Advertisement

ಎಚ್ಚರ ತಪ್ಪದಿರಿ; ಹೆಚ್ಚುತ್ತಿವೆ ಕೋವಿಡ್‌ ಸೋಂಕು ಪ್ರಕರಣಗಳು

03:11 AM Dec 06, 2021 | Team Udayavani |

ಬೆಂಗಳೂರು: ದೇಶಕ್ಕೆ ಈಗಾಗಲೇ ಕೊರೊನಾದ ಒಮಿಕ್ರಾನ್‌ ರೂಪಾಂತರ ಪ್ರವೇಶ ಪಡೆದಿದೆ. ಈ ನಡುವೆ ರಾಜ್ಯ ದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿರುವುದು ಮತ್ತೂಂದು ಆತಂಕಕಾರಿ ಬೆಳವಣಿಗೆ. ಕಳೆದ ಒಂದು ವಾರದಲ್ಲಿ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಶೇ. 56ರಷ್ಟು ಏರಿಕೆಯಾಗಿದ್ದು, ಮೈಮರೆಯುವಂತಿಲ್ಲ ಎನ್ನುವುದನ್ನು ಮತ್ತೂಮ್ಮೆ ನೆನಪಿಸಿದೆ.

Advertisement

ನ. 29ರಿಂದ ಡಿ. 5ರ ವರೆಗೆ ರಾಜ್ಯದಲ್ಲಿ ಒಟ್ಟು 2,499 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, 32 ಮಂದಿ ಮೃತಪಟ್ಟಿದ್ದಾರೆ. ದೃಢಪಟ್ಟಿರುವ ಒಟ್ಟು ಪ್ರಕರಣಗಳ ಪೈಕಿ ಶೇ. 50ಕ್ಕಿಂತ ಹೆಚ್ಚು ಬೆಂಗಳೂರು ನಗರದಲ್ಲೇ ಪತ್ತೆಯಾಗಿವೆ. ಡಿ. 5ರಂದು ಮರಣ ಪ್ರಮಾಣ ಶೇ. 1ರಿಂದ ಶೇ. 1.35ಕ್ಕೆ ಮತ್ತು ಪಾಸಿಟಿವಿಟಿ ದರ ಶೇ. 0.35ರಿಂದ ಶೇ. 0.41ಕ್ಕೆ ಹೆಚ್ಚಿದೆ.

ಎಲ್ಲೆಲ್ಲಿ ಅತ್ಯಧಿಕ ಪ್ರಕರಣ?
ಒಂದು ವಾರದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 1,362, ಮೈಸೂರಿನಲ್ಲಿ 193, ದಕ್ಷಿಣ ಕನ್ನಡದಲ್ಲಿ 108, ಧಾರವಾಡದಲ್ಲಿ 101 ಸೇರಿ ಒಟ್ಟು 889 ಮಂದಿಗೆ ಸೋಂಕು ತಗಲಿದೆ. ಉಡುಪಿ, ಕೊಪ್ಪಳ, ಹಾವೇರಿ ಮತ್ತಿತರ ಜಿಲ್ಲೆಗಳಲ್ಲಿ ಒಟ್ಟು 248 ಪ್ರಕರಣಗಳು ಪತ್ತೆಯಾಗಿವೆ. ಯಾದಗಿರಿ, ವಿಜಯಪುರ ಜಿಲ್ಲೆಯಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ.

ಪರೀಕ್ಷೆ ಹೆಚ್ಚಳವೂ ಕಾರಣ
ರಾಜ್ಯದಲ್ಲಿ ಒಮಿಕ್ರಾನ್‌ ಪತ್ತೆಯಾದ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಯನ್ನು ಶೇ. 70ರಷ್ಟು ಹೆಚ್ಚಿಸಲಾಗಿದೆ. ಪ್ರತಿನಿತ್ಯ 1 ಲಕ್ಷ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಶೇ. 50ರಷ್ಟು ಮಾದರಿಗಳನ್ನು ಜಿಲ್ಲಾ ಕೇಂದ್ರ, ಶೇ. 40ರಷ್ಟು ಗ್ರಾಮೀಣ ಕೇಂದ್ರ, ಶೇ. 10ರಷ್ಟು ಮಕ್ಕಳಿಂದ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. 15 ದಿನಗಳ ಹಿಂದೆ ನಿತ್ಯ ಸುಮಾರು 30 ಸಾವಿರದಷ್ಟು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಪರೀಕ್ಷೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪಾಸಿಟಿವ್‌ ಹೆಚ್ಚಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

Advertisement

3,634 ಮಂದಿಗೆ ತಪಾಸಣೆ
ಒಮಿಕ್ರಾನ್‌ ನಿಗ್ರಹ ಕ್ರಮವೆಂಬಂತೆ ವಿಮಾನ ನಿಲ್ದಾಣಗಳಲ್ಲಿ ಇದುವರೆಗೆ 3,634 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಅತೀ ಅಪಾಯ ದೇಶಗಳಿಂದ 1,218 ಮಂದಿ ಆಗಮಿಸಿದ್ದು, ಅವರನ್ನು ಪರೀಕ್ಷೆ ಒಳಪಡಿಸಿ ಪಾಸಿಟಿವ್‌ ಬಂದವರ ಮಾದರಿಯನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ.

4 ಜಿಲ್ಲೆಗಳಲ್ಲಿ
ಹೈ ಅಲರ್ಟ್‌
ತುಮಕೂರು, ಧಾರವಾಡ, ಬೆಂಗಳೂರು ನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಇತ್ತೀಚೆಗೆ ಕೊರೊನಾ ಸೋಂಕು  ಪೀಡಿತರ ಸಂಖ್ಯೆ ಯಲ್ಲಿ ಗಣನೀಯ ಏರಿಕೆ ಕಾಣು  ತ್ತಿರುವ ಹಿನ್ನೆಲೆ ಯಲ್ಲಿ ಈ ನಾಲ್ಕೂ ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಿಸ ಲಾಗಿದೆ. ಕೇಂದ್ರ ಆರೋಗ್ಯ ಕಾರ್ಯ ದರ್ಶಿ ರಾಜೇಶ್‌ ಭೂಷಣ್‌ಅವರು ರಾಜ್ಯಕ್ಕೆ ಪತ್ರ ಬರೆದು,
ಈ ಕುರಿತು ಎಚ್ಚರಿಕೆ ನೀಡಿದ್ದರು.

ಒಂದೇ ದಿನ 17 ಮಂದಿಗೆ ಒಮಿಕ್ರಾನ್‌
ರವಿವಾರ ಒಂದೇ ದಿನ ದೇಶದಲ್ಲಿ 17 ಮಂದಿಗೆ ಒಮಿಕ್ರಾನ್‌ ಸೋಂಕು ದೃಢಪಟ್ಟಿದೆ. ದೇಶದ ಒಟ್ಟು ಒಮಿಕ್ರಾನ್‌ ಸೋಂಕು ಪೀಡಿತರ ಸಂಖ್ಯೆ 21ಕ್ಕೆ ಏರಿದೆ. ದಿಲ್ಲಿಯಲ್ಲಿ ಒಬ್ಬರು, ಮಹಾ ರಾಷ್ಟ್ರದಲ್ಲಿ 7 ಮತ್ತು ರಾಜಸ್ಥಾನದಲ್ಲಿ 9 ಮಂದಿಗೆ ಹೊಸ ರೂಪಾಂತರಿ ದೃಢಪಟ್ಟಿದೆ. ಮಹಾರಾಷ್ಟ್ರದ ಪುಣೆಯಲ್ಲಿ ನೈಜೀರಿಯಾದಿಂದ ಬಂದಿದ್ದ ಒಬ್ಬ ಮಹಿಳೆ, ಅವರ ಇಬ್ಬರು ಪುತ್ರಿಯರು, ಅವರ ಸೋದರ ಮತ್ತು ಸೋದರನ ಇಬ್ಬರು ಮಕ್ಕಳು ಹಾಗೂ ಫಿನ್ಲಂಡ್‌ನಿಂದ ವಾಪಸಾಗಿದ್ದ ಒಬ್ಬ ವ್ಯಕ್ತಿಗೆ ಒಮಿಕ್ರಾನ್‌ ಸೋಂಕು ತಗಲಿದ್ದು ರವಿವಾರ ಗೊತ್ತಾಗಿದೆ. ಜೈಪುರದಲ್ಲಿ ಒಂದೇ ಕುಟುಂಬದ 9 ಮಂದಿಗೆ ಸೋಂಕು ತಗಲಿದೆ. ಇವರು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದಿಂದ ಮರಳಿದ್ದರು. ತಾಂಜಾನಿಯಾದಿಂದ ದಿಲ್ಲಿಗೆ ಬಂದ 37 ವರ್ಷದ ವ್ಯಕ್ತಿಯಲ್ಲೂ ಒಮಿಕ್ರಾನ್‌ ಕಾಣಿಸಿಕೊಂಡಿದೆ.

ಶಾಲೆಗಳಲ್ಲಿ ಸೋಂಕು ಹೆಚ್ಚಳ
ಇತ್ತೀಚೆಗೆ ಅತೀ ಹೆಚ್ಚು ಕೊರೊನಾ ಕ್ಲಸ್ಟರ್‌ಗಳು ಶಾಲೆ-ಕಾಲೇಜುಗಳಲ್ಲಿ ಕಂಡುಬರುತ್ತಿವೆ. ಧಾರವಾಡ, ಆನೇಕಲ್‌ನ ಶಿಕ್ಷಣ ಸಂಸ್ಥೆಗಳ ಬಳಿಕ ಚಿಕ್ಕಮಗಳೂರಿನ ಬಾಳೆ ಹೊನ್ನೂರು ಜವಾಹರ್‌ ನವೋದಯ ಶಾಲೆಯಲ್ಲಿ ಒಂದೇ ದಿನ ವಿದ್ಯಾರ್ಥಿಗಳು, ಸಿಬಂದಿ ಸೇರಿ 69 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕುಪೀಡಿತರನ್ನು ಐಸೋಲೇಶನ್‌ ಮಾಡ ಲಾಗಿದೆ. ಆನೇಕಲ್‌ ತಾಲೂಕಿನ ದೊಮ್ಮಸಂದ್ರದ ದಿ ಇಂಟರ್‌ನ್ಯಾಶನಲ್‌ ಶಾಲೆಯಲ್ಲಿ ಮತ್ತೆ 5 ಹಾಗೂ ಮರಸೂರಿನ ಸ್ಫೂರ್ತಿ ನರ್ಸಿಂಗ್‌ ಕಾಲೇಜಿನಲ್ಲಿ 7 ಮಂದಿಗೆ ಕೊರೊನಾ ಪಾಸಿಟಿವ್‌ ಆಗಿದೆ. ಇತ್ತೀಚೆಗೆ ಈ ಸಂಸ್ಥೆಗಳಲ್ಲಿ ಕ್ರಮವಾಗಿ 34 ಮಂದಿ ಮತ್ತು 17 ವಿದ್ಯಾರ್ಥಿಗಳಿಗೆ ಸೋಂಕು ತಗುಲಿತ್ತು.

ಭಯ ಬೇಡ: ಒಮಿಕ್ರಾನ್‌ ಪೀಡಿತ ವೈದ್ಯ
ಒಮಿಕ್ರಾನ್‌ ಅಪಾಯಕಾರಿ ಅಥವಾ ಮಾರಣಾಂತಿಕ ಅಲ್ಲ. ಗಂಭೀರ ರೋಗ ಲಕ್ಷಣ ಗಳು ಇಲ್ಲದೆ ಇರುವವರು ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು ಗುಣಮುಖರಾಗಬಹುದು..

ಹೀಗೆಂದು ರಾಜ್ಯದಲ್ಲಿ ಒಮಿಕ್ರಾನ್‌ ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯು ತ್ತಿರುವ 46 ವರ್ಷದ ವೈದ್ಯರು ಹೇಳಿದ್ದಾರೆ. “ನನಗೆ ಶೀತ, ಕೆಮ್ಮು ಏನೂ ಇರಲಿಲ್ಲ. ಉಸಿರಾಟದ ತೊಂದರೆ ಉಂಟಾಗಿಲ್ಲ. ಆರಂಭದಲ್ಲಿ ಸುಸ್ತು ಕಂಡುಬಂತು.

ನ. 25ರಂದು ಮೋನೋಕ್ಲೋನಲ್‌ ಆ್ಯಂಟಿಬಾಡೀಸ್‌ ನೀಡಲಾಯಿತು. ಮಾರನೇ ದಿನ ಬೆಳಗ್ಗೆಯೇ ನನ್ನ ಎಲ್ಲ ರೋಗಲಕ್ಷಣ ಮಾಯವಾಗಿ ಸಹಜಸ್ಥಿತಿಗೆ ಬಂದೆ ಎಂದಿದ್ದಾರೆ. ಹೊಸ ರೂಪಾಂತರಿ ಬಗ್ಗೆ ಆತಂಕದ ಅಗತ್ಯವಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next