ನ್ಯೂಯಾರ್ಕ್ : ‘ನ್ಯೂಕ್ಲಿಯರ್ ಬಟನ್ ನನ್ನ ಟೇಬಲ್ ಮೇಲೆಯೇ ಇದೆ’ ಎಂದು ತನ್ನ ಹೊಸ ವರ್ಷದ ಸಂದೇಶದಲ್ಲಿ ಅಮೆರಿಕಕ್ಕೆ ಬೆದರಿಕೆ ಹಾಕಿದ್ದ ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗೆ ಖಡಕ್ ಉತ್ತರ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಹೆಚ್ಚು ದೊಡ್ಡದಾದ,ಹೆಚ್ಚು ಶಕ್ತಿಯತವಾದ ಮತ್ತು ಸರಿಯಾಗಿ ಕೆಲಸ ಮಾಡಬಲ್ಲ ನ್ಯೂಕ್ಲಿಯರ್ ಬಟನ್ ಇಟ್ಟುಕೊಳ್ಳಿ” ಎಂದು ವ್ಯಂಗ್ಯವಾಡಿದ್ದಾರೆ.
ಉತ್ತರ ಕೊರಿಯ ಸರ್ವಾಧಿಕಾರಿ ಕಿಮ್ ಅವರು ನಿನ್ನೆಯಷ್ಟೇ ತನ್ನ ದೇಶದ ವಿಜ್ಞಾನಿಗಳಿಗೆ ಅತ್ಯಂತ ದೊಡ್ಡ ಖಂಡಾಂತರ ಅಣು ಕ್ಷಿಪಣಿಯನ್ನು ನಿರ್ಮಿಸುವಂತೆ ಕೇಳಿಕೊಂಡಿದ್ದು ದೇಶದಲ್ಲಿನ ಸರ್ವಾಧಿಕಾರಿ ಆಡಳಿತೆಯ 70ನೇ ವರ್ಷಾಚರಣೆಯ ಸಂದರ್ಭದಲ್ಲಿ ಈ ವರ್ಷ ಸೆಪ್ಟಂಬರ್ ನಲ್ಲಿ ಅದನ್ನು ಬಳಕೆಗೆ ತರುವಂತೆ ಮಾಡಬೇಕೆಂದು ಕಟ್ಟಪ್ಪಣೆ ಮಾಡಿದ್ದರು.
ಆ ಹಿನ್ನೆಲೆಯಲ್ಲಿ ಟ್ರಂಪ್ ಟ್ವಿಟರ್ ಮೂಲಕ ಕಿಮ್‌ಗೆ ವ್ಯಂಗ್ಯದ ಉತ್ತರ ನೀಡಿ, “ನನ್ನ ಬಳಿ ಕೆಲಸ ಮಾಡಬಲ್ಲ ನ್ಯೂಕ್ಲಿಯರ್ ಬಟನ್ ಇದೆ’ ಎಂದು ಹೇಳಿದ್ದರು.
ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಉತ್ತರ ಕೊರಿಯ ಎಲ್ಲ ಅಂತಾರಾಷ್ಟ್ರೀಯ ಎಚ್ಚರಿಕೆಗಳನ್ನು ಕಡೆಗಣಿಸಿ ತನ್ನ ಆರನೇ ಮತ್ತು ಅತ್ಯಂತ ಪ್ರಬಲ ಅಣ್ವಸ್ತ್ರ ಪರೀಕ್ಷೆಯನ್ನು ಕೈಗೊಂಡಿತ್ತು.
ಈ ಪರೀಕ್ಷೆಯ ಬಳಿಕ ಉತ್ತರ ಕೊರಿಯ ತಾನಿನ್ನು ಅಮೆರಿಕ ಸಹಿತ ವಿಶ್ವದ ಯಾವ ಮೂಲೆಯನ್ನೂ ಗುರಿ ಇಟ್ಟು ದಾಳಿ ಮಾಡುವ ಖಂಡಾಂತರ ಅಣು ಕ್ಷಿಪಣಿಗಳ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡುವುದಾಗಿ ಬೆದರಿಕೆ ಹಾಕಿತ್ತು.