ಸೈದಾಪುರ: ಜನ್ಮದಿನ, ಪುಣ್ಯ ಸ್ಮರಣೆಯ ಹೆಸರಲ್ಲಿ ಅನಗತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿ ದುಂದುವೆಚ್ಚ ಮಾಡುವ ಬದಲು ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಬೇಕಾದ ಸಹಾಯ ನೀಡುವುದು ಎಲ್ಲದಕ್ಕಿಂತ ಮೇಲೂ ಎಂದು ಮುಖ್ಯಗುರು ಲಿಂಗಾರೆಡ್ಡಿ ಗಬ್ಬೂರು ಅವರು ಅಭಿಪ್ರಾಯಪಟ್ಟರು.
ಸಮೀಪದ ಹೆಗ್ಗಣಗೇರಾ ಗ್ರಾಮದ ದಿ. ಶರಣಗೌಡ ತುಮಕೂರು ಅವರ 2ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪುತ್ರ ಚಂದ್ರಶೇಖರಗೌಡ ಅವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೀಡಿದ ಶೈಕ್ಷಣಿಕ ಅಗತ್ಯ ಸಾಮಗ್ರಿ ವಿತರಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳು ಆರ್ಥಿಕವಾಗಿ ಹತ್ತು ಹಲವು ಸಮಸ್ಯೆಗಳಿಂದ ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗದೆ ಪರದಾಡುತ್ತಿರುತ್ತಾರೆ. ಇಂತಹ ಮಕ್ಕಳಿಗೆ ಆಸಕ್ತಿಗೆ ಅನುಗುಣವಾಗಿ ಕಷ್ಟದ ಸಮಯದಲ್ಲಿ ಸಾರ್ವಜನಿಕರ ಸಹಕಾರದಿಂದ ಮತ್ತಷ್ಟು ಯಶಸ್ಸುಗಳಿಸಲು ಸಾಧ್ಯವಾಗುತ್ತದೆ ಎಂದರು.
ನಂತರ ಚಂದ್ರಶೇಖರಗೌಡ ಹೆಗ್ಗಣಗೇರಾ ಮಾತನಾಡಿ, ನಮ್ಮ ತಂದೆ ಇದ್ದಾಗಲೂ ಶಾಲೆಗೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬೇಕಾದ ವಿವಿಧ ಸಾಮಾಗ್ರಿಗಳನ್ನು ನೀಡುತ್ತಿದ್ದರು. ಅವರೊಬ್ಬ ಶಿಕ್ಷಣ ಪ್ರೇಮಿಯಾಗಿದ್ದರು. ನಾನು ಅವರ ಕಾರ್ಯಕ್ಕೆ ಹೆಗಲೊಡ್ಡಿದ್ದೇನೆ ಎಂದರು.
ಇದಕ್ಕೂ ಮೊದಲು ಸುಮಾರು 30 ವಿದ್ಯಾರ್ಥಿಗಳಿಗೆ ನೋಟ್-ಪುಸ್ತಕ, ಪೆನ್ನೂ, ಗಣಿತ ಕಿಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಸಾಹೇಬಗೌಡ ಕಲಾಲ್, ಲಕ್ಷ್ಮಣರೆಡ್ಡಿ ಕಲಾಲ್, ಹಿಮಾಮಸಾಬ್, ಅಂಗನವಾಡಿ ಶಿಕ್ಷಕಿ ಬೇಬಿ, ಸಿದ್ದಪ್ಪ ಬಾಗ್ಲಿ, ತಿಮ್ಮಪ್ಪ ಗೋಪಾಳಿ, ತಿಪ್ಪಯ್ಯ ಬೊಂಬೆ, ಸಾಬಣ್ಣ ಬಡಿಗೇರ, ಬಸಪ್ಪ ಬೋಳೇರ್, ಈರಪ್ಪ ಬಾಗ್ಲಿ, ರಾಜೇಶ್ವರಿ, ನಿಂಗಮ್ಮ ಸೇರಿದಂತೆ ಇತರರಿದ್ದರು.