ ಬದುಕಿನ ವಿವಿಧ ಮಜಲುಗಳು. ಇವೆಲ್ಲದರ ವಿರುದ್ಧ ಹೋರಾಡಲೇಬೇಕು. ಅಂಥ ದೃಢ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇಲ್ಲಿ ಯಾವುದೂ ಶಾಶ್ವತ ಅಲ್ಲ. ಸೋಲಾಗಲಿ, ಗೆಲು ವಾಗಿರಲಿ ಬದಲಾವಣೆ ಜಗದ ನಿಯಮ. ಸೋಲಿಗೆ ಸೋತು ಸಾವಿಗೆ ಶರಣಾಗುವುದು ಪರಿಹಾರ ಎನ್ನುವ ಮನೋಭಾವ ಬದಲಿಸಿಕೊಳ್ಳಬೇಕು. ಮುಖ್ಯವಾಗಿ ಸಾವಿಗೆ ಶರಣಾಗುವ ಮಕ್ಕಳು ಮತ್ತು ಯುವ ಜನಾಂಗದ ಮನಃಸ್ಥಿತಿಯನ್ನು ಬದಲಿಸಬೇಕಿದೆ. ಗೆಲುವಿನ ಮಂತ್ರದ ಬದಲು ಸೋಲಿನ ಪಾಠವನ್ನು ಹೇಳಿಕೊಡಬೇಕು. ಸೋತಾಗ ತಿರಸ್ಕಾರದಿಂದ ನೋಡದೆ ಸೋಲು ಸಾಮಾನ್ಯ ಎನ್ನುವುದನ್ನು ತಿಳಿಸ ಬೇಕು. ಹೆತ್ತವರು ಮಕ್ಕಳಿಗೆ ಕೇವಲ ಅಂಕಗಳನ್ನು ಗಳಿಸುವ ಶಾಲಾ ಶಿಕ್ಷಣಕ್ಕೆ ಮಾತ್ರ ಪ್ರಾಧಾನ್ಯ ನೀಡುವ ಬದಲು ಬದುಕುವ ಕಲೆಯನ್ನು ಕಲಿಸುವ ವಿಚಾರಗಳಿಗೆ ಅವರನ್ನು ತೆರೆದಿಡಬೇಕು. ಕಷ್ಟದ ಬದುಕನ್ನು ಅವರಿಗೆ ತೋರಿಸಬೇಕು. ಆದರೆ ಈಗಿನ ಹೆತ್ತವರು ತಮ್ಮ ಮಕ್ಕಳಿಗೆ ಅತಿಯಾದ ಒತ್ತಡವನ್ನು ಹೇರುವ ಮೂಲಕ ಅವರ ವ್ಯಕ್ತಿತ್ವಕ್ಕೆ ಬೇಲಿ ಹಾಕುವುದರಿಂದ ಹೊರಗಿನ ಪ್ರಪಂಚದ ಅರಿವು ಅವರಲ್ಲಿ ಸೀಮಿತವಾಗುತ್ತದೆ. ಯಶಸ್ಸು ಒಂದೇ ಗುರಿಯಾಗಿರುವ ಅವರು ಸೋಲಿನ ವಾಸ್ತವವನ್ನು ಅರಗಿಸಿಕೊಳ್ಳಲಾಗದೆ ಆತ್ಮಹತ್ಯೆ ಒಂದೇ ಪರಿಹಾರ ಎಂದುಕೊಂಡು ಸಾವಿಗೆ ಶರಣಾಗುತ್ತಾರೆ. ಮನೆಯಲ್ಲಿ ಮುಕ್ತ ವಾತಾವರಣವಿದ್ದಾಗ ಪರಸ್ಪರ ನೋವನ್ನು ಹಂಚಿಕೊಂಡು ಹಗುರವಾಗಲು ಸಾಧ್ಯವಾಗುತ್ತದೆ. ಪರಸ್ಪರ ಸಹಕಾರದಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಸಮಸ್ಯೆಗಳು ಎದುರಾದಾಗ ಅದನ್ನು ಕೆಣಕಿ ಮತ್ತಷ್ಟು ಹೆಚ್ಚಿಸುವ ಬದಲಾಗಿ ನಂಬಿಕಸ್ಥರ ಜತೆ ಶಾಂತವಾಗಿ ಕುಳಿತು ಮುಕ್ತವಾಗಿ ಮಾತನಾಡುವ ಮೂಲಕ ಮಾನಸಿಕವಾಗಿ ಕುಸಿದು ಹೋದ ಅವರನ್ನು ಸ್ವಲ್ಪ ಮಟ್ಟಿಗೆ ಬದಲಿಸಬಹುದು. ಇನ್ನೊಬ್ಬರ ನೋವು, ಸಮಸ್ಯೆಗಳನ್ನು ಕೆಣಕಿ, ಕೆದಕಿ ಭೂತಕನ್ನಡಿಯಿಂದ ನೋಡುವುದು ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದಂತೆ. ಕಳೆದು ಜೋದ ಜೀವ ಮತ್ತೆ ಬೇಕೆಂದರೂ ಬರಲಾರದು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಆಪ್ತ ಸಲಹಾ ಕೇಂದ್ರಗಳು ಅಗತ್ಯವಾಗಿ ಇರಬೇಕು. ಅವುಗಳು ಕಾಟಾಚಾರಕ್ಕಾಗಿ ಇರಕೂಡದು. ಆಪ್ತ ಸಲಹಾಕಾರರು ಆಪ್ತಮಿತ್ರರಂತಿರಬೇಕು. ಅವರು ಸಾಧ್ಯವಾದಷ್ಟು ಸಂಸ್ಥೆಯ ಹೊರಗಿನವರಿದ್ದರೆ ಉತ್ತಮ. ಏಕೆಂದರೆ ಶಾಲಾ ಕಾಲೇಜುಗಳಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳ ವೈಯಕ್ತಿಕ ಸಮಸ್ಯೆಗಳ ಗೌಪ್ಯತೆಯನ್ನು ಕಾಯ್ದುಕೊಳ್ಳಬಹುದೆಂದು ಮಕ್ಕಳಿಗೆ ನಂಬಿಕೆ ಇರಲಾರದು. ಅವರ ಇತರ ಸಹೋ ದ್ಯೋಗಿಗಳ ಜತೆಗೆ ಹೇಳಬಹುದು, ತಮ್ಮ ವಿಷಯ ಎಲ್ಲರಿಗೂ ತಿಳಿಯಬಹುದು ಎಂಬ ಭಯದಿಂದ ಅವರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂಜರಿಯಬಹುದು. ಹೆಚ್ಚಿನ ಸಲ ಇದು ವಾಸ್ತವ ಕೂಡ ಮತ್ತು ಎಲ್ಲ ಅಧ್ಯಾಪಕರಿಗೆ ಆಪ್ತಸಲಹಾ ಕೌಶಲವಿರುತ್ತದೆ ಎಂದು ಹೇಳಲಾಗದು. ಮಕ್ಕಳ ಸಮಸ್ಯೆಗಳನ್ನು ಆಲಿಸಿ ಅದನ್ನು ಪರಿಹರಿಸಬಲ್ಲ ಮತ್ತು ಮಕ್ಕಳಿಗೆ ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗಬಲ್ಲ ಶಿಕ್ಷಕರನ್ನು ಆಯ್ದು ಇಂತಹ ಸಮಿತಿಯ ಸಂಚಾಲಕರನ್ನಾಗಿ ಮಾಡಿದರೆ ಸ್ವಲ್ಪಮಟ್ಟಿಗೆ ಸಹಾಯವಾಗಬಹುದು ಮತ್ತು ಆಪ್ತ ಸಲಹಾ ಸಮಿತಿಯ ಉದ್ದೇಶವೂ ಪೂರೈಸಬಹುದು. ದುರದೃಷ್ಟವಶಾತ್ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಆಪ್ತ ಸಲಹಾ ಕೇಂದ್ರಗಳು ಕೇವಲ ಕಾಟಾಚಾರಕ್ಕಿವೆ. ಅಲ್ಲಿ ಆಪ್ತ ಸಲಹೆ ಇರುವುದಿಲ್ಲ. ಆತ್ಮಹತ್ಯೆ ಎನ್ನುವುದು ಕೇವಲ ವ್ಯಕ್ತಿಯೊಬ್ಬನ ದೌರ್ಬಲ್ಯವಲ್ಲ. ಇದು ಒಂದು ಸಾಮಾಜಿಕ ಸಮಸ್ಯೆ. ಒಬ್ಬ ವ್ಯಕ್ತಿಯ ಆತ್ಮಹತ್ಯೆಗೆ ಆತ ಮಾತ್ರ ಕಾರಣನಲ್ಲ, ನಾವೆಲ್ಲರೂ ಕಾರಣರಾಗುತ್ತೇವೆ. ಜೀವಂತವಾಗಿರುವಾಗ ಸರಿಯಾಗಿ ಸ್ಪಂದಿಸದೆ ಆ ಕ್ಷಣಕ್ಕೆ ಸಹಾಯಕ್ಕೆ ಒದಗದೆ ಸರಿಯಾದ ಮಾರ್ಗ ದರ್ಶನವಿಲ್ಲದೆ ಇರುವುದರಿಂದ ಆತ್ಮಹತ್ಯೆಯ ಪ್ರಯತ್ನಗಳು ದುರಂತದಲ್ಲಿ ಕೊನೆಯಾಗುತ್ತದೆ. ಸೋತಾಗ ಸಾಯಬೇಕು ಎಂದೆನಿಸಿದಾಗ ಒಂದು ಕ್ಷಣ ಯಾರಲ್ಲಾ ದರೂ ಮಾತನಾಡಿ. ಬದುಕಿನ ದಾರಿ ಬದಲಾಗಬಹುದು. -ವಿದ್ಯಾ ಅಮ್ಮಣ್ಣಾಯ,ಕಾಪು