Advertisement

ಪ್ಲಾಸ್ಮಾ ದಾನ ಮಾಡಿ; ಸೋಂಕಿತರ ಜೀವ ಉಳಿಸಿ

02:37 PM Apr 29, 2021 | Team Udayavani |

ಮಂಡ್ಯ: ಕೋವಿಡ್ ಸೋಂಕಿನ 2ನೇ ಅಲೆ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಸೋಂಕಿನಿಂದ ಮೃತರ ಸಂಖ್ಯೆಯೂ ಹೆಚ್ಚುತ್ತಿದೆ. ತೀರಾ ಅಗತ್ಯ ಎನಿಸುವ ಸೋಂಕಿತರಿಗೆ ಪ್ಲಾಸ್ಮಾ ಅಗತ್ಯವಾಗಿದೆ. ಐಸಿಯು, ವೆಂಟಿಲೇಟರ್‌ನಲ್ಲಿರುವ ಸೋಂಕಿತರಿಗೆ ಪ್ಲಾಸ್ಮಾ ಅವಶ್ಯಕ.

Advertisement

ಕಳೆದ ವರ್ಷ ಕೊರೊನಾದಿಂದ ಮೃತಪಡುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ಲಾಸ್ಮಾ ಸಂಗ್ರಹಿಸಲು ಕ್ರಮ ಕೈಗೊಂಡಿತ್ತು. ಆದರೆ ಈ ಬಾರಿ ಹೆಚ್ಚಿನ ಸಾವಿನ ಪ್ರಕರಣ ದಾಖಲಾಗುತ್ತಿವೆ. ಜಿಲ್ಲೆಯಲ್ಲಿ ಸುಮಾರು 14 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಸೋಂಕಿತ ಕೆಲವರು ವೆಂಟಿಲೇಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಪ್ಲಾಸ್ಮಾ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ಸೋಂಕನ್ನು ಗುಣಪಡಿಸಬಹುದಾಗಿದೆ.

ಬೇಡಿಕೆ: ಮಿಮ್ಸ್‌ ರಕ್ತನಿಧಿ ಕೇಂದ್ರಕ್ಕೆ ಪ್ಲಾಸ್ಮಾ ಗಾಗಿ ಬೇಡಿಕೆ ಹೆಚ್ಚಿದೆ. ಪ್ರತಿದಿನ ಸುಮಾರು 20 ಫೋನ್‌ ಬರುತ್ತಿವೆ. ನಮ್ಮ ಜಿಲ್ಲೆ ಅಲ್ಲದೆ, ಬೇರೆ ಜಿಲ್ಲೆಗ ಳಿಂದಲೂ ಬೇಡಿಕೆ ಹೆಚ್ಚಾಗಿದೆ. ಆದರೆ, ಪ್ಲಾಸ್ಮಾ ಸಂಗ್ರಹವಿಲ್ಲದ ಕಾರಣ ಒದಗಿಸಲು ಸಾಧ್ಯ ವಾಗುತ್ತಿಲ್ಲ.

220 ಮಂದಿಗೆ ಪ್ಲಾಸ್ಮಾ: ಇದುವರೆಗೆ ಮಂಡ್ಯ ಮಿಮ್ಸ್‌ನ ರಕ್ತನಿಧಿ ಕೇಂದ್ರದಿಂದ 220 ಮಂದಿಗೆ ಪ್ಲಾಸ್ಮಾ ನೀಡಲಾಗಿದೆ. ಇದುವರೆಗೂ 110 ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಒಂದು ಪ್ಲಾಸ್ಮಾದಿಂದ ಇಬ್ಬರಿಗೆ ನೀಡಬಹುದಾಗಿದೆ.

ಪ್ಲಾಸ್ಮಾ ಸಂಗ್ರಹಿಸಲು ಸೌಲಭ್ಯ: ಮಿಮ್ಸ್‌ನಲ್ಲಿ ಪ್ಲಾಸ್ಮಾಸಂಗ್ರಹಕ್ಕೆ ಸಕಲ ಸೌಲಭ್ಯವಿದೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಈ ಸೌಲಭ್ಯವಿಲ್ಲ. ಕೊರೊನಾದಿಂದ ಗುಣಮುಖರಾದವರು 15 ದಿನಗಳ ನಂತರ ಬಂದು ಪ್ಲಾಸ್ಮಾ ನೀಡಿದರೆ, ಜೀವ ಉಳಿಸಬಹುದಾಗಿದೆ.

Advertisement

ಪ್ಲಾಸ್ಮಾ ದಾನಕ್ಕೆ ಹಿಂದೇಟು: 2ನೇ ಅಲೆ ತೀವ್ರವಾಗುತ್ತಿರುವುದರಿಂದ ಪ್ಲಾಸ್ಮಾ ಸಂಗ್ರಹಕ್ಕೆ ಹಿನ್ನೆಡೆಯಾಗಿದೆ. ಕೊರೊನಾದಿಂದ ಚೇತರಿಸಿಕೊಂಡಿರುವ ಯಾರೂ ಪ್ಲಾಸ್ಮಾ ದಾನಕ್ಕೆ ಮುಂದಾಗುತ್ತಿಲ್ಲ. ಚಿಕಿತ್ಸೆ ಪಡೆದು ಗುಣಮುಖರಾದವರಿಗೆ 15 ದಿನಗಳನಂತರ ಬಂದು ಪ್ಲಾಸ್ಮಾ ದಾನ ಮಾಡುವಂತೆ ಮನವಿ ಮಾಡಿದರೂ ಮುಂದೆ ಬರುತ್ತಿಲ್ಲ.

15 ದಿನಗಳ ನಂತರ ರೋಗ ನಿರೋಧಕ ಶಕ್ತಿ

ಕೊರೊನಾ ಸೋಂಕಿನಿಂದ ಐಸಿಯು,ವೆಂಟಿಲೇಟರ್‌ಗಳಲ್ಲಿ ಚಿಕಿತ್ಸೆ ಪಡೆಯುವವರಿಗೆ ಪ್ಲಾಸ್ಮಾ ನೀಡಿ ಜೀವ ಉಳಿಸಲು ಸಾಧ್ಯವಿದೆ. ಸಂಪೂರ್ಣ ವಾಗಿ ಆಗದಿದ್ದರೂ ಗುಣಪಡಿಸಲು ಪ್ರಯತ್ನಿಸಬಹುದು. ಕೊರೊನಾದಿಂದ ಗುಣಮುಖರಾದವರು 15 ದಿನಗಳ ನಂತರ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಅದರ ಆಧಾರದ ಮೇಲೆ ಅವರು ಪ್ಲಾಸ್ಮಾ ದಾನ ಮಾಡಬಹುದು.

 ಡಾ.ಮುರಳೀಧರ್‌,ರಕ್ತನಿಧಿ ಕೇಂದ್ರ, ಮಿಮ್ಸ್‌, ಮಂಡ್ಯ

 

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next