Advertisement

ವನಮಹೋತ್ಸವ ಆಚರಣೆಗೆ ಸೀಮಿತ ಆಗದಿರಲಿ

11:58 AM Jul 26, 2022 | Team Udayavani |

ಶಹಾಬಾದ: ಇತ್ತೀಚಿನ ದಿನಗಳಲ್ಲಿ ಪರಿಸರ ದಿನಾಚರಣೆ, ವನಮಹೋತ್ಸವ ಕಾರ್ಯಕ್ರಮಗಳು ಆಚರಣೆಗೆ ಮಾತ್ರ ಸೀಮಿತವಾಗಿದೆ ಎಂದು ಕಾಂಗ್ರೆಸ್‌ ಯುವ ಮುಖಂಡ ರವಿ ಚವ್ಹಾಣ ವಿಷಾದ ವ್ಯಕ್ತಪಡಿಸಿದರು.

Advertisement

ತಾಲೂಕಿನ ಅಲ್ದಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಸತ್ಯ ಮೈಕ್ರೋ ಫೈನಾನ್ಸ್‌ ಸಂಸ್ಥೆಯ ಆಯೋಜಿಸಲಾದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಸರ ಕುರಿತಾದ ಹಲವು ಆಚರಣೆಗಳು ಒಂದು ದಿನಕ್ಕೆ ಮಾತ್ರ ಸೀಮಿತವಾಗಿದ್ದು, ಆ ಬಳಿಕ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪರಿಸರ ದಿನಾಚರಣೆ ತನ್ನ ಮಹತ್ವ ಕಳೆದುಕೊಂಡು ಒಂದು ರೀತಿಯಲ್ಲಿ ಒಣ ಮಹೋತ್ಸವ ಆಗುತ್ತಿದೆ ಎಂದರು.

ಸರಕಾರ, ಅರಣ್ಯ ಇಲಾಖೆ ಇಂತಹ ದಿನಾಚರಣೆಗಳ ಸಂದರ್ಭದಲ್ಲಿ ಪಕ್ಷಿ ಸಂಕುಲದ ಬಗ್ಗೆಯೂ ಚಿಂತನೆ ನಡೆಸಬೇಕಾಗಿದೆ. ಮರಗಳನ್ನೇ ನಂಬಿ ಬದುಕುವ ಪಕ್ಷಿಗಳನ್ನು ಉಳಿಸಲು ಅಕೇಶಿಯಾ, ಹೊನ್ನೆ, ಬೀಟಿ, ತೇಗದಂತಹ ಮರಗಳನ್ನು ಬೆಳೆಸುವ ಬದಲು ಅವುಗಳಿಗೆ ಆಹಾರವಾಗಬಲ್ಲ ಹಣ್ಣಿನ ಗಿಡಗಳನ್ನು ಬೆಳೆಸುವತ್ತ ಚಿಂತಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಬುದ್ಧಿಜೀವಿಯಾದ ಮನುಷ್ಯ ತನ್ನಂತೆ ಇತರ ಜೀವಿಗಳೂ ಬದುಕುವ ಹಕ್ಕನ್ನು ಹೊಂದಿವೆ ಎಂಬುದನ್ನು ಅರಿತು ವನ ಮಹೋತ್ಸವ ದಿನಾಚರಣೆಗಳ ಸಂದರ್ಭದಿಂದ ಮೊದಲುಗೊಂಡು ವರ್ಷಪೂರ್ತಿ ಪೂರಕ ವಾತಾವರಣ ನಿರ್ಮಿಸುವ ಪಣ ತೊಡಬೇಕಿದೆ ಎಂದು ಕರೆ ನೀಡಿದರು.

ಮಾಡಬೂಳ ಪೊಲೀಸ್‌ ಠಾಣೆಯ ಎಎಸ್‌ಐ ಭೀಮಾಶಂಕರ ಮಾತನಾಡಿ, ಗಿಡ-ಮರಗಳ ಮಾರಣ ಹೋಮ ಹೆಚ್ಚುತ್ತಿರುವುದರಿಂದ ಅರಣ್ಯ ಸಂಪತ್ತು ಇನ್ನಿಲ್ಲವಾಗುತ್ತಿದೆ. ಇದರಿಂದಾಗಿ ಸತತ ಬರಗಾಲ ಎದುರಿಸುವ ದುಃಸ್ಥಿತಿ ಬಂದೋದಗಿದೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ, ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಲಾಲನೆ-ಪಾಲನೆ ಮಾಡುವ ಮೂಲಕ ಅರಣ್ಯ ಸಂಪತ್ತು ವೃದ್ಧಿಸುವ ನಿಟ್ಟಿನಲ್ಲಿ ಶ್ರಮಿಸಿದರೆ, ಖಂಡಿತಾ ಬರಗಾಲ ಅಳಿಸಬಹುದಾಗಿದೆ ಎಂದರು.

Advertisement

ಶಾಲೆಯ ಆವರಣದಲ್ಲಿ ಸುಮಾರು 125 ಸಸಿಗಳನ್ನು ನೆಡಲಾಯಿತು. ಗ್ರಾಮದ ಜನರಿಗೆ ಹಾಗೂ ಸತ್ಯಂ ಮೈಕ್ರೋ ಫೈನಾನ್ಸ್‌ ಗ್ರಾಹಕರಿಗೆ ಸೇರಿದಂತೆ ಸುಮಾರು 300 ಸಸಿ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ವಿಜಯಕುಮಾರ ಪೊಲೀಸ್‌ ಪಾಟೀಲ, ಉಪಾಧ್ಯಕ್ಷ ವಜೀರ ಪಟೇಲ್‌, ಸತ್ಯ ಮೈಕ್ರೋ ಫೈನಾನ್ಸ್‌ ಸಂಸ್ಥೆಯ ಮುಖ್ಯಸ್ಥರಾದ ಶಿವಪ್ರಸಾದ, ಶಾಲೆಯ ಮುಖ್ಯಗುರುಮಾತೆ ಸಂತೋಷಿ ಕೆ.ಎಂ, ಶಿಕ್ಷಕರಾದ ಪರಶುರಾಮ ಗುತ್ತಲ್‌, ರಜಿಯಾಬೇಗಂ, ಕೌಸರ್‌ ಶಾಹೀನ್‌, ಕೀಮಿಬಾಯಿ ರಾಠೊಡ, ಕೃಷ್ಣ ಗುತ್ತೆದಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next