ಶಹಾಬಾದ: ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸುವ ಸಲುವಾಗಿ ಸ್ವಯಂ ಪ್ರೇರಿತವಾಗಿ ಪ್ರತಿಫಲಾಪೇಕ್ಷೆ ಇಲ್ಲದೇ ರಕ್ತ ನೀಡಿದರೆ ಅದು ದಾನ ಎನಿಸಿಕೊಳ್ಳುತ್ತದೆ ಎಂದು ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು ಹೇಳಿದರು.
ತೊನಸನಳ್ಳಿ (ಎಸ್) ಗ್ರಾಮದ ಸಂಗಮೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವ ಹಾಗೂ ಪೀಠಾಧಿಪತಿ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ 9ನೇ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಉಚಿತ ರಕ್ತದಾನ ಶಿಬಿರದಲ್ಲಿ ಸ್ವಾಮೀಜಿ ಮಾತನಾಡಿದರು.
ಜೀವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿರುವವ ಉಳಿವಿಗಾಗಿ ರಕ್ತ ದಾನ ಮಾಡಬೇಕು. ವಿದ್ಯಾದಾನದಂತೆ ರಕ್ತದಾನ ಸಹ ಶ್ರೇಷ್ಠವಾದುದು. ನಶ್ವರವಾಗಿರುವ ದೇಹ ಗಾಳಿಯಲ್ಲಿಟ್ಟ ದೀಪದಂತೆ. ಇದನ್ನು ಸರಿಯಾದ ರೀತಿಯಲ್ಲೆ ಸವೆಸಿದ್ದೇ ಆದರೆ ದೇಹಕ್ಕೆ ಹಾಗೂ ಸಾವಿಗೆ ಅರ್ಥ ಬರುತ್ತದೆ.
ಅಶಾಶ್ವತವಾದ ದೇಹ ಮಣ್ಣಲ್ಲಿ ಮಣ್ಣಾಗುವ ಬದಲು ಇನ್ನೊಬ್ಬರ ಬಾಳಲ್ಲಿ ಬೆಳಕಾಗಬೇಕು. ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನು ಪರಸ್ಪರ ಸಹಾಯ ಗುಣ ಹೊಂದಿದಲ್ಲಿ ಉನ್ನತ ಮಟ್ಟದ ಬದುಕು ನಿರೀಕ್ಷಿಸಲು ಸಾಧ್ಯ ಎಂದು ಹೇಳಿದರು. ಪಾಳಾದ ಗುರುಮೂರ್ತಿ ಶಿವಾಚಾರ್ಯರು ಮಾತನಾಡಿ, ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದೆ.
ರಕ್ತದಾನದಿಂದ ಇನ್ನೊಂದು ಜೀವ ಉಳಿಸಬಹುದಾಗಿದೆ. ಜಗತ್ತಿನಲ್ಲಿ ಎಲ್ಲವನ್ನು ಕಾರ್ಖಾನೆಗಳಲ್ಲಿ ಉತ್ಪಾದನೆ ಮಾಡಬಹುದು. ಆದರೆ ರಕ್ತವನ್ನು ಉತ್ಪಾದನೆ ಮಾಡಲು ಸಾಧ್ಯವಿಲ್ಲ, ರಕ್ತವನ್ನು ದಾನದಿಂದ ಪಡೆಯಬೇಕು ಎಂದು ಹೇಳಿದರು.
ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಸ್ಟೇಷನ್ ಬಬಲಾದನ ಸಿದ್ದೇಶ್ವರ ಶಿವಾಚಾರ್ಯರು, ಕೊಟ್ಟೂರೇಶ್ವರ ಶರಣು ಪ್ರಥಮವಾಗಿ ರಕ್ತದಾನ ಮಾಡಿದರು. ವಿನೋದ ಪಾಟೀಲ, ಶ್ರೀನಿವಾಸ ಸರಡಗಿ ಕಾರ್ಯಕ್ರಮ ಉದ್ಘಾಟಿಸಿದರು.
ಅನಿಲ ಮರಗೋಳ, ವಿಷ್ಣು ಬಡಗಾರ, ಸಿದ್ದರಾಜ ಬಿರಾದಾರ, ಬುದ್ದುಗೌಡ ದರ್ಶನಾಪುರ, ನಿಂಗಣ್ಣಗೌಡ ಮಾಲಿಪಾಟೀಲ, ಲ್ಲಿಕಾರ್ಜುನ ಗೊಳೇದ, ಅಯ್ಯಣ್ಣ ಮಾಸ್ತರ ಬಂದಳ್ಳಿ, ಉಸ್ಮಾನ್, ಶರಣು, ಸಂತೋಷ ಕುಲಕರ್ಣಿ, ಶ್ರೀಶೈಲ, ಸುರೇಶ, ಸಂಗಮೇಶ ರಾಮಶೆಟ್ಟಿ ಇದ್ದರು. ಮಹಿಳೆಯರು ಸೇರಿದಂತೆ 85ಕ್ಕೂ ಹೆಚ್ಚು ಜನ ತಮ್ಮ ರಕ್ತ ದಾನ ಮಾಡಿದರು.