ಬಾಗಲಕೋಟೆ: ನವನಗರದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಕಾಂಗ್ರೆಸ್ ಭವನ ಪೂರ್ಣಕ್ಕಾಗಿ ಪಕ್ಷದ ಜಿಲ್ಲಾ ಅಧ್ಯಕ್ಷಎಸ್.ಜಿ. ನಂಜಯ್ಯನಮಠ ಅವರು ಕಾರ್ಯಕರ್ತರು, ಪಕ್ಷದ ಅಭಿಮಾನಿಗಳಿಂದ ದೇಣಿಗೆ ಸಂಗ್ರಹಕ್ಕೆ ಜೋಳಿಗೆ ಹಾಕಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು, ಸಾವಿರಾರು ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಇದ್ದಾರೆ. ಮುಖ್ಯವಾಗಿ ಪ್ರತಿಯೊಬ್ಬ ಕಾರ್ಯಕರ್ತ, ಅಭಿಮಾನಿಯಿಂದ ಕನಿಷ್ಠ ಒಂದು ರೂಪಾಯಿ ಹಣವಾದರೂ ಕಾಂಗ್ರೆಸ್ ಭವನದ ಕಟ್ಟಡಕ್ಕೆ ಪಡೆಯಬೇಕು. ಆ ಮೂಲಕ ಪ್ರತಿಯೊಬ್ಬರ ಮನಸ್ಸಿನಲ್ಲಿ ಕಾಂಗ್ರೆಸ್ ಪಕ್ಷ, ಜಿಲ್ಲಾ ಕಚೇರಿನಮ್ಮದು ಎಂಬ ಭಾವನೆ ಅವರಲ್ಲಿ ಬರಬೇಕು ಎಂಬುದು ಜಿಲ್ಲಾಧ್ಯಕ್ಷರ ಆಶಯ. ಹೀಗಾಗಿ ಜೋಳಿಗೆ ಹಾಕಿ ದೇಣಿಗೆ ಪಡೆಯಲು ಸಿದ್ಧರಾಗಿದ್ದಾರೆ.
ಹಲವರ ದೇಣಿಗೆ: ನೂತನ ಕಟ್ಟಡದಲ್ಲಿ ಬಾಗಲಕೋಟೆ ಗ್ರಾಮೀಣ ಮತ್ತು ನಗರ ಹಾಗೂ ಜಿಲ್ಲಾ ಕಾರ್ಯಲಯ, ಒಂದು ದೊಡ್ಡದಾದ ಸಭಾಭವನ ನಿರ್ಮಾಣವಾಗಲಿದೆ. ಪಂಚತಾರಾ ಹೊಟೇಲ್ ಸಂಸ್ಕೃತಿಗೆ ಬ್ರೇಕ್ ಹಾಕಿ, ಕೆಪಿಸಿಸಿಯಿಂದ ಯಾರೇ ಬಂದರೂ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲೇ ವಾಸ್ತವ್ಯ ಮಾಡಬೇಕು ಎಂಬುದು ನಂಜಯ್ಯನಮಠ ಅವರ ಅಭಿಲಾಷೆ. ಆ ನಿಟ್ಟಿನಲ್ಲಿ ವಿಐಪಿ ಕೊಠಡಿ ಕೂಡ ನಿರ್ಮಿಸಲಾಗುತ್ತಿದೆ. ಅಂದಾಜು 45 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಅತಿಥಿಗೃಹ ನಿರ್ಮಾಣಕ್ಕೆ ಜಿಲ್ಲೆಯ ಪಕ್ಷದ ಯಾವುದೇ ನಾಯಕರು ದೇಣಿಗೆ ನೀಡಲು ಮುಂದೆ ಬಂದರೆ ಅವರು ಸೂಚಿಸುವ ಅವರ
ಮನೆತನದವರ ಹೆಸರಿನಡಿ ನಿರ್ಮಾಣ ಮಾಡಲಾಗುವುದು. ಈಗಾಗಲೇ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲರು 5 ಲಕ್ಷ ರೂ., ಮಾಜಿ ಸಚಿವೆ ಉಮಾಶ್ರೀ ಹಾಗೂ ತೇರದಾಳ ಭಾಗದ ಪ್ರಮುಖರು, ಕಾರ್ಯಕರ್ತರು ಕೂಡಿ 3.5 ಲಕ್ಷ ರೂ., ಜಮಖಂಡಿ ಶಾಸಕ ಆನಂದ ನ್ಯಾಮಗೌಡರು ಕಾರ್ಯಕರ್ತರು ಸೇರಿ 1 ಲಕ್ಷ ರೂ. ಹಾಗೂ 500 ಚೀಲ ಸಿಮೆಂಟ್ ಸಹ ನೀಡಿದ್ದಾರೆ. ಮಾಜಿ ಸಚಿವ-ವಿಧಾನಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ 600 ಚೀಲ ಸಿಮೆಂಟ್ ಕೊಡಿಸಿದ್ದಾರೆ.
ಜೋಳಿಗೆ ಸಂಪ್ರದಾಯ ಹೊಸದಲ್ಲ: ಜೋಳಿಗೆಹಾಕಿ ಶಾಲೆ, ಪಕ್ಷದ ಕಟ್ಟಡಗಳು ಸಹಿತ ಹಲವು ಸಾಮಾಜಿಕ, ರಾಜಕೀಯ, ಶೈಕ್ಷಣಿಕಕಾರ್ಯಕ್ರಮ ನಡೆಸಿರುವದು ಜಿಲ್ಲೆಗೆಹೊಸದೇನಲ್ಲ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮೂಲತಃ ಜಂಗಮ ಸಮಾಜದವರಾಗಿದ್ದು, ಅವರಿಗೂ ಜೋಳಿಗೆ ಹಾಕುವ ಸಂಪ್ರದಾಯ ಹೊಸದಲ್ಲ. ಹೀಗಾಗಿ ಜಿಲ್ಲೆಯಾದ್ಯಂತ ಇರುವಪಕ್ಷದ ಪ್ರತಿ ಕಾರ್ಯಕರ್ತ, ಪಕ್ಷದ ಅಭಿಮಾನಿಯಿಂದ ಕನಿಷ್ಠ ದೇಣಿಗೆ ಪಡೆಯಬೇಕು.
ಅದಕ್ಕಾಗಿ ಜೋಳಿಗೆ ಹಾಕಿ, ನಗರ, ಪಟ್ಟಣ ಹಾಗೂ ಗ್ರಾಮ ಮಟ್ಟದ ಪ್ರಮುಖ ಸ್ಥಳಕ್ಕೆ ತೆರಳಲು ನಿರ್ಧರಿಸಿದ್ದಾರೆ. ಈ ಕಾರ್ಯಕ್ಕೆ ನ. 21ರಂದು ನಂಜಯ್ಯನಮಠ ಅವರಹುಟ್ಟೂರು, ಹುನಗುಂದ ತಾಲೂಕಿನ ಸೂಳೇಭಾವಿಯಿಂದಲೇ ಚಾಲನೆ ನೀಡಲಿದ್ದಾರೆ.
ನನ್ನ ಗ್ರಾಮದಿಂದ ಈ ಜೋಳಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡುವೆ. ಕಾಂಗ್ರೆಸ್ ಭವನ ಕಟ್ಟಡ ಸಹಾಯಕ್ಕಾಗಿಯೇ ವಿಶೇಷ ಜೋಳಿಗೆ ತಯಾರಿಸಲಾಗಿದೆ. ಪಕ್ಷದ ದೊಡ್ ನಾಯಕರು, ಉದ್ಯಮಿಗಳಿಂದ ಹಣ ಪಡೆಯಬಹುದು. ಆದರೆ, ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತರ ಬಳಿಗೆ ಹೋಗಿ, ಕನಿಷ್ಠ 10ರೂ.ರವರೆಗೂ ಪಡೆಯಬೇಕು ಎಂಬುದು ನನ್ನ ಆಶಯ. ಪಕ್ಷದ ಹಿರಿಯರು, ಸಾಮಾನ್ಯ ಕಾರ್ಯಕರ್ತರ, ಅಭಿಮಾನಿಗಳ ಬೆವರಿನ ಹನಿಯ ಒಂದು ರೂಪಾಯಿ ಕಾಂಗ್ರೆಸ್ ಭವನಕ್ಕೆ ವಿನಿಯೋಗವಾಗಬೇಕು ಎಂಬುದು ನನ್ನ ಆಶಯ.
-ಎಸ್.ಜಿ. ನಂಜಯ್ಯನಮಠ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ
-ವಿಶೇಷ ವರದಿ