Advertisement

ನಮಸ್ತೆ ಟ್ರಂಪ್‌ : ಇಂದಿನಿಂದ ಅಮೆರಿಕ ಅಧ್ಯಕ್ಷ ಟ್ರಂಪ್‌ ದ್ವಿದಿನ ಭಾರತ ಭೇಟಿ

10:06 AM Feb 25, 2020 | sudhir |

ಹೊಸದಿಲ್ಲಿ: ವಿಶ್ವದ ಗಮನ ಸೆಳೆದಿರುವ, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚೊಚ್ಚಲ ಭಾರತ ಭೇಟಿ ಸೋಮವಾರದಿಂದ ಆರಂಭವಾಗಲಿದೆ.

Advertisement

ಪ್ರವಾಸದ ವೇಳೆ ಟ್ರಂಪ್‌ ಅವರು ಅಹ್ಮದಾಬಾದ್‌, ದಿಲ್ಲಿ ಮತ್ತು ಆಗ್ರಾಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಇಲ್ಲೆಲ್ಲ ಬಿಗಿಭದ್ರತೆ ಏರ್ಪಡಿಸಲಾಗಿದೆ.

ಸಾಬರಮತಿಗೆ ಭೇಟಿ
ಟ್ರಂಪ್‌ ಅವರ ಸಾಬರಮತಿ ಆಶ್ರಮ ಭೇಟಿ ಖಚಿತ ವಾಗಿದೆ. ಅಹ್ಮದಾಬಾದ್‌ನಲ್ಲಿ ಬಂದಿಳಿದ ತತ್‌ಕ್ಷಣವೇ ಅವರು ಅಲ್ಲಿಗೆ ತೆರಳಲಿದ್ದು, ಅಲ್ಲಿಂದ ನಮಸ್ತೆ ಟ್ರಂಪ್‌ ಕಾರ್ಯಕ್ರಮಕ್ಕಾಗಿ ಮೊಟೇರಾ ಕ್ರೀಡಾಂಗಣದತ್ತ ರೋಡ್‌ ಶೋನಲ್ಲಿ ತೆರಳಲಿದ್ದಾರೆ. ಅವರ ಭೇಟಿ ಬಗ್ಗೆ ರವಿವಾರ ಸಂಜೆ ಅಧಿಕೃತ ಪ್ರಕಟನೆ ಹೊರಡಿಸಲಾಗಿದೆ.

ತಾಜ್‌ಮಹಲ್‌ ಮುಂದೆ ಫೋಟೋ
ಪ್ರವಾಸದ ಮೊದಲ ದಿನವೇ ಆಗ್ರಾಕ್ಕೆ ಭೇಟಿ ನೀಡಲಿರುವ ಟ್ರಂಪ್‌, ವಿಶ್ವದ 7 ಅದ್ಭುತಗಳಲ್ಲೊಂದಾದ ತಾಜ್‌ಮಹಲ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ತಮ್ಮ ಕುಟುಂಬದೊಂದಿಗೆ ಫೋಟೋ ಸೆಶನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ರೋಡ್‌ ಶೋ
ಅಹ್ಮದಾಬಾದ್‌ನ ವಿಮಾನ ನಿಲ್ದಾಣದಿಂದ ಮೊಟೇರಾ ಕ್ರಿಕೆಟ್‌ ಕ್ರೀಡಾಂಗಣದ ವರೆಗೆ 22 ಕಿ.ಮೀ.ಗಳ ರೋಡ್‌ ಶೋ ಆಯೋಜಿಸಲಾಗಿದ್ದು, ಇದರಲ್ಲಿ ಟ್ರಂಪ್‌ ಮತ್ತು ಮೋದಿ ಭಾಗವಹಿಸಲಿದ್ದಾರೆ. ರಸ್ತೆಯುದ್ದಕ್ಕೂ ದೇಶದ ನಾನಾ ಭಾಗಗಳ ಸಂಸ್ಕೃತಿಯನ್ನು ಪ್ರತಿನಿಧಿಸುವ 28 ವೇದಿಕೆಗಳನ್ನು ನಿರ್ಮಿಸಲಾಗಿದೆ.

Advertisement

ಪ್ರಮುಖ ರಾಜತಾಂತ್ರಿಕ, ವ್ಯಾಪಾರ ಒಪ್ಪಂದಗಳು
ಭಾರತ-ಅಮೆರಿಕ ನಡುವಣ ರಾಜತಾಂತ್ರಿಕ ಸಂಬಂಧಗಳು, ಪ್ರಾಂತೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ವಾಣಿಜ್ಯ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಭಯೋತ್ಪಾದನೆ ನಿಗ್ರಹ, ಇಂಧನ ಭದ್ರತೆ, ಧಾರ್ಮಿಕ ಸ್ವಾತಂತ್ರ್ಯ, ಅಫ್ಘಾನಿಸ್ಥಾನದಲ್ಲಿ ತಾಲಿಬಾನಿ ಉಗ್ರರ ಜತೆಗೆ ಶಾಂತಿ ಮಾತುಕತೆಗೆ ಉತ್ತೇಜನ, ಭಾರತ -ಪೆಸಿಫಿಕ್‌ ಪ್ರಾಂತ್ಯದ ಸದ್ಯದ ಪರಿಸ್ಥಿತಿ ಮತ್ತಿತರ ವಿಚಾರ ಗಳು ಚರ್ಚೆಗೆ ಬರಲಿವೆ. ಜತೆಗೆ ಬೌದ್ಧಿಕ ಆಸ್ತಿ ಹಕ್ಕುಗಳು, ವಾಣಿಜ್ಯ ಸಹಕಾರ, ಸ್ವದೇಶದಲ್ಲಿನ ಭದ್ರತೆ ಮುಂತಾದ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.

ಇವೆಲ್ಲದರ ಹೊರತಾಗಿ, ಅಮೆರಿಕದಿಂದ ಭಾರತವು ಕೊಳ್ಳಲು ಬಯಸಿರುವ 18 ಸಾವಿರ ಕೋಟಿ ರೂ. ಮೊತ್ತದ ಎಂಎಚ್‌ 60 ರೋಮಿಯೊ ಮಾದರಿಯ 24 ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದ ಮತ್ತು 5,700 ಕೋಟಿ ರೂ. ಮೊತ್ತದ ಎಎಚ್‌-64ಇ ಅಪಾಚೆ ಹೆಲಿಕಾಪ್ಟರ್‌ ಒಪ್ಪಂದವೂ ಅಂತಿಮ ರೂಪ ಪಡೆಯುವ ಸಾಧ್ಯತೆಗಳಿವೆ.

ಟ್ರಂಪ್‌ ಪ್ರವಾಸ ವಿವರ
ಮೊದಲ ದಿನ ಫೆ. 24
– ಬೆಳಗ್ಗೆ 11.40 – ಅಹ್ಮದಾಬಾದ್‌ನ ಸರ್ದಾರ್‌ ವಲ್ಲಭಭಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕುಟುಂಬದೊಂದಿಗೆ ಆಗಮನ.

– ಮ. 12.15  - ಸಾಬರ್‌ಮತಿ ಆಶ್ರಮಕ್ಕೆ ಭೇಟಿ, ಅಲ್ಲಿಂದ ಮೊಟೇರಾ ಕ್ರೀಡಾಂಗಣಕ್ಕೆ 22 ಕಿ.ಮೀ. ರೋಡ್‌ ಶೋ.

– ಮ. 1.05 – ನಮಸ್ತೆ ಟ್ರಂಪ್‌ ಕಾರ್ಯಕ್ರಮ
– ಸಂ. 5.15 – ತಾಜ್‌ಮಹಲ್‌ಗೆ ಭೇಟಿ
– ಸಂ. 6.45 – ದಿಲ್ಲಿ ಕಡೆಗೆ

ಎರಡನೇ ದಿನ ಫೆ. 25
– ಬೆ. 10.30  - ರಾಜ್‌ಘಾಟ್‌ನಲ್ಲಿ ಗಾಂಧೀಜಿ ಸಮಾಧಿಗೆ ನಮನ
– ಬೆ. 11.00 – ಪ್ರಧಾನಿ ಮೋದಿ ಜತೆ ಒಪ್ಪಂದಗಳಿಗೆ ಸಹಿ, ಪತ್ರಿಕಾಗೋಷ್ಠಿ
– ಸಂ. 7.30 – ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭೇಟಿ
– ರಾ. 10.00-ವಾಷಿಂಗ್ಟನ್‌ಗೆ ಪ್ರಯಾಣ

ಟ್ರಂಪ್‌ ಅವರ ಸ್ವಾಗತಕ್ಕೆ ಭಾರತ ಎದುರು ನೋಡುತ್ತಿದೆ. ಅವರೊಂದಿಗೆ ದಿನಗಳೆಯುವುದೇ ಒಂದು ಗೌರವ. ಅಹ್ಮದಾಬಾದ್‌ನಲ್ಲಿ ಜರಗಲಿರುವ ಐತಿಹಾಸಿಕ ಕಾರ್ಯಕ್ರಮದಿಂದ ಆ ಗೌರವ ಲಭಿಸಲಿದೆ.
– ನರೇಂದ್ರ ಮೋದಿ, ಭಾರತದ ಪ್ರಧಾನಿ

ಭಾರತದ ಭೇಟಿಗೆ ನಾನೂ ಕಾತರನಾಗಿದ್ದೇನೆ. ಅಲ್ಲಿ ನನ್ನ ಪರಮಾಪ್ತ ಗೆಳೆಯರಿದ್ದಾರೆ. ಅವರೆಲ್ಲರನ್ನೂ ಭೇಟಿ ಮಾಡುವ ಉತ್ಸಾಹ ನನ್ನಲ್ಲಿ ಮನೆಮಾಡಿದೆ.
– ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next