Advertisement

ಸುಳ್ಳು ಸುದ್ದಿಗೆ ಭಯ ಪಡದಿರಿ: ಲಮಾಣಿ

09:32 PM May 23, 2021 | Team Udayavani |

ಮುದ್ದೇಬಿಹಾಳ: ಕೋವಿಡ್‌ 2ನೇ ಅಲೆಯ ಗಾಳಿ ಸುದ್ದಿಗಳಿಗೆ ಗ್ರಾಮಸ್ಥರು ಭಯಭೀತರಾಗಬೇಕಿಲ್ಲ. ಪಾಸಿಟಿವ್‌ ಕಂಡುಬಂದವರನ್ನು ಪ್ರತ್ಯೇಕಿಸಿ ಕೊರೊನಾ ಸೆಂಟರ್‌, ಹೋಂ ಐಸೋಲೇಷನ್‌ಗೆ ಕಳಿಸಿದರೆ ಬೇರೆಯವರಿಗೆ ಹರಡುವ ಸಾಧ್ಯತೆ ಇರುವುದಿಲ್ಲ. ಆದರೂ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮ ಪಾಲಿಸಲೇಬೇಕು ಎಂದು ವಿಜಯಪುರ ಕಂದಾಯ ಉಪ ವಿಭಾಗಾಧಿ ಕಾರಿ ಬಲರಾಮ ಲಮಾಣಿ ಹೇಳಿದರು.

Advertisement

ಮುದ್ದೇಬಿಹಾಳ ತಾಲೂಕು ಬಿದರಕುಂದಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಶನಿವಾರ ನಡೆದ ಕೊರೊನಾ ಜಾಗೃತಿ, ಗ್ರಾಪಂ ಟಾಸ್ಕ್ಫೋರ್ಸ್‌ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಾಸಿಟಿವ್‌ ಬಂದವರು ಎಲ್ಲೆಡೆ ತಿರುಗಾಡಿದರೆ ಸಹಜವಾಗಿ ಇತರರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಇಂಥವರ ಮಾಹಿತಿ ಸಂಬಂಧಿ  ಸಿದವರಿಗೆ ನೀಡಿ ಪಾಸಿಟಿವ್‌ ಇರುವವರು ಹೊರಗಡೆ ತಿರುಗಾಡದಂತೆ ನೋಡಿಕೊಂಡರೆ ಬಹುತೇಕ ಸಮಸ್ಯೆ ಬಗೆಹರಿದಂತಾಗುತ್ತದೆ ಎಂದರು. ನಗರ, ಪಟ್ಟಣ ಪ್ರದೇಶದಲ್ಲಿ ಸೋಂಕು ಕಡಿಮೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿದೆ. ಗ್ರಾಪಂ ಅಧ್ಯಕ್ಷ, ಸದಸ್ಯರು, ಪಿಡಿಒ, ಆಶಾ, ಆರೋಗ್ಯ, ಅಂಗನವಾಡಿ ಕಾರ್ಯಕರ್ತೆಯರು ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ. ರೋಗ ಮುಚ್ಚಿಡುವ ಯತ್ನ ಮಾಡಿದರೆ ಒತ್ತಾಯದಿಂದ ಕೋವಿಡ್‌ ಸೆಂಟರ್‌ಗೆ ದಾಖಲಿಸುತ್ತೇವೆ.

ಸೋಂಕು ನಿಯಂತ್ರಿಸುವಲ್ಲಿ ಜನರ ಸಹಭಾಗಿತ್ವವೂ ಅಗತ್ಯ ಎಂದರು. ಪ್ರಭಾರ ತಾಪಂ ಇಒ ವೀರೇಶ ಹಿರೇಮಠ ಮಾತನಾಡಿ, ಜೂ.7ರವರೆಗೂ ಲಾಕ್‌ಡೌನ್‌ ವಿಸ್ತರಿಸಲಾಗಿದೆ. ಟಾಸ್ಕ್ಫೋರ್ಸ್‌ ಸಮಿತಿಯವರು ಜಾಗೃತಿ ಮೂಡಿಸುವ ಕೆಲಸ ಹೆಚ್ಚಾಗಿ ಮಾಡಬೇಕು. ಎಲ್ಲೆಡೆ ಸ್ಯಾನಿಟೈಸ್‌ ಮಾಡಿ ಸೋಂಕು ಹರಡದಂತೆ ಕ್ರಮವಹಿಸಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಸರ್ವೇಯಿಂದ ಸಿಕ್ಕ ಮಾಹಿತಿಯಂತೆ ಕಾರ್ಯಪಡೆ ಕೆಲಸ ಮಾಡಬೇಕು. ಸೋಂಕಿತರಿಗೆ ಕೋವಿಡ್‌ ಸೆಂಟರ್‌ಗೆ ಹೋಗುವಂತೆ ತಿಳಿಹೇಳಬೇಕು. ಹಳ್ಳಿಗಳಲ್ಲಿ ಸಣ್ಣ ಮನೆಯಲ್ಲಿ ಹೆಚ್ಚು ಜನರ ವಾಸ, ಒಂದೇ ಶೌಚಾಲಯ ಬಳಕೆಯಿಂದ ಸೋಂಕು ಹರಡುತ್ತದೆ ಎನ್ನುವ ಅರಿವಿರಬೇಕು. ಮಾಸ್ಕ್, ಸ್ಯಾನಿಟೈಸರ್‌, ಸಾಮಾಜಿಕ ಅಂತರದ ಮಹತ್ವ ಅರಿಯಬೇಕು. ಪಲ್ಸ್‌ ಆಕ್ಸಿಮೀಟರ್‌ನಲ್ಲಿ 90ಕ್ಕಿಂತ ಕಡಿಮೆ ಸಂಖ್ಯೆ ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು ಎಂದರು. ಪಿಎಸೈ ಎಂ.ಬಿ. ಬಿರಾದಾರ ಮಾತನಾಡಿ, ಎಲ್ಲಿಯವರೆಗೂ ನಾಗರಿಕ ಪ್ರಜ್ಞೆ ಜಾಗೃತವಾಗುವುದಿಲ್ಲವೋ ಅಲ್ಲಿಯವರೆಗೆ ಪರಿಸ್ಥಿತಿ ನಿಯಂತ್ರಣ ಕಷ್ಟಕರ. ಸರ್ಕಾರದೊಂದಿಗೆ ಎಲ್ಲರೂ ಕೈಜೋಡಿಸಿದ್ದಲ್ಲಿ ಸೋಂಕು ನಿರ್ಮೂಲನೆ ಸಾಧ್ಯ.

ಈ ವಿಷಯದಲ್ಲಿ ವಿನಾಕಾರಣ ವಾದ ಮಾಡುವುದು, ಆರೋಪಿಸುವುದು ಸರಿಯಲ್ಲ. ಪ್ರತಿಯೊಬ್ಬರೂ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಬೇಕು. ಸಮಸ್ಯೆ ಇದ್ದರೆ ಪೊಲೀಸರಿಗೆ ತಿಳಿಸಿದರೆ ಅದನ್ನು ನಾವು ಸರಿಪಡಿಸುತ್ತೇವೆ ಎಂದರು. ಪ್ರಭಾರ ತಹಶೀಲ್ದಾರ್‌ ಶಿವಲಿಂಗಪ್ರಭು ವಾಲಿ ಮಾತನಾಡಿ, ಗ್ರಾಮ ಮಟ್ಟದಲ್ಲಿ ಸೋಂಕು ತಡೆಗೆ ಕಂದಾಯ ಇಲಾಖೆಯಿಂದ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಕಂದಾಯ, ಪಂಚಾಯಿತಿ, ಆರೋಗ್ಯ ಇಲಾಖೆ ಸಿಬ್ಬಂದಿ ಸಮನ್ವಯತೆಯಿಂದ ಕೆಲಸ ಮಾಡಬೇಕು. ಆರೋಪ-ಪ್ರತ್ಯಾರೋಪ ಬಿಟ್ಟು ಮುತುವರ್ಜಿಯಿಂದ ಕೆಲಸ ಮಾಡಬೇಕು. ಸರ್ಕಾರ ಗ್ರಾಪಂಗೆ ಬಿಡುಗಡೆ ಮಾಡಿರುವ ಅನುದಾನ ಕೊರೊನಾ ನಿಯಂತ್ರಣಕ್ಕೆ ಬಳಸಿಕೊಳ್ಳಬೇಕು ಎಂದರು.

ಢವಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ| ಬಿ.ಎಂ. ಆಲಗೂರ ಮಾತನಾಡಿ, ಬಿದರಕುಂದಿಯಲ್ಲಿ 11 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 674 ಜನ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಗ್ರಾಮದಲ್ಲಿ ಪರಿಸ್ಥಿತಿ ಗಂಭೀರವಾಗಿಲ್ಲ. ಮುದ್ದೇಬಿಹಾಳ ಪಟ್ಟಣಕ್ಕೆ ಹೊಂದಿಕೊಂಡಿರುವುದರಿಂದ ಹೆಚ್ಚಿನ ಜಾಗ್ರತೆ ವಹಿಸುವಂತೆ ಸಲಹೆ ನೀಡಿದರು. ಈ ವೇಳೆ ಗ್ರಾಪಂ ಪಿಡಿಒ ಶೋಭಾ ಮುದಗಲ್‌, ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು, ಗ್ರಾಮದ ಪ್ರಮುಖರು, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಸೇರಿದಂತೆ ಟಾಸ್ಕ್ಫೋರ್ಸ್‌ ಸಮಿತಿ ಸದಸ್ಯರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next