Advertisement

ಮಂಗಳೂರಿನಲ್ಲಿ ಆರಂಭವಾಗಲಿದೆ ಕತ್ತೆ ಹಾಲು ಮಾರಾಟ ಡೇರಿ

11:31 PM May 23, 2022 | Team Udayavani |

ಬೆಂಗಳೂರು: ಕರ್ನಾಟಕದ ಮೊತ್ತ ಮೊದಲ ಹಾಗೂ ದೇಶದಲ್ಲೇ ವಿನೂತನವಾದ ಕತ್ತೆ ಹಾಲು ಮಾರಾಟ ಮಾಡುವ ಡೇರಿ ಫಾರ್ಮ್ವೊಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ.
ಆ ಮೂಲಕ, ರಾಜ್ಯದ ರೈತರಿಗೆ ಇನ್ನು ಮುಂದೆ ಕತ್ತೆಗಳ ಸಾಕಣೆ ಹಾಗೂ ಹಾಲು ಉತ್ಪಾದನೆಯನ್ನು ಒಂದು ವಿಶಿಷ್ಟ ಹೈನು ಉದ್ಯಮವಾಗಿ ಪ್ರಾರಂಭಿಸುವ ಅವಕಾಶ ಲಭಿಸಲಿದೆ.

Advertisement

ಶ್ರೇಷ್ಠ ಪೌಷ್ಟಿಕಾಂಶಗಳನ್ನು ಹೊಂದಿರುವ ಕತ್ತೆ ಹಾಲಿಗೆ ಕೊರೊನಾ ಸಾಂಕ್ರಾಮಿಕ ರೋಗ ಬಂದ ಅನಂತರ ಎಲ್ಲಿಲ್ಲದ ಬೇಡಿಕೆ ಬಂದಿದೆ. ಭಾರತದಲ್ಲೇ ಸದ್ಯಕ್ಕೆ ಒಂದು ಲೀಟರ್‌ ಕತ್ತೆ ಹಾಲಿಗೆ ಮಾರುಕಟ್ಟೆಯಲ್ಲಿ 5ರಿಂದ 10 ಸಾವಿರ ರೂ. ಇದೆ. ವಿದೇಶದಲ್ಲಿಯೂ ಒಂದು ಲೀಟರ್‌ ಕತ್ತೆ ಹಾಲು ಬರೋಬ್ಬರಿ 12 ಸಾವಿರ ರೂ.ವರೆಗೆ ಮಾರಾಟವಾಗುತ್ತಿದೆ. ಕತ್ತೆ ಹಾಲಿಗೆ ಬೇಡಿಕೆಯ ಜತೆಗೆ ಚಿನ್ನದಂಥ ಬೆಲೆ ಬಂದಿರುವುದು ಹಾಗೂ ಪ್ರಾಣಿಗಳ ಹಾಲಿನ ಪೈಕಿ ಕತ್ತೆ ಹಾಲು ಸೌಂದರ್ಯ ವರ್ಧಕ ಹಾಗೂ ಅತ್ಯಧಿಕ ಪ್ರೋಟೀನ್‌ ಅಂಶ ಒಳಗೊಂಡಿರುವುದು ನಾನಾ ಸಂಶೋಧನೆಗಳಿಂದ ದೃಢವಾಗುತ್ತಿದ್ದಂತೆ ಕತ್ತೆ ಸಾಕಣೆಯನ್ನೇ ಹೈನುಗಾರಿಕೆ ರೀತಿ ಉದ್ಯಮವಾಗಿ ಬೆಳೆಸುವುದಕ್ಕೆ ವಿಪುಲ ಅವಕಾಶಗಳು ತೆರೆದುಕೊಳ್ಳುತ್ತಿದೆ.

ಕತ್ತೆ ಸಾಕಣೆ ಉತ್ತೇಜನ
ಎರಡು ವರ್ಷಗಳ ಹಿಂದೆ ಅಳಿವಿನ ಅಂಚಿನಲ್ಲಿರುವ ಕತ್ತೆಗಳ ಸಂತತಿ ರಕ್ಷಿಸುವುದಕ್ಕೆ ಕೇಂದ್ರ ಸರಕಾರ ಕೂಡ ಯೋಜನೆ ರೂಪಿಸಿದ್ದು, ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್‌) ಮೂಲಕ ಕತ್ತೆ ಸಾಕಣೆ ಉತ್ತೇಜಿಸಲಾಗುತ್ತಿದೆ. ಗುಜರಾತ್‌ನಲ್ಲಿರುವ “ಹಲಾರಿ’ ಕತ್ತೆ ತಳಿ ಸಂಶೋಧನೆಗೆ ಈಗಾಗಲೇ ಹರಿಯಾಣದ ಹಿಸಾರ್‌ನಲ್ಲಿ ಕೇಂದ್ರ ಸರಕಾರ ಡೇರಿ ಫಾರ್ಮ್ ಸ್ಥಾಪಿಸಿದೆ. ಭವಿಷ್ಯದಲ್ಲಿ ಕತ್ತೆ ಹಾಲಿನ ಬೇಡಿಕೆ ಗಮನದಲ್ಲಿಟ್ಟುಕೊಂಡು ಚೊಚ್ಚಲ ಕತ್ತೆ ಹಾಲು ವಹಿವಾಟಿನ ಡೇರಿ ಸ್ಥಾಪನೆ ಪ್ರಯೋಗಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸಾಕ್ಷಿಯಾಗಲಿದೆ.

ಕತ್ತೆ ಗೊಬ್ಬರಕ್ಕೂ ಬೇಡಿಕೆ
ಕೃಷಿ ಚಟುವಟಿಕೆಗಳಿಗೂ ಕತ್ತೆ ಗೊಬ್ಬರ ಹೆಚ್ಚು ಪರಿಣಾಮಕಾರಿಯಾಗಿರುವ ಕಾರಣ ಒಂದು ಕೆ.ಜಿ. ಗೊಬ್ಬರಕ್ಕೂ 600ರಿಂದ 700 ರೂ. ಇದೆ. ಹಾಲು ಮತ್ತು ಗೊಬ್ಬರ ಲಾಭದ ಲೆಕ್ಕಾಚಾರದಲ್ಲಿ ಕತ್ತೆ ಸಾಕಣೆಯತ್ತ ರೈತರನ್ನು ಪ್ರೋತ್ಸಾಹಿಸುವ ಜತೆಗೆ ಸೂಕ್ತ ತರಬೇತಿ ಕೂಡ ನೀಡಲಾಗುವುದು. ಕತ್ತೆ ಸಾಕುವ ರೈತರು ತಿಂಗಳಿಗೆ 30ರಿಂದ 40 ಸಾವಿರ ರೂ. ಸಂಪಾದನೆ ಮಾಡಬಹುದು. ರೈತರು ಸಾಕುವ ಕತ್ತೆ ಹಾಲು-ಗೊಬ್ಬರ ಖರೀದಿಗೂ ಅವಕಾಶ ಕಲ್ಪಿಸುವುದು ಈ ಡೇರಿ ಫಾರ್ಮ್ ಸ್ಥಾಪನೆ ಮೂಲ ಉದ್ದೇಶ ಎಂದು ಶ್ರೀನಿವಾಸ ಗೌಡರು ಉದಯವಾಣಿ’ಗೆ ತಿಳಿಸಿದ್ದಾರೆ.

2 ಎಕರೆಯಲ್ಲಿ “ಡಾಂಕಿ ಮಿಲ್ಕ್ ಫಾರ್ಮ್’
ಪ್ರಾರಂಭದಲ್ಲಿ ಸುಮಾರು 2 ಎಕರೆ ಯಲ್ಲಿ ಡಾಂಕಿ ಮಿಲ್ಕ್ ಫಾರ್ಮ್ ಮಾಡಲಾ ಗುತ್ತಿದ್ದು, ಗುಜರಾತ್‌ನಿಂದ ಉತ್ತಮ ತಳಿಯ 32 ಕತ್ತೆಗಳನ್ನು ತರಿಸಲಾಗುತ್ತಿದೆ. ಆ ಪೈಕಿ ಏಳು ಕತ್ತೆಗಳನ್ನು ಮರಿ ಉತ್ಪಾದನೆಗೆ ಬಳಸಿಕೊಂಡು ದಕ್ಷಿಣ ಕನ್ನಡ ಸೇರಿ ಕರಾವಳಿ ಭಾಗದ ರೈತರಿಗೆ ಕತ್ತೆ ಸಾಕಣೆಗೆ ಅವಕಾಶ ನೀಡಲಾಗುವುದು. ಸಾಮಾನ್ಯವಾಗಿ ಒಂದು ಕತ್ತೆ ದಿನಕ್ಕೆ ಅರ್ಧ ಲೀಟರ್‌ ಮಾತ್ರ ಹಾಲು ಕೊಡುತ್ತದೆ. ಮುಂದಿನ ತಿಂಗಳು ಕಾರ್ಯಾರಂಭ ಮಾಡುವ ಈ ಡೈರಿಯಲ್ಲಿ ಪ್ರಾರಂಭದಲ್ಲಿ ನಾವು ಪ್ರತೀದಿನ 8 ರಿಂದ 10 ಲೀಟರ್‌ನಷ್ಟು ಹಾಲು ಉತ್ಪಾದಿಸಿ 100 ಮತ್ತು 200 ಮಿ.ಲೀ.ನ ಸಣ್ಣ ಬಾಟಲಿಗಳಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ.

Advertisement

ಬಂಟ್ವಾಳದ ಮಂಚಿಯಲ್ಲಿ ಸ್ಥಾಪನೆ?
ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿರುವ ರಾಮನಗರ ಜಿಲ್ಲೆಯ ಶ್ರೀನಿವಾಸ ಗೌಡ ಅವರು ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಕತ್ತೆ ಹಾಲಿನ ಡೇರಿ ಪ್ರಾರಂಭಿಸುವುದಕ್ಕೆ ತೀರ್ಮಾನಿಸಿದ್ದಾರೆ. ಪ್ರಸ್ತುತ ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಅಬಿಬೇಬಿ ಅವರು 3 ವರ್ಷಗಳ ಹಿಂದೆ ಕತ್ತೆ ಹಾಲಿನ ಉಪ ಉತ್ಪನ್ನಗಳ ಡೇರಿ ಪ್ರಾರಂಭಿಸಿ ಯಶಸ್ಸು ಸಾಧಿಸಿದ್ದಾರೆ. ತಮಿಳುನಾಡಿನಲ್ಲಿಯೂ ಕೆಲವು ಕಡೆ ಕತ್ತೆ ಹಾಲನ್ನು ಸೌಂದರ್ಯ ವರ್ಧಕದಲ್ಲಿ ಬಳಸುವುದಕ್ಕೆ ಮಾರಾಟ ಮಾಡಲಾಗುತ್ತಿದೆ. ಹಲವು ಸಂಶೋಧನೆಗಳ ಪ್ರಕಾರ ಕತ್ತೆ ಹಾಲಿನಲ್ಲಿ ಕೊಬ್ಬಿನಾಂಶ ಕಡಿಮೆಯಿದ್ದು, ಪ್ರೊಟೀನ್‌ ಪ್ರಮಾಣ ಹೇರಳವಾಗಿದೆ.

ಬಹಳ ಅಪರೂಪವೆ ನಿಸಿರುವ ಕತ್ತೆ ಹಾಲಿನ ಬಳಕೆ ಹಾಗೂ ಮಾರುಕಟ್ಟೆಗೆ ಮಂಗಳೂರಿನಲ್ಲಿ ಕತ್ತೆ ಫಾರ್ಮ್ ಸ್ಥಾಪನೆ ಮಾಡುತ್ತಿರುವುದು ವಿನೂತನ ಪ್ರಯತ್ನ. ರೈತರಿಗೆ ಅನುಕೂಲವಾಗುವಂತೆ ಕತ್ತೆ ಹಾಲಿನ ಡೇರಿಯನ್ನು ಪ್ರೋತ್ಸಾಹಿಸುವುದಕ್ಕೆ ಸರಕಾರದ ಕಡೆಯಿಂದ ಎಲ್ಲ ರೀತಿಯ ಉತ್ತೇಜನ ನೀಡಲಾಗುವುದು.
– ಪ್ರಭು ಚವ್ಹಾಣ್‌,
ಪಶು ಸಂಗೋಪನ ಖಾತೆ ಸಚಿವ

– ಸುರೇಶ್‌ ಪುದುವೆಟ್ಟು

 

Advertisement

Udayavani is now on Telegram. Click here to join our channel and stay updated with the latest news.

Next