ವಾಷಿಂಗ್ಟನ್ : ಪಾಕಿಸ್ಥಾನ ಹಲವು ಉಗ್ರ ಸಮೂಹಗಳಿಗೆ ಆಸರೆ ನೀಡಿ ಅವುಗಳನ್ನು ಪೋಷಿಸುತ್ತಿರುವುದನ್ನು ಖಚಿತವಾಗಿ ನಿಲ್ಲಿಸಲೇಬೇಕು ಎಂಬ ಖಡಕ್ ಸಂದೇಶವನ್ನು ರವಾನಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ತಮ್ಮ ಕೆಲವು ಉನ್ನತ ರಾಜತಾಂತ್ರಿಕ ಹಾಗೂ ಮಿಲಿಟರಿ ಸಲಹೆಗಾರರನ್ನು ಇಸ್ಲಾಮಾಬಾದ್‌ಗೆ ಕಳುಹಿಸಲಿದ್ದಾರೆ.
ಇಸ್ಲಾಮಾಬಾದ್ ಅರಾಜಕತೆಯ ದಲ್ಲಾಳಿಗಳಿಗೆ (ಜಿಹಾದಿ ಭಯೋತ್ಪಾದಕರಿಗೆ) ಸಕಲ ರೀತಿಯ ನೆರವು, ಪ್ರೋತ್ಸಾಹ, ಪೋಷಣೆ ನೀಡುತ್ತಿರುವುದಕ್ಕೆ ಕೋಪಾವಿಷ್ಟರಾಗಿರುವ ಟ್ರಂಪ್, ಈ ತಿಂಗಳಾಂತ್ಯದಲ್ಲಿ ತಮ್ಮ ವಿದೇಶ ಸಚಿವ ರೆಕ್ಸ್ ಟಿಲರ್‌ಸನ್ ಅವರು ಪಾಕಿಸ್ಥಾನಕ್ಕೆ ಕಳುಹಿಸಲಿದ್ದಾರೆ.
ಟಿಲರ್‌ಸನ್ ಅವರನ್ನು ಅನುಸರಿಸಿ ಅಮೆರಿಕದ ರಕ್ಷಣಾ ಸಚಿವ ಜಿಮ್ ಮ್ಯಾಟಿಸ್ ಅವರು ಇಸ್ಲಾಮಾಬಾದ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅಮೆರಿಕ ಹಾಗೂ ಪಾಕ್ ಮೂಲಗಳು ತಿಳಿಸಿವೆ.
ಪಾಕ್ ಸರಕಾರ ಜಿಹಾದಿ ಸಮೂಹಗಳಿಗೆ (ಭಯೋತ್ಪಾದಕರಿಗೆ) ಬೆಂಬಲಿಸುವುದನ್ನು ಯಾವ ಬೆಲೆ ತೆತ್ತಾದರೂ ನಿಲ್ಲಿಸಲೆಬೇಕು ಎಂಬ ಅಧ್ಯಕ್ಷ ಟ್ರಂಪ್ ಅವರ ಖಡಕ್ ಸಂದೇಶವನ್ನು ಅಮೆರಿಕದ ಉನ್ನತ ಅಧಿಕಾರಿಗಳು ಇಸ್ಲಾಮಾಬಾದ್‌ಗೆ ತಲುಪಿಸಲಿದ್ದಾರೆ.
ನೂರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಪಾಕ್ ಅಣ್ವಸ್ತ್ರ ಗಳು ಉಗ್ರರ ಪಾಲಾಗುವ ಅಪಾಯವನ್ನು ಮುಂದಾಗಿ ಕಂಡಿರುವ ಅಮೆರಿಕ, ಪಾಕಿಸ್ಥಾನವನ್ನು ಸರಿದಾರಿಗೆ ತರುವ ವಿಷಯದಲ್ಲಿ ಅತ್ಯಂತ ಕಠಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.