ಪಡುಬಿದ್ರಿ: ಶಾಂತಿ ಸೌಹಾರ್ದತೆಯ ಸಂಕೇತವಾಗಿರುವ ರಮ್ಜಾನ್ ತಿಂಗಳಲ್ಲಿ ದಾನಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಈ ತಿಂಗಳಲ್ಲಿ ಆಚರಿಸುವ ಉಪವಾಸದಿಂದ ಹೃದಯ ಶುದ್ದೀಕರ ಣಕ್ಕೂ ಅದು ಸಹಕಾರಿಯಾಗುತ್ತದೆ ಎಂದು ಕನ್ನಂಗಾರ್ ಮುಹಿಸ್ಸುನ್ನ ದರ್ಸ್ ವಿದ್ಯಾರ್ಥಿ ಶರೀಫ್ ಚಾರ್ಮಾಡಿ ಹೇಳಿದರು.
ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಮೇ 19ರಂದು ಸಾಯಿ ಆರ್ಕೆಡ್‌ನಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿ. ಪಂ. ಸದಸ್ಯ ಶಶಿಕಾಂತ್ ಪಡು ಬಿದ್ರಿ ಮಾತನಾಡಿ, ಪ್ರತಿಯೊಂದು ಧರ್ಮದ ಹಬ್ಬಗಳನ್ನು ಎಲ್ಲರೂ ಕೂಡಿ ಆಚರಿಸಿದಾಗ ಸಮಾಜದಲ್ಲಿ ಶಾಂತಿ,
ಸೌಹಾರ್ದತೆಯಿಂದ ಬದುಕಲು ಸಾಧ್ಯ ಎಂದರು.
ಕೆಪಿಸಿಸಿ ಸಂಯೋಜಕ ನವೀನ್‌ಚಂದ್ರ ಜೆ. ಶೆಟ್ಟಿ ಮಾತನಾಡಿ, ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳಲ್ಲಿ ರಮ್ಜಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಕಡ್ಡಾಯ. ಅಲ್ಲದೆ ದಾನ ಧರ್ಮ ನೀಡುವುದಕ್ಕೂ ಇಲ್ಲಿ ಪ್ರೋತ್ಸಾಹ ನೀಡಲಾಗಿದೆ. ಇದರಿಂದ ಬಡವರ ಹಸಿವು ಏನೆಂಬುವುದನ್ನುತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಗಣೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಹಿಮಾಯತುಲ್ ಇಸ್ಲಾಂ ಸಂಘದ ಸಂಚಾಲಕ ಶಬ್ಬೀರ್ ಹುಸೇನ್, ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ರಿಯಾಝ್ ಮುದರಂಗಡಿ ಉಪಸ್ಥಿತರಿದ್ದರು.
ಅಧ್ಯಕ್ಷ ಗಣೇಶ್ ಆಚಾರ್ಯ ಸ್ವಾಗತಿಸಿದರು. ಪತ್ರಕರ್ತ ಅಬ್ದುಲ್ ಹಮೀದ್ ನಿರೂಪಿಸಿದರು. ಕಾರ್ಯದರ್ಶಿ ಸುಧಾಕರ ಕೆ. ವಂದಿಸಿದರು.