ಮುದಗಲ್ಲ: ಮಸ್ಕಿ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ತುರ್ವಿಹಾಳ ಅವರಿಗೆ ಪ್ರಚಾರ ವೇಳೆ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ದೇಣಿಗೆ ನೀಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ತಲೇಖಾನ ಗ್ರಾಮದಲ್ಲಿ ಯುವಕರು, ಗ್ರಾಮದ ಮುಖಂಡರು ಸೇರಿ 25 ಸಾವಿರ ರೂ. ನೀಡಿದರೆ, ಮ್ಯಾದರಾಳ ಗ್ರಾಮದಲ್ಲಿ ಗ್ರಾಮಸ್ಥರು 21 ಸಾವಿರ ಹಾಗೂ ಬೈಲಗುಡ್ಡ ಗ್ರಾಮದಲ್ಲಿ 10 ಸಾವಿರ ರೂ. ನಗದು ರೂಪದಲ್ಲಿ ನೀಡಿದರು.
ದೇಣಿಗೆ ಸ್ವೀಕರಿಸಿ ಮಾತನಾಡಿದ ಆರ್. ಬಸನಗೌಡ ತುರ್ವಿಹಾಳ, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ದುಡ್ಡು ಕೊಟ್ಟು ಓಟು ಪಡದರೆ ನನಗೆ ಜನರೇ ಹಣ ನೀಡುವ ಮೂಲಕ ಓಟು ಕೊಡುವ ಭರವಸೆ ನೀಡುತ್ತಿದ್ದಾರೆ. ಇದನ್ನೇ ಬಿಜೆಪಿಯವರು ಬಸನಗೌಡ ಜನರಿಗೆ ದುಡ್ಡು ನೀಡಿ ದೇಣಿಗೆ ಎಂದು ಸ್ವೀಕರಿಸುತ್ತಿದ್ದಾರೆಂದು ಬಡಬಡಾಯಿಸುತ್ತಿದ್ದಾರೆ. ಅವರಿಗೆ ಮತದಾರರೇ ಮೇ 2ರಂದು ಉತ್ತರ ಕೊಡಲಿದ್ದಾರೆ ಎಂದರು.
ಮತದಾರರ ಋಣ ತೀರಿಸಲು ಏಳು ಜನ್ಮವಿದ್ದರೂ ಸಾಲದು. ನಾನು ಅವರ ಪಾದದ ಧೂಳಿಗೆ ಸಮನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು. ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ನಾಪುರ ಮಾತನಾಡಿ, ವಿಧಾನಸಭೆ ಉಪ ಚುನಾವಣೆಗಳಲ್ಲಿ ಜನರು ಈ ರೀತಿಯಾಗಿ ದುಡ್ಡು ನೀಡುತ್ತಿರುವುದು ನಾನು ನೋಡಿಯೇ ಇಲ್ಲ. ಪ್ರತಾಪಗೌಡರ ಆಡಳಿತದಿಂದ ಜನ ರೋಸಿ ಹೋಗಿ ಈ ರೀತಿಯ ದೇಣಿಗೆ ನೀಡುತ್ತಿದ್ದಾರೆ ಎಂದರು. ಈ ವೇಳೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ
ಪಾಟೀಲ್, ಸಿದ್ದನಗೌಡ ಹೂವಿನಬಾವಿ, ಪಾಮಯ್ಯ ಮುರಾರಿ, ತಾಪಂ ಅಧ್ಯಕ್ಷ ಶಿವಣ್ಣ ನಾಯಕ ಸೇರಿದಂತೆ ಇತರರು ಇದ್ದರು.