ಮಂಗಳೂರು: ವೈಕುಂಠ ಏಕಾದಶಿ ದಿನದ ಅಂಗವಾಗಿ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ನಾಮತ್ರಯ ಮಹಾಮಂತ್ರ ಜಪಯಜ್ಞ ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಈ ಬಾರಿ ತಿರುಪತಿ ಮಾದರಿಯಲ್ಲೇ ಪುಷ್ಪಯಾಗ ನೆರವೇರಿದೆ.
ಪ್ರಾತಃಕಾಲ ಸುಪ್ರಭಾತ ಸೇವೆ, ಸಾಮೂಹಿಕ ಪ್ರಾರ್ಥನೆ, ಅಷ್ಟಾಕ್ಷರಿ ಮಂತ್ರ ಜಪ, ಪ್ರಾತಃಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಬಳಿಕ ನಾಮತ್ರಯ ಮಹಾಮಂತ್ರ ಜಪಯಜ್ಞ, ಮಧ್ಯಾಹ್ನ ಮಹಾಪೂಜೆ, ಭಜನ ಕಾರ್ಯಕ್ರಮ ನಡೆಯಿತು. ಸಂಜೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಿತು. ರಾತ್ರಿ ದೀಪಾರಾಧನೆ, ಮಹಾಪೂಜೆ, ವಿಠೊಬ ಸನ್ನಿಧಿಯಲ್ಲಿ ಪೂಜೆ, ಪ್ರಸಾದ ವಿತರಣೆ ನಡೆಯಿತು.
ಪುಷ್ಪಯಾಗದಲ್ಲಿ ಮೂರ್ತಿಗೆ ವಿವಿಧ ಹೂಗಳಿಂದ ಅರ್ಚಿಸಲಾಯಿತು. ಇದಕ್ಕಾಗಿ 200 ಬುಟ್ಟಿಗೂ ಅಧಿಕ ಹೂಗಳ ವ್ಯವಸ್ಥೆ ಮಾಡಲಾಗಿತ್ತು. ಏಕಾದಶಿ ಪ್ರಯುಕ್ತ ಭಕ್ತರು ವೆಂಕಟೇಶ್ವರ ದೇವರ ದರ್ಶನ ಪಡೆದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ವಿ. ಪ. ಸದಸ್ಯ ಪ್ರತಾಪಸಿಂಹ ನಾಯಕ್, ಮೇಯರ್ ಜಯಾನಂದ ಅಂಚನ್, ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಕ್ಷೇತ್ರದ ತಂತ್ರಿಗಳಾದ ಸತ್ಯಕೃಷ್ಣ ಭಟ್, ಜಯರಾಮ ಭಟ್, ಪ್ರಧಾನ ಅರ್ಚಕರಾದ ನಿರಂಜನ್ ಭಟ್, ದೇವಸ್ಥಾನದ ಆಡಳಿತ ಮೊಕ್ತೇಸರ ವರದರಾಯ್ ನಾಗ್ವೇಕರ್, ಸಹ ಮೊಕ್ತೇಸರರಾದ ವಿನಾಯಕ ಶೇಟ್, ಗೋಪಿಚಂದ್ ಶೇಟ್, ಆರ್ಥಿಕ ಅಭಿವೃದ್ಧಿ ಸಲಹಾ ಸಮಿತಿ ಅಧ್ಯಕ್ಷ ಗಣೇಶ್ ನಾಗ್ವೇಕರ್, ಮಾಜಿ ಮೊಕ್ತೇಸರ ಮನೋಜ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಕರಾವಳಿಯ ವಿವಿಧೆಡೆ ವೈಕುಂಠ ಏಕಾದಶಿ
ಮಂಗಳೂರು/ಉಡುಪಿ: ವೈಕುಂಠ ಏಕಾದಶಿ ಪ್ರಯುಕ್ತ ಸೋಮವಾರ ಕರಾವಳಿಯ ವಿವಿಧ ವೆಂಕಟರಮಣ ದೇಗುಲಗಳಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜೆಗಳು ಜರಗಿದವು.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಬಂಟ್ವಾಳ ಸಹಿತ ವಿವಿಧ ದೇಗುಲಗಳಲ್ಲಿ ಮತ್ತು ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನ ಸಹಿತವಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಂಪನ್ನಗೊಂಡಿತು.
ದೇವಸ್ಥಾನ, ಮಠಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆ, ಧಾರ್ಮಿಕ ಕಾರ್ಯಗಳ ಜತೆಗೆ ನಿರಂತರ ಭಜನೆ, ಸಂಕೀರ್ತನೆ, ಮಹಾಪೂಜೆಗಳು ನೆರವೇರಿದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇಗುಲಗಳಿಗೆ ಭೇಟಿ ನೀಡಿದರು.