Advertisement

ದಾನಿಗಳ ನೆರವು, ಶ್ರಮದಾನದಿಂದ ಮನೆ ನಿರ್ಮಾಣ

01:48 AM Jun 12, 2020 | Sriram |

ಸವಣೂರು: ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಸಮೀಪದಲ್ಲಿ ನಿರ್ಗ ತಿಕ ಕುಟುಂಬವೊಂದಕ್ಕೆ ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ., ಸದಸ್ಯ ಸತೀಶ್‌ ಅಂಗಡಿಮೂಲೆ, ಸಾಮಾಜಿಕ ಕಾರ್ಯಕರ್ತ, ವಿದ್ಯುತ್‌ ಗುತ್ತಿಗೆದಾರ ಸುಬ್ರಾಯ ಗೌಡ ಅವರ ನೇತೃತ್ವದಲ್ಲಿ ಚೆನ್ನಾವರ ಅಭ್ಯುದಯ ಯುವಕ ಮಂಡಲ ಮತ್ತು ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ಇದರ ಸಹಭಾಗಿತ್ವದಲ್ಲಿ ಮನೆ ನಿರ್ಮಿಸಿ ಮಾದರಿಯಾಗಿದ್ದಾರೆ. ಜೂ. 12ಕ್ಕೆ ಇದರ ಗೃಹಪ್ರವೇಶ ಮಾಡಿ ಕುಟುಂಬಕ್ಕೆ ಹಸ್ತಾಂತರಿಸಲಿದ್ದಾರೆ.

Advertisement

ಈ ಎರಡು ಯುವಕ ಮಂಡಲಗಳ ಸದಸ್ಯರು ಲಾಕ್‌ಡೌನ್‌ ಅವಧಿಯಲ್ಲಿ ನಿರಂತರವಾಗಿ ಶ್ರಮದಾನ ನಡೆಸುವ ಮೂಲಕ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಮನೆಯೊಂದನ್ನು ನಿರ್ಮಿಸಿದ್ದಾರೆ.

ಸವಣೂರು ಗ್ರಾ.ಪಂ.ನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕದ ಮಾಣಿ ಅವರ ಮಗಳು ಸುಂದರಿ ಅವರು ತನ್ನ ಮಕ್ಕಳಾದ ಆಶಾ, ಧನ್ವಿ, ಸನತ್‌ ಜತೆ ಸಣ್ಣ ಟರ್ಪಾಲ್‌ ಕಟ್ಟಿದ ಜೋಪಡಿಯಲ್ಲಿ ವಾಸವಾಗಿದ್ದರು. ಮಳೆ ಬಂದರೆ ಸೋರುವ ಮೇಲ್ಛಾವಣಿ, ಭದ್ರತೆ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿಯೇ ಜೀವನ ಕಳೆಯುತ್ತಿದ್ದರು. ಅವರ ದಯನೀಯ ಸ್ಥಿತಿ ಕಂಡು ಈ ಮಳೆಗಾಲದಲ್ಲಿ ಈ ಮನೆಯಲ್ಲಿರುವುದು ಕಷ್ಟಕರ ಎಂದು ಯುವಕರ ತಂಡ ತೀರ್ಮಾನಿಸಿತು. ಅವರ ಮನೆಯ ದಾಖಲೆ ಪತ್ರಗಳು ಸರಿಯಿಲ್ಲದ ಕಾರಣ ಸರಕಾರದ ನಿವೇಶನವೂ ದೊರಕಿರಲಿಲ್ಲ. ಹಾಗಾಗಿ ವಾಟ್ಸಪ್‌ನಲ್ಲಿ ಕಟ್ಟೋಣ ಬಾಳಿಗೊಂದು ಸೂರು ಎಂಬ ಗುಂಪು ರಚಿಸಿ, ದಾನಿಗಳನ್ನು, ಯುವಕ ಮಂಡಲಗಳ ಸದಸ್ಯರನ್ನು ಸೇರಿಸಿ ಕಾರ್ಯೋನ್ಮುಖರಾದರು.

ಪುತ್ತೂರು ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಂಡಾರಿ ಅವರು ಉದ್ಯೋಗ ಖಾತರಿ ಯೋಜನೆಯ ಮೂಲಕ ಬಾವಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದರು. ಅದರಂತೆ ಬಾವಿ ನಿರ್ಮಾಣದ ಕಾರ್ಯವೂ ಪೂರ್ಣಗೊಂಡಿದೆ. ಜತೆಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ದನದ ಕೊಟ್ಟಿಗೆ ನಿರ್ಮಾಣ, ಅಡಿಕೆ ತೋಟ ನಿರ್ಮಾಣ ಕಾರ್ಯವೂ ನಡೆದಿದೆ.

ಗ್ರಾಮ ಪಂಚಾಯತ್‌ಸದಸ್ಯ ಸತೀಶ್‌ ಅಂಗಡಿಮೂಲೆ ಇದರ ಉಸ್ತುವಾರಿ ವಹಿಸಿಕೊಂಡಿದ್ದರು.

Advertisement

ಹೃದಯ ತುಂಬಿದೆ
ಪತಿಯನ್ನು ಕಳೆದುಕೊಂಡು ವೃದ್ಧ ತಂದೆ, ಮೂವರು ಪುಟ್ಟ ಮಕ್ಕಳ ಜತೆ ಕಷ್ಟದಲ್ಲಿ ಜೋಪಡಿಯಲ್ಲಿ ದಿನದೂಡುತ್ತಿದ್ದೇನೆ. ಈ ಸಂದರ್ಭ ತನಗೆ ಮನೆ ನಿರ್ಮಾಣ ಮಾಡಿಕೊಡುವ ನಿರ್ಧಾರವನ್ನು ಸವಣೂರು ಗ್ರಾ.ಪಂ. ಅಧ್ಯಕ್ಷರ ತಂಡದವರು ತಿಳಿಸಿದರು. ಈಗ ಸುಂದರ ಮನೆ ನಿರ್ಮಾಣವಾಗಿದೆ. ಉದ್ಯೋಗ ಖಾತರಿ ಯೋಜನೆಯಿಂದ ಬಾವಿ, ದನದ ಕೊಟ್ಟಿಗೆ, ಅಡಿಕೆ ತೋಟ ನಿರ್ಮಾಣ ಮಾಡಲಾಗಿದೆ. ಎಲ್ಲರಿಗೂ ಧನ್ಯವಾದಗಳು.
 - ಸುಂದರಿ ಫ‌ಲಾನುಭವಿ ಮಹಿಳೆ

Advertisement

Udayavani is now on Telegram. Click here to join our channel and stay updated with the latest news.

Next