ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ “ಅಪಾಯಕಾರಿ ಮಾನಸಿಕ ಕಾಯಿಲೆ’ ಹೊಂದಿದ್ದಾರೆ ಮತ್ತು ಅಮೆರಿಕವನ್ನು ಮುನ್ನಡೆಸಲು ಟ್ರಂಪ್ ಅರ್ಹ ವ್ಯಕ್ತಿಯಲ್ಲ’… ಹೀಗೆ ಹೇಳಿರುವುದು ಬೇರಾರೂ ಅಲ್ಲ ಅಮೆರಿಕದ ಮನಶಾಸ್ತ್ರಜ್ಞರು!
ಅಮೆರಿಕದ ಯಾಲೆ ವಿಶ್ವವಿದ್ಯಾನಿಲಯದಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಇಂಥ ಅಭಿಪ್ರಾಯ ಕೇಳಿಬಂದಿದೆ. ಅಮೆರಿಕ ಅಧ್ಯಕ್ಷ ಒಬ್ಬ “ಭ್ರಮೆಯಲ್ಲಿರುವ ಮತ್ತು ಅನುಮಾನದ ವ್ಯಕ್ತಿ’ “ಅಪಾಯಕಾರಿ ಟ್ರಂಪ್’ ವರ ಮಾನಸಿಕ ಸ್ಥಿತಿಯಿಂದ ದೇಶಕ್ಕಾಗುವ ಅಪಾಯಗಳ ಬಗ್ಗೆ ಅಮೆರಿಕದ ನಾಗರಿಕರಿಗೆ ಎಚ್ಚರಿಕೆ ನೀಡುವುದು ನಮ್ಮ ನೈತಿಕ ಜವಾಬ್ದಾರಿ,’ ಎಂದು ಅಲ್ಲಿನ ಮಾನಸಿಕ ತಜ್ಞರು ಅಭಿಪ್ರಯಪಟ್ಟಿದ್ದಾರೆ.
ವಿಚಾರ ಸಂಕಿರಣದಲ್ಲಿ ಮಾತನಾಡಿದ ಮಾನಸಿಕ ಆರೋಗ್ಯ ಪ್ರಾಧ್ಯಾಪಕ ಮತ್ತು “ಡ್ನೂಟಿ ಟಿ ವಾರ್ನ್’ ಸಂಘಟನೆಯ ಸ್ಥಾಪಕ ಸದಸ್ಯರಾಗಿರುವ ಡಾ. ಜಾನ್ ಗಾಟ್ನìರ್ ಅವರು, “ಟ್ರಂಪ್ ಅಮೆರಿಕ ಅಧ್ಯಕ್ಷರಾಗಿರಲು ಮಾನಸಿಕವಾಗಿ ಅನರ್ಹರು. ಅವರು ಹೊಂದಿರುವ ಅಪಾಯಕಾರಿ ಮಾನಸಿಕ ಅಸ್ವಸ್ಥತೆ ಕುರಿತು ಜನರಿಗೆ ತಿಳಿಸುವುದು ನಮ್ಮ ನೈತಿಕ ಹೊಣೆ,’ ಎಂದಿದ್ದಾರೆ.
“ಒಬ್ಬ ಸುಳ್ಳುಗಾರ ಮತ್ತು ಸ್ವಾರ್ಥಿಯಾಗಿರುವುದಕ್ಕಿಂತಲೂ ಹೆಚ್ಚಾಗಿ ಟ್ರಂಪ್, ಭ್ರಮೆಯಲ್ಲೇ ಬದುಕುವ ಅನುಮಾನದ ವ್ಯಕ್ತಿಯಾಗಿದ್ದು, ತಮ್ಮ ಈ ಗುಣಗಳನ್ನು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅವರು ಪ್ರದರ್ಶಿಸಿದ್ದಾರೆ. ಇತಿಹಾಸದಲ್ಲೇ ಅತಿ ಹೆಚ್ಚು ಜನಬೆಂಬಲ ತಮಗಿದೆ ಎಂದು ಟ್ರಂಪ್ ಭಾವಿಸಿದ್ದರೆ ಅದು ಅವರ ಭ್ರಮೆ ಮಾತ್ರ,’ ಎಂದು ಗಾಟ್ನìರ್ ಹರಿಹಾಯ್ದಿದ್ದಾರೆ.
“ಶ್ರೇಷ್ಠ ಮಾನಸಿಕ ತಜ್ಞರು ಟ್ರಂಪ್ ಬಗ್ಗೆ ಅಭಿಪ್ರಾಯಪಟ್ಟಿರುವುದು ಸತ್ಯ. ಸಾರ್ವಜನಿಕರು ಇನ್ನು ಈ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಲು ಅಡ್ಡಿಯಿಲ್ಲ,’ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಡಾ. ಬ್ಯಾಂಡೈ ಲೀ ಅವರು ಹೇಳಿದ್ದಾರೆ.