ಬಂಗಾರಪೇಟೆ: ತಾಲೂಕಿನ ದೋಣಿಮಡಗು ಗ್ರಾಪಂನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಒಂದು ಮತದಿಂದ ಪರಾಭವಗೊಂಡಿದ್ದರಿಂದ ಮರು ಚುನಾವಣೆ ನಡೆಸಲು ಕಾಂಗ್ರೆಸ್ ಬೆಂಬಲಿಗರು ಪಟ್ಟುಹಿಡಿದಿದ್ದರಿಂದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಉದ್ರಿಕ್ತ ವಾತಾವರಣ ಉಂಟಾದ ಘಟನೆ ನಡೆಯಿತು.
ದೋಣಿಮಡಗು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಘೋಷಣೆಗೂ ಮೊದಲೇ ಕಾಂಗ್ರೆಸ್ ನಾಯಕರು ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿ ಎಲ್ಲರ ಗಮನ ಸೆಳೆದಿದ್ದರು. ಇಲ್ಲಿಯೂ ಕಳೆದ ಬಾರಿ ಕಾಂಗ್ರೆಸ್ ವಶದಲ್ಲಿದ್ದ ಗ್ರಾಪಂನ್ನು ಬಿಜೆಪಿ ವಶ ಮಾಡಿಕೊಳ್ಳಲು ಮಾಜಿ ಶಾಸಕ ವೆಂಕಟಮುನಿಯಪ್ಪ ಮತ್ತು ಜಿಪಂ ಸದಸ್ಯ ಬಿ.ವಿ.ಮಹೇಶ್ ಕಾರ್ಯತಂತ್ರ ರೂಪಿಸಿದ್ದರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಬಿಜೆಪಿ ಬೆಂಬಲಿಗರಾಗಿ ಮಂಜುಳಾ ಮಹಾದೇವ್ ಮತ್ತು ಕಾಂಗ್ರೆಸ್ ಬೆಂಬಲಿತರಾಗಿ ಮಂಜುಳಾ ಜಯಣ್ಣ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಪ್ರಿಯ ಮತ್ತು ವೆಂಕಟಲಕ್ಷ್ಮಮ್ಮ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಒಂದು ಮತದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಮಂಜುಳಾ ಆಯ್ಕೆಯಾಗಿದ್ದರೂ ಕಾಂಗ್ರೆಸ್ ಮುಖಂಡರು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮೊದಲು ಮರು ಮತಗಳ ಎಣಿಕೆಗೆ ಆಗ್ರಹಿಸಿದರು. ಅದರಂತೆ ಮರು ಎಣಿಕೆ ಮಾಡಿದಾಗ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಇದಕ್ಕೆ ಒಪ್ಪದ ಕಾಂಗ್ರೆಸ್ ಮುಖಂಡರು ಅಸಲಿಗೆ ಚುನಾವಣೆ ಸರಿಯಾಗಿ ನಡೆದಿಲ್ಲ. ಮರು ಚುನಾವಣೆ ನಡೆಸಬೇಕೆಂದು ಪಟ್ಟುಹಿಡಿದು ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದರು.
ಇದನ್ನೂ ಓದಿ :ಹಳೇ ವೈಷಮ್ಯ: ತಡರಾತ್ರಿ ಜೋಡಿ ಕೊಲೆ
ಇದಕ್ಕೆ ಪ್ರತಿರೋಧವಾಗಿ ಬಿಜೆಪಿ ಬೆಂಬಲಿತರು ಚುನಾವಣೆ ಸಕ್ರಮವಾಗಿಯೇ ನಡೆದಿದೆ ಸದಸ್ಯರು ತಮ್ಮ ಪರವಾಗಿ ತೀರ್ಪನ್ನು ನೀಡಿದ್ದಾರೆ ಅದನ್ನು ಅಂಗೀಕರಿಸಿ ಘೋಷಣೆ ಮಾಡಬೇಕೆಂದು ಚುನಾವಣೆ ಅಧಿಕಾರಿಯಾಗಿದ್ದ ಬಿಇಒ ಬಿ.ಪಿ.ಕೆಂಪಯ್ಯ ಮೇಲೆ ಒತ್ತಡ ಹೇರಿದಾಗ ಮಾತಿನ ಚಕಮಕಿ ನಡೆದಿದ್ದರಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು. ಕೊನೆಗೆ ಚುನಾವಣಾಧಿಕಾರಿ ಬಿ.ಪಿ.ಕೆಂಪಯ್ಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಂಜುಳಾ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವೆಂಕಟಲಕ್ಷ್ಮಮ್ಮ ಆಯ್ಕೆಯನ್ನು ಘೋಷಣೆ ಮಾಡಿ ಗೊಂದಲಗಳಿಗೆ ತೆರೆ ಎಳೆದರು.