Advertisement

ಡಾನ್‌ಬಾಸ್‌ಗೆ ರಷ್ಯಾ ಬಾಸ್‌!

12:48 AM Feb 23, 2022 | Team Udayavani |

ತೀರಾ ಹತ್ತಿರದಲ್ಲೇ ಯುದ್ಧವೊಂದು ಸಂಭವಿಸಲಿಕ್ಕಿದೆ..! ಹೌದು, ಉಕ್ರೇನ್‌ ದೇಶದ ವ್ಯಾಪ್ತಿಯಲ್ಲಿರುವ ಎರಡು ಪ್ರದೇಶಗಳನ್ನು ರಷ್ಯಾ ಸ್ವತಂತ್ರ ಪ್ರದೇಶಗಳೆಂದು ಘೋಷಿಸಿದೆ. 2014ರಿಂದಲೂ ಈ ಎರಡು ಪ್ರದೇಶಗಳಲ್ಲಿನ ಹೋರಾಟಗಾರರು, ಉಕ್ರೇನ್‌ ವಿರುದ್ಧ ಹೋರಾಟ ನಡೆಸಿದ್ದು, ಇವುಗಳನ್ನು ಸ್ವತಂತ್ರ ದೇಶಗಳೆಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಹೋರಾಟಗಾರರಿಗೆ ರಷ್ಯಾದ ಪರಿಪೂರ್ಣ ಬೆಂಬಲವೂ ಇದೆ. ಹೀಗಾಗಿಯೇ ಮಂಗಳವಾರ ರಷ್ಯಾ ಅಧ್ಯಕ್ಷ ಪುತಿನ್‌ ಇವುಗಳಿಗೆ ಸ್ವತಂತ್ರ ಸ್ಥಾನಮಾನ ನೀಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದಕ್ಕೂ ಕಾರಣವಾಗಿದೆ.

Advertisement

ಏನಿದು ಡಾನ್‌ಬಾಸ್‌?
ಉಕ್ರೇನ್‌ನಲ್ಲಿರುವ ಕೈಗಾರಿಕೆಗಳಿಗೆ ಜಾಗ ನೀಡಿರುವ ಎರಡು ಪ್ರದೇಶಗಳನ್ನು ಸೇರಿ ಡಾನ್‌ಬಾಸ್‌ ಎಂದು ಕರೆಯಲಾಗುತ್ತದೆ. ಅಂದರೆ ದೊನೆಸ್ಕ್ ಮತ್ತು ಲುಹಾನ್ಸ್ಕ್ ನ ಪ್ರದೇಶಗಳನ್ನು ಒಟ್ಟಾಗಿ ಈ ರೀತಿ ಕರೆಯಲಾಗಿದೆ. 2014ರ ವರೆಗೂ ಈ ಎರಡೂ ಪ್ರದೇಶಗಳು ಉಕ್ರೇನ್‌ನ ವಶದಲ್ಲೇ ಇದ್ದವು. ಆದರೆ 2014ರಲ್ಲಿ ಪ್ರತ್ಯೇಕತಾವಾದಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ.

ಅಪಾರ ಸಾವು ನೋವು
ಈ ಡಾನ್‌ಬಾಸ್‌ ಪ್ರದೇಶದಲ್ಲಿ ಉಕ್ರೇನ್‌ ಸೇನೆ ಮತ್ತು ಪ್ರತ್ಯೇಕತಾವಾದಿಗಳ ನಡುವೆ 2014ರಿಂದಲೂ ದೊಡ್ಡ ಮಟ್ಟದ ಜಗಳ ನಡೆಯುತ್ತಲೇ ಇದೆ. ಇದುವರೆಗೆ ಸುಮಾರು 14 ಸಾವಿರ ಮಂದಿ ಈ ಘರ್ಷಣೆಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

ಪ್ರತ್ಯೇಕತಾವಾದಿಗಳ ವಶದಲ್ಲಿ ಡಾನ್‌ಬಾಸ್‌
2014ರಲ್ಲೇ ಈ ಪ್ರದೇಶಗಳ ಮೇಲೆ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಹಿಡಿತ ಸಾಧಿಸಿದ್ದಾರೆ. ಇಲ್ಲಿನ ಎಲ್ಲ ಸರಕಾರಿ ಕಚೇರಿಗಳೂ ಪ್ರತ್ಯೇಕತಾವಾದಿಗಳ ವಶದಲ್ಲೇ ಇವೆ. ಈ ಪ್ರತ್ಯೇಕತಾವಾದಿಗಳಿಗೆ ರಷ್ಯಾ ನೇರವಾಗಿಯೇ ಎಲ್ಲ ರೀತಿಯ ಬೆಂಬಲ ನೀಡಿದೆ. ಅಂದರೆ ಶಸ್ತ್ರಾಸ್ತ್ರಗಳಿಂದ ಹಿಡಿದು, ಹಣದ ಸಹಾಯದ ವರೆಗೆ ಎಲ್ಲವನ್ನೂ ನೀಡಿದೆ. ಜತೆಗೆ ಉಕ್ರೇನ್‌ ವಿರುದ್ಧ ಇವರನ್ನು ಎತ್ತಿಕಟ್ಟುವಲ್ಲಿಯೂ ತನ್ನದೇ ಆದ ಪಾತ್ರ ವಹಿಸುತ್ತಿದೆ.

ಈಗ ಏಕೆ ಘೋಷಣೆ?
ಉಕ್ರೇನ್‌ ದೇಶವು ಅಮೆರಿಕ ನೇತೃತ್ವದ ನ್ಯಾಟೋ ಗುಂಪಿಗೆ ಸೇರಬಾರದು ಎಂಬುದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರ ನಿಲುವು. ಆದರೆ ಉಕ್ರೇನ್‌ ಸ್ವತಂತ್ರ ದೇಶವಾಗಿರುವುದರಿಂದ ನ್ಯಾಟೋಗೆ ಸೇರಲು ಎಲ್ಲ ಅರ್ಹತೆ ಹೊಂದಿದೆ ಎಂದು ಅಮೆರಿಕ ಸೇರಿದಂತೆ ಐರೋಪ್ಯ ದೇಶಗಳು ಹೇಳುತ್ತಿವೆ. ಇದನ್ನು ಕೇಳಲು ರಷ್ಯಾ ತಯಾರಿಲ್ಲ. ಏಕೆಂದರೆ ಒಂದು ವೇಳೆ ಉಕ್ರೇನ್‌ಗೆ ನ್ಯಾಟೋ ಪಡೆಗಳು ಬಂದರೆ ತನ್ನ ಒಡಲಿಗೆ ಬೆಂಕಿ ಸುರಿದುಕೊಂಡಂತೆ ಎಂದು ರಷ್ಯಾ ವಾದ.

Advertisement

ಎರಡು ಬಾರಿ ಸಂಧಾನ
ಈ ಎರಡು ಪ್ರದೇಶಗಳ ಸಂಬಂಧ ವಿವಾದ ಬಗೆಹರಿಸಲು ಈಗಾಗಲೇ ಎರಡು ಬಾರಿ ಸಂಧಾನ ಸಭೆ ನಡೆದಿದೆ. ಫ್ರಾನ್ಸ್‌ ಮತ್ತು ಜರ್ಮನಿ ದೇಶಗಳು ಇದಕ್ಕೆ ಮಧ್ಯಸ್ಥಿಕೆ ವಹಿಸಿದ್ದವು. ಆಗಲೇ ಎರಡು ಬಾರಿ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ರಷ್ಯಾ, ಉಕ್ರೇನ್‌ ಮತ್ತು ಪ್ರತ್ಯೇಕತಾವಾದಿಗಳು ಈ ಒಪ್ಪಂದಗಳಿಗೆ ಸಹಿ ಹಾಕಿದ್ದವು.2014ರಲ್ಲಿ ಮಿನಿಸ್ಕ್ -1 ಒಪ್ಪಂದದಲ್ಲಿ ಪ್ರತ್ಯೇಕತಾವಾದಿಗಳು 12 ಅಂಶಗಳ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದರು. ಆದರೆ ಕದನಕ್ಕೆ ವಿರಾಮ ಸಿಗಲೇ ಇಲ್ಲ. 2015ರಲ್ಲಿ ಮಿನಿಸ್ಕ್ -2 ಒಪ್ಪಂದವಾಗಿದ್ದು, ಆಗ 13 ಅಂಶಗಳ ಕದನ ವಿರಾಮಕ್ಕೆ ಸಹಿ ಹಾಕಿದ್ದವು.ಆಗ ರಷ್ಯಾ ಉಕ್ರೇನ್‌ಗೆ ಈ ಪ್ರದೇಶಗಳ ಗಡಿಯನ್ನು ಬಿಡಲು ಒಪ್ಪಿಕೊಂಡಿತ್ತು.

ಹೇಗಿದೆ ಈ ಪ್ರದೇಶಗಳು?
ದೊನೆಸ್ಕ್, ಲುಹಾನ್ಸ್ಕ್ ಪ್ರದೇಶಗಳು ಉಕ್ರೇನ್‌ ಒಳಗಿದ್ದರೂ ಶೇ.70ರಷ್ಟು ಮಂದಿ ರಷಿಯನ್‌ ಭಾಷೆಯನ್ನೇ ಮಾತನಾಡುತ್ತಾರೆ. ಹೀಗಾಗಿಯೇ 2014ರಲ್ಲಿ ಪ್ರತ್ಯೇಕತಾವಾದಿಗಳು ಜನಾಭಿಪ್ರಾಯ ಸಂಗ್ರಹಿಸಿ, ಇವುಗಳನ್ನು ಸ್ವತಂತ್ರವೆಂದು ಘೋಷಿಸಿದ್ದವು. ಉಕ್ರೇನ್‌ ಇದನ್ನು ಒಪ್ಪಿಕೊಂಡಿರಲಿಲ್ಲ. ಹೀಗಾಗಿ 2014ರಿಂದಲೂ ಈ ಪ್ರದೇಶದಲ್ಲಿ ದಿನನಿತ್ಯವೂ ಶೆಲ್‌ ದಾಳಿ, ಬಾಂಬ್‌ ದಾಳಿ ನಡೆಯುತ್ತಲೇ ಇದೆ. ಅದರಲ್ಲೂ ಕಳೆದ ಅಕ್ಟೋಬರ್‌ನಲ್ಲಿ ಉಕ್ರೇನ್‌ ಗಡಿಗೆ ರಷ್ಯಾ ಸೇನೆ ತಂದು ನಿಲ್ಲಿಸಿದ ಮೇಲೆ ಮತ್ತಷ್ಟು ಹೆಚ್ಚಾಗಿದೆ.

ರಷ್ಯಾಕ್ಕೆ ಆಗುವ ನಷ್ಟವೇನು?
ಸದ್ಯದ ಪರಿಸ್ಥಿತಿಯಲ್ಲಿ ರಷ್ಯಾದ ನಡೆ ಅತ್ಯಂತ ಅಪಾಯಕಾರಿ ಎಂದೇ ಹೇಳಬಹುದು. ದೊನೆಸ್ಕ್, ಲುಹಾನ್ಸ್ಕ್ ಪ್ರದೇಶಗಳನ್ನು ಸ್ವತಂತ್ರ ಎಂದು ರಷ್ಯಾ ಘೋಷಣೆ ಮಾಡಿರುವುದೇ ತಪ್ಪು. ಹೀಗಾಗಿ ಇನ್ನು ಮುಂದೆ ಅಮೆರಿಕ ಸೇರಿದಂತೆ ಮುಂದುವರಿದ ದೇಶಗಳು ರಷ್ಯಾ ಮೇಲೆ ಕಠಿನ ದಿಗ್ಬಂಧನ ಹೇರುತ್ತವೆ. ಅಲ್ಲದೆ ಚೀನ ಬಿಟ್ಟರೆ, ಉಳಿದವರ ಕಡೆಯಿಂದ ರಷ್ಯಾಗೆ ಬೆಂಬಲ ಸಿಗುವುದು ಕಷ್ಟ. ಹಾಗೆಯೇ ಸಮರಾಂಗಣದಲ್ಲಿ ಅಮೆರಿಕ ಮತ್ತು ಐರೋಪ್ಯ ದೇಶಗಳನ್ನು ಎದುರಿಸುವ ಅನಿವಾರ್ಯತೆಯೂ ಎದುರಾಗುತ್ತದೆ.

ಭಾರತದ ಮೇಲೆ ಯಾವ ಪರಿಣಾಮ?
ರಷ್ಯಾ ಮತ್ತು ಪಾಶ್ಚಾತ್ಯ ದೇಶಗಳ ನಡುವೆ ಯುದ್ಧವಾದರೂ, ಭಾರತ ಇದರಲ್ಲಿ ನೇರವಾಗುವ ಸಾಧ್ಯತೆಗಳು ತೀರಾ ಕಡಿಮೆ. ಮೊದಲಿನಿಂದಲೂ ಭಾರತ, ಯಾವುದೇ ದೇಶದ ಯುದ್ಧಗಳಲ್ಲಿ ನೇರವಾಗಿ ಒಂದು ಪಕ್ಷದ ಪರ ವಹಿಸಿ ಹೋಗಿಲ್ಲ. ಈಗಲೂ ಯಾರ ಪರವೂ ನಿಲ್ಲುವುದಿಲ್ಲವೆಂದೇ ಭಾರತ ಹೇಳುತ್ತಿದೆ. ಆದರೆ ಭಾರತ ಉಕ್ರೇನ್‌ ಜತೆ ಹಲವಾರು ವ್ಯಾಪಾರ-ವಾಣಿಜ್ಯ ಸಂಬಂಧಗಳನ್ನು ಹೊಂದಿದೆ. ಸದ್ಯ ಸೂರ್ಯಕಾಂತಿ ಎಣ್ಣೆ ಹೆಚ್ಚಾಗಿ ಆಮದಾಗುವುದು ಉಕ್ರೇನ್‌ನಿಂದಲೇ.  ಇದು ತಪ್ಪಬಹುದು. ಜತೆಗೆ ಇನ್‌ಅರ್ಗಾನಿಕ್‌ ಕೆಮಿಕಲ್ಸ್‌, ಕಬ್ಬಿಣ ಮತ್ತು ಉಕ್ಕು, ಪ್ಲಾಸ್ಟಿಕ್‌, ಕೆಮಿಕಲ್ಸ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಸದ್ಯ ಈ ಎರಡು ದೇಶಗಳ ನಡುವೆ ವಾರ್ಷಿಕ 2.52 ಬಿಲಿಯನ್‌ ಡಾಲರ್‌ ವ್ಯಾಪಾರ ವಹಿವಾಟು ಆಗುತ್ತಿದೆ. ಅಷ್ಟೇ ಅಲ್ಲ, ಇತ್ತೀಚಿನ ವರ್ಷಗಳಲ್ಲಿ ಭಾರತದಿಂದ ಉಕ್ರೇನ್‌ಗೆ ರಫ್ತಾಗುತ್ತಿರುವ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಅಂದರೆ 2019-20ರಲ್ಲಿ ಭಾರತದಿಂದ 259 ಮಿಲಿಯನ್‌ ಡಾಲರ್‌ ಮೌಲ್ಯದ ವಸ್ತುಗಳು ರಫ್ತಾಗಿವೆ.

ಸ್ವತಂತ್ರವೆಂದು ಘೋಷಿಸಿದ ಮೇಲೆ ಪರಿಣಾಮವೇನು?
ದೊನೆಸ್ಕ್, ಲುಹಾನ್ಸ್ಕ್ ಪ್ರದೇಶಗಳನ್ನು ರಷ್ಯಾ ಸ್ವತಂತ್ರವೆಂದು ಘೋಷಿಸಿದ್ದು, ಇನ್ನು ಮುಂದೆ ಮುಕ್ತವಾಗಿಯೇ ತನ್ನ ಸೇನೆಯನ್ನು ಈ ಪ್ರದೇಶಗಳಿಗೆ ಕಳುಹಿಸಬಹುದು. ಅಲ್ಲದೇ ಉಕ್ರೇನ್‌ನಿಂದ ಈ ಭಾಗದ ಜನರನ್ನು ರಕ್ಷಣೆ ಮಾಡುವ ಸಂಬಂಧವೇ ನಾವು ಇಲ್ಲಿಗೆ ಬಂದಿದ್ದೇವೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಾದಿಸಬಹುದು. ಜತೆಗೆ ಉಕ್ರೇನ್‌ ಭಾಗದಲ್ಲಿರುವ ಈ ಪ್ರದೇಶಗಳಲ್ಲಿ ರಷ್ಯಾ ಸೇನೆ ಕಾಲಿಟ್ಟರೆ, ಯುದ್ಧ ಖಚಿತ ಎಂದು ಅಂತಾರಾಷ್ಟ್ರೀಯ ರಕ್ಷಣ ತಜ್ಞರು ಹೇಳಿದ್ದಾರೆ.

ಷೇರುಪೇಟೆ ಮೇಲೆ ಗಂಭೀರ ಪರಿಣಾಮ
ರಷ್ಯಾ-ಉಕ್ರೇನ್‌ ನಡುವಿನ ಯುದ್ಧಭೀತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಬಹುತೇಕ ಎಲ್ಲ ಷೇರು ಮಾರುಕಟ್ಟೆಗಳು ಕುಸಿತ ಕಂಡಿವೆ. ಭಾರತವೂ ಇದಕ್ಕೆ ಹೊರತಲ್ಲ. ಫೆ.16ರಿಂದ ಇಲ್ಲಿವರೆಗೆ ನಮ್ಮ ದೇಶದ ಹೂಡಿಕೆದಾರರ 9.1 ಲಕ್ಷ ಕೋಟಿ ರೂ. ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆಯೂ ಪ್ರತೀ ಬ್ಯಾರೆಲ್‌ಗೆ 100 ಡಾಲರ್‌ಗಳ ಹತ್ತಿರಕ್ಕೆ ಬಂದಿದೆ. ಮಂಗಳವಾರ ಕಚ್ಚಾತೈಲದ ಬೆಲೆ 97 ಡಾಲರ್‌ಗಳಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next