Advertisement

ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹ

10:29 AM Aug 19, 2018 | Team Udayavani |

ಕಲಬುರಗಿ: ಭೀಕರ ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆ ಮತ್ತು ನೆರೆ ರಾಜ್ಯ ಕೇರಳದ ಸಂತ್ರಸ್ತ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಸೋಷಲಿಸ್ಟ್‌ ಯೂನಿಟ್‌ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ಜಿಲ್ಲಾ ಘಟಕ ನಗರದಲ್ಲಿ ಶನಿವಾರ ಸಾರ್ವಜನಿಕರಿಂದ ದೇಣಿಗೆ ಹಾಗೂ ಅಗತ್ಯ ವಸ್ತುಗಳನ್ನು ಸಂಗ್ರಹಿಸಿತು.

Advertisement

ನಗರದ ಕೇಂದ್ರ ಬಸ್‌ ನಿಲ್ದಾಣ, ಸೂಪರ್‌ ಮಾರ್ಕೆಟ್‌, ಗಂಜ್‌ ಏರಿಯಾ, ಚಾಚಾ ಚೌಕ್‌ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿ ನಾಗರಿಕರಿಂದ ಪರಿಹಾರ ನಿಧಿ, ಹೊಸ ಬಟ್ಟೆ, ಔಷಧಿ ಹಾಗೂ ಇತರ ಅಗತ್ಯ ವಸ್ತುಗಳನ್ನು ಎಸ್‌ಯುಸಿಐ (ಸಿ) ಸದಸ್ಯರು ಸಂಗ್ರಹಿಸಿದರು. ಕೇರಳದಲ್ಲಿ ಭಾರಿ ಮಳೆಯಿಂದಾಗಿ 14 ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಜಲಪ್ರಳಯಕ್ಕೆ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಕೊಡಗು ಜಿಲ್ಲೆಯಲ್ಲೂ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮನೆ-ಮಠ ಕಳೆದುಕೊಂಡು ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ನಗರದ ಜನತೆ ಮುಂದೆ ಬಂದು ನೊಂದವರಿಗೆ ದೇಣಿಕೆ ನೀಡುವ ಮೂಲಕ ಸಹಾಯಹಸ್ತ ಚಾಚಬೇಕು.
ನೀವು ಕೊಟ್ಟ ಹಣ ಮತ್ತು ಸಾಮಗ್ರಿಗಳನ್ನು ಸಂತ್ರಸ್ತರಿಗೆ ನಾವು ತಲುಪಿಸುತ್ತಿವೆ ಎಂದು ಎಸ್‌ಯುಸಿಐ (ಸಿ) ಪದಾಧಿಕಾರಿಗಳು ಮನವಿ ಮಾಡಿಕೊಂಡರು.
 
ಜಿಲ್ಲಾ ಕಾರ್ಯದರ್ಶಿ ವಿ.ಜಿ. ದೇಸಾಯಿ, ಸದಸ್ಯರಾದ ಎಸ್‌.ಎಂ. ಶರ್ಮಾ, ಮಹೇಶ ನಾಡಗೌಡ, ನಿಂಗಣ್ಣ ಎಸ್‌. ಜಂಬಗಿ, ಜಗನ್ನಾಥ ಎಸ್‌.ಎಚ್‌., ಮಹೇಶ ಎಸ್‌.ಬಿ., ಗೌರಮ್ಮ ಸಿ.ಕೆ., ಸ್ನೇಹಾ ಕಟ್ಟಿಮನಿ ಹಾಗೂ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next