Advertisement

ಖಾಸಗಿ ಶಾಲೆಗಳಲ್ಲಿ ಡೋನೇಶನ್‌: ಖಂಡನೆ

11:33 AM Jun 20, 2019 | Team Udayavani |

ಕುಷ್ಟಗಿ: ಖಾಸಗಿ ಶಾಲೆಗಳಲ್ಲಿ ಡೋನೇಶನ್‌ ಸುಲಿಗೆ ಖಂಡಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಇಲ್ಲಿನ ಬಿಇಒ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಇಲ್ಲಿನ ಕಾರ್ಗಿಲ್ ವೃತ್ತದಿಂದ ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಕರವೇ ಸ್ವಾಭಿಮಾನಿ ಬಣ, ರೈತ ಸಂಘಗಳ ಸಹಯೋಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ನಂತರ ಬಿಇಒ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು, ಸರ್ಕಾರ ನಿಗದಿ ಪಡಿಸಿದ ಶುಲ್ಕದ ಹೊರತಾಗಿಯೂ ಹೆಚ್ಚುವರಿ ವಸೂಲಿ ಮಾಡುತ್ತಿದ್ದಾರೆ. ಪಟ್ಟಣದ ವಿವಿಧ ಖಾಸಗಿ ಶಾಲೆಗಳಲ್ಲಿ ಸರ್ಕಾರಿ ಶುಲ್ಕ ನೀತಿ ಉಲ್ಲಂಘಿಸಿ ಹೆಚ್ಚುವರಿ ಡೋನೇಶನ್‌ ವಸೂಲಿಗೆ ಸಾಕ್ಷಿಯಾಗಿ ವೀಡಿಯೋ ಮಾಡಿರುವುದನ್ನು ಬಿಇಒ ಅವರಿಗೆ ಪ್ರದರ್ಶಿಸಿದರೂ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೇ ಇರುವುದಕ್ಕೆ ರಾಜೀನಾಮೆಗೆ ಒತ್ತಾಯಿಸಿದರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ದೇವರಾಜ್‌ ಹಜಾಳ ಮಾತನಾಡಿ, ಜೂ. 18ರಂದು ಪಟ್ಟಣದ ವಿವಿಧ ಖಾಸಗಿ ಶಾಲೆಗಳಲ್ಲಿ ಪಾಲಕರಿಂದ ಡೋನೇಶನ್‌ ವಸೂಲಿ ಮಾಡಿದ ವೀಡಿಯೋ ಸಾಕ್ಷಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ನಜೀರಸಾಬ್‌ ಮೂಲಿಮನಿ ಮಾತನಾಡಿ, ಶೈಕ್ಷಣಿಕವಾಗಿ ಖಾಸಗಿ ಶಾಲೆಗಳು ಆರಂಭಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ ಸರ್ಕಾರ ನಿಯಮ ಉಲ್ಲಂಘಿಸಿದರೆ ನಮ್ಮ ವಿರೋಧವಿದೆ ಎಂದರು.

ಮನವಿ ಸ್ವೀಕರಿಸಿದ ಬಿಇಒ ಚನ್ನಬಸಪ್ಪ ಮಗ್ಗದ್‌ ಅವರು, ಸರ್ಕಾರದ ನಿಗದಿತ ಶುಲ್ಕ ಬದಲಿಗೆ ಹೆಚ್ಚುವರಿ ಶುಲ್ಕದ ರಶೀದಿ ನೀಡಿದರೆ ಆ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಶಾಲೆಗಳ ಶಾಲಾ ವಾರು ಶುಲ್ಕ ಪ್ರತ್ಯೇಕವಾಗಿದ್ದು ಏಕರೂಪವಾಗಿಲ್ಲ. ಲೆಕ್ಕ ಪರಿಶೋಧನಾ ವರದಿಯಾನುಸಾರ ಶುಲ್ಕ ನಿಗದಿಯಾಗಿರುತ್ತದೆ. ಹೆಚ್ಚವರಿ ಹಣ ತೆಗೆದುಕೊಂಡಿದ್ದರೆ ಪಾಲಕರಿಗೆ ವಾಪಾಸ್‌ ದೊರಕಿಸಿಕೊಡುವ ಜವಾಬ್ದಾರಿ ನಮ್ಮದು. ಸಂಘಟನೆಗಳು ದೂರು ನೀಡಿರುವ ಶಾಲೆಗಳಿಗೆ ನೋಟಿಸ್‌ ನೀಡಲಾಗುವುದು ಎಂದರು.

Advertisement

ರೈತ ಸಂಘದ ಮಹಿಳಾ ಘಟಕದ ಮಹಾಂತಮ್ಮ ಪಾಟೀಲ, ಮಾರುತಿ ನಾಯಕ್‌, ಮುರಳೀಧರ, ಸಂಚಾಲಕ ತೊಂಡೆಪ್ಪ ಚೂರಿ, ರಾಘವೇಂದ್ರ ದಾಸ್‌, ಮನೋಜ್‌ ಪಟ್ಟಣಶೆಟ್ಟರ, ಪ್ರಕಾಶ ತಾಳಕೇರಿ, ಹುಲಗಪ್ಪ ಚೂರಿ, ಹನುಮೇಶ ಬೂತಬಿಲ್ಲಿ, ರಾಘವೇಂದ್ರ, ರಫಿ ಬಂಗಾಳಿಮ ಅಡಿವೆಪ್ಪ ನಾಯಕ್‌, ಮುತ್ತುರಾಜ್‌, ರಾಜಶೇಖರ, ನವೀನ್‌ ಕಲಾಲ್ ಇತರರಿದ್ದರು.

ಸರ್ಕಾರ ನಿಗದಿಪಡಿಸಿ ಶುಲ್ಕ ವಸೂಲಿ ಮಾಡಬೇಕು. ಶುಲ್ಕದ ಮಾಹಿತಿಯನ್ನು ಶಾಲೆಯ ನೋಟಿಸ್‌ ಬೋರ್ಡ್‌ನಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಹೆಚ್ಚುವರಿ ಡೋನೇಶನ್‌ ವಸೂಲಿ ಮಾಡಿದರೆ ಶಾಲೆಯ ನವೀಕರಣ, ಶಾಲೆಯ ನೋಂದಣಿ ರದ್ದತಿಗೆ ಮೇಲಾಧಿಕಾರಿಗೆ ಪತ್ರ ಬರೆಯುವೆ. ಈ ಪ್ರಕರಣದಿಂದಾದರೂ ಖಾಸಗಿ ಶಾಲೆಗಳು ಮುಚ್ಚಿದರೆ ಆಗುವ ಮೊದಲ ಸಂತೋಷ ನನಗೆ • ಚನ್ನಬಸಪ್ಪ ಮಗ್ಗದ್‌, ಬಿಇಒ ಕುಷ್ಟಗಿ
Advertisement

Udayavani is now on Telegram. Click here to join our channel and stay updated with the latest news.

Next